ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಜನ್ಮತಃ ಒಬಿಸಿ ವರ್ಗದವರಲ್ಲ: ರಾಹುಲ್‌ ಗಾಂಧಿ ಆರೋಪ

Published 8 ಫೆಬ್ರುವರಿ 2024, 7:30 IST
Last Updated 8 ಫೆಬ್ರುವರಿ 2024, 7:30 IST
ಅಕ್ಷರ ಗಾತ್ರ

ಜಾರ್ಸುಗುಡ (ಒಡಿಶಾ): ‘ಇತರ ಹಿಂದುಳಿದ ವರ್ಗದ (ಒಬಿಸಿ) ಕುಟುಂಬದಲ್ಲಿ ಜನಿಸದ ಪ್ರಧಾನಿ ನರೇಂದ್ರ ಮೋದಿ ಅವರು, ತಮ್ಮನ್ನು ತಾವು ಒಬಿಸಿ ಎಂದು ಗುರುತಿಸಿಕೊಳ್ಳುವ ಮೂಲಕ ಜನರ ದಿಕ್ಕು ತಪ್ಪಿಸುತ್ತಿದ್ದಾರೆ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಗುರುವಾರ ಆರೋಪ ಮಾಡಿದರು.

ಒಡಿಶಾದಲ್ಲಿ ‘ಭಾರತ್‌ ಜೋಡೊ ನ್ಯಾಯ ಯಾತ್ರೆ’ಯ ಮೂರನೇ ದಿನ ಮಾತನಾಡಿದ ಅವರು, ‘ಮೋದಿ ಅವರು ಸಾಮಾನ್ಯ ವರ್ಗದ ಕುಟುಂಬದಲ್ಲಿ ಜನಿಸಿದ್ದಾರೆ’ ಎಂದರು.

‘ಮೋದಿ ಅವರು ‘ಘಾಂಚಿ’ ಜಾತಿಗೆ ಸೇರಿದವರು. ಗುಜರಾತ್‌ನಲ್ಲಿ 2000ದಲ್ಲಿ ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಈ ಜಾತಿಯನ್ನು ಒಬಿಸಿ ಪಟ್ಟಿಗೆ ಸೇರಿಸಲಾಯಿತು. ಆಗ ಅಲ್ಲಿ ಸ್ವತಃ ಮೋದಿ ಅವರೇ ಮುಖ್ಯಮಂತ್ರಿ ಆಗಿದ್ದರು. ಅಂದರೆ, ಅವರೇ ತನ್ನ ಜಾತಿಯನ್ನು ಒಬಿಸಿಗೆ ಸೇರಿಸಿದ್ದಾರೆ. ಹೀಗಾಗಿ ಮೋದಿ ಅವರು ಹುಟ್ಟಿನಿಂದ ಒಬಿಸಿ ಅಲ್ಲ’ ಎಂದು ರಾಹುಲ್‌ ಪ್ರತಿಪಾದಿಸಿದರು.

ರಾಹುಲ್‌ ಅವರು ಇದಕ್ಕೂ ಮೊದಲು ತಮ್ಮ ಭಾಷಣದಲ್ಲಿ ಮೋದಿ ಅವರು ‘ತೇಲಿ’ ಜಾತಿಗೆ ಸೇರಿದವರು ಎಂದಿದ್ದರು. ಆದರೆ ಕೆಲ ಹೊತ್ತಿನಲ್ಲಿಯೇ ಅವರು ‘ಘಾಂಚಿ’ ಜಾತಿಗೆ ಸೇರಿದವರು ಎಂದು ಸ್ಪಷ್ಟಪಡಿಸಿದರು.

ಪ್ರಧಾನಿ ಜಾತಿಗಣತಿ ನಡೆಸಲ್ಲ: ‘ಪ್ರಧಾನಿ ಮೋದಿ ಅವರು ಎಂದಿಗೂ ದೇಶದಲ್ಲಿ ಜಾತಿಗಣತಿ ನಡೆಸುವುದಿಲ್ಲ. ಇದಿಲ್ಲದೆ ಸಾಮಾಜಿಕ ನ್ಯಾಯ ಸಾಧಿಸಲು ಆಗುವುದಿಲ್ಲ’ ಎಂದು ರಾಹುಲ್‌ ಹೇಳಿದರು.

ಕಾಂಗ್ರೆಸ್‌ ಪಕ್ಷ ಮಾತ್ರ ದೇಶದಲ್ಲಿ ಜಾತಿಗಣತಿ ನಡೆಸುವ ಬದ್ಧತೆ ಹೊಂದಿದೆ ಮತ್ತು ಈ ಮೂಲಕ ಸಾಮಾಜಿಕ ನ್ಯಾಯವನ್ನು ಖಚಿತಪಡಿಸುತ್ತದೆ ಎಂದರು.

ಒಡಿಶಾದಲ್ಲಿ 200 ಕಿ.ಮೀ ಕ್ರಮಿಸಿದ ಯಾತ್ರೆಯು ಪಕ್ಕದ ಛತ್ತೀಸಗಢ ರಾಜ್ಯ ಪ್ರವೇಶಿಸಿತು.

ಕೇಂದ್ರ ಸರ್ಕಾರ ದ್ವೇಷ ಹರಡುತ್ತಿದೆ: ರಾಹುಲ್‌ ಆರೋಪ

ರಾಯಗಢ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಅನ್ಯಾಯವನ್ನು ಉತ್ತೇಜಿಸುವ ದ್ವೇಷ ಮತ್ತು ಹಿಂಸಾಚಾರವನ್ನು ಹರಡುವ ಎರಡು ಅಂಶಗಳ ಕಾರ್ಯಕ್ರಮ ಹೊಂದಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಗುರುವಾರ ಆರೋಪಿಸಿದರು.

ಒಡಿಶಾದಿಂದ ಛತ್ತೀಸಗಢದ ರಾಯಗಢ ಜಿಲ್ಲೆಯ ರೆಂಗಲ್‌ಪಾಲಿ ಗ್ರಾಮವನ್ನು ಭಾರತ್‌ ಜೋಡೊ ನ್ಯಾಯ ಯಾತ್ರೆ ಪ್ರವೇಶಿಸಿತು. ಈ ವೇಳೆ ಗ್ರಾಮದಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ದೇಶದಲ್ಲಿ ಶೇ 50ರಷ್ಟು ಒಬಿಸಿ ವರ್ಗದವರು ಶೇ 15ರಷ್ಟು ದಲಿತರು ಮತ್ತು ಶೇ 8ರಷ್ಟು ಆದಿವಾಸಿಗಳು ಇದ್ದಾರೆ. ಅಂದರೆ ಈ ಶೇ 73ರಷ್ಟು ಜನಸಂಖ್ಯೆ ಮಾಧ್ಯಮಗಳಲ್ಲಿ ಧ್ವನಿ ಹೊಂದಿಲ್ಲ. ಪ್ರತಿಷ್ಠಿತ 200 ಕಾರ್ಪೊರೇಟ್‌ಗಳು ಪ್ರಧಾನ ಮಂತ್ರಿ ಕಚೇರಿ (ಪಿಎಂಒ) ಮತ್ತು 90 ಅಧಿಕಾರಿಗಳು... ಶೇ 73ರಷ್ಟು ಜನಸಂಖ್ಯೆಗೆ ಏನನ್ನೂ ಮಾಡುತ್ತಿಲ್ಲ’ ಎಂದು ರಾಹುಲ್‌ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT