ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, 2023ರ ಹಣಕಾಸು ವರ್ಷದಲ್ಲಿ ಕಾರ್ಪೊರೇಟ್ ವಲಯದಲ್ಲಿ ಶೇ.5.7ರಷ್ಟಿದ್ದ ಉದ್ಯೋಗದ ಬೆಳವಣಿಗೆಯು 2024ರ ಹಣಕಾಸು ವರ್ಷದಲ್ಲಿ ಶೇ.1.5ಕ್ಕೆ ಕುಸಿದಿದೆ ಎಂದು ಬ್ಯಾಂಕ್ ಆಫ್ ಬರೋಡ ಬಿಡುಗಡೆ ಮಾಡಿರುವ ವರದಿಯನ್ನು ಉಲ್ಲೇಖಿಸಿದ್ದಾರೆ.
‘ಇದು ಆರ್ಥಿಕ ವಲಯದಲ್ಲಿ ಬಿಜೆಪಿ ಸರ್ಕಾರದ ವೈಫಲ್ಯವನ್ನು ತೋರಿಸುವ ಮತ್ತೊಂದು ವರದಿಯಾಗಿದೆ. 2022–23ರ ಅವಧಿಯಲ್ಲಿ ದೇಶದಲ್ಲಿ ಒಟ್ಟು 2.43 ಲಕ್ಷ ಉದ್ಯೋಗಗಳು ಕಡಿತಗೊಂಡಿವೆ. ಅಲ್ಲದೆ, 375 ಕಂಪನಿಗಳಲ್ಲಿ ಭಾರಿ ಪ್ರಮಾಣದಲ್ಲಿ ಸಿಬ್ಬಂದಿ ಕಡಿತಗೊಳಿಸಲಾಗಿದೆ’ ಎಂದು ಅವರು ಹೇಳಿದ್ದಾರೆ.
‘ಪ್ರತಿ ವರ್ಷ ದೇಶದ ಜನರಿಗೆ ಎರಡು ಕೋಟಿ ಉದ್ಯೋಗ ನೀಡುವುದಾಗಿ ಮತ್ತು 80 ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಪೊಳ್ಳು ಮಾತುಗಳನ್ನಾಡುತ್ತಾರೆ. ವಾಸ್ತವ ಏನೆಂದರೆ, ದೇಶವು ಅಭೂತಪೂರ್ವ ನಿರುದ್ಯೋಗ ಬಿಕ್ಕಟ್ಟನ್ನು ಎದುರಿಸುತ್ತಿದೆ’ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
‘ಅತ್ಯಂತ ದುರದೃಷ್ಟಕರ ಸಂಗತಿಯೆಂದರೆ, ಸ್ವಯಂಘೋಷಿತ ದೇವರ ಅವತಾರವಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಈ ನಿರುದ್ಯೋಗ ಪರಿಸ್ಥಿತಿಯನ್ನು ನಿಭಾಯಿಸುವ ಮತ್ತು ಯುವಕರಿಗೆ ಉದ್ಯೋಗವನ್ನು ಒದಗಿಸುವ ಯಾವುದೇ ದೂರದೃಷ್ಟಿಯನ್ನು ಹೊಂದಿಲ್ಲ’ ಎಂದು ಅವರು ಟೀಕಿಸಿದ್ದಾರೆ.
ದೇಶದ ಆರ್ಥಿಕತೆಯನ್ನು ನಿಭಾಯಿಸುತ್ತಿರುವ ಕುರಿತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ದೇಶದಲ್ಲಿ ಏರಿಕೆಯಾಗುತ್ತಿರುವ ನಿರುದ್ಯೋಗ ಮತ್ತು ಬೆಲೆ ಏರಿಕೆ ಸಮಸ್ಯೆಗಳ ಕುರಿತು ಕಳವಳ ವ್ಯಕ್ತಪಡಿಸಿದೆ.