ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಣಿಪುರ ಮುಖ್ಯಮಂತ್ರಿಯನ್ನು ವಜಾಗೊಳಿಸಿ: ಮಲ್ಲಿಕಾರ್ಜುನ ಖರ್ಗೆ ಆಗ್ರಹ

Published : 9 ಸೆಪ್ಟೆಂಬರ್ 2024, 11:47 IST
Last Updated : 9 ಸೆಪ್ಟೆಂಬರ್ 2024, 11:47 IST
ಫಾಲೋ ಮಾಡಿ
Comments

ನವದೆಹಲಿ: ಮಣಿಪುರದಲ್ಲಿ ಹಿಂಸಾಚಾರ ಮತ್ತೆ ಭುಗಿಲೆದ್ದಿರುವ ಬೆನ್ನಲ್ಲೇ ವಿರೋಧ ಪಕ್ಷವಾದ ಕಾಂಗ್ರೆಸ್‌ ಕಿಡಿಕಾರಿದ್ದು, ಮುಖ್ಯಮಂತ್ರಿ ಎನ್‌. ಬಿರೇನ್‌ ಸಿಂಗ್‌ ಅವರನ್ನು ಕೂಡಲೇ ವಜಾಗೊಳಿಸಿ, ರಾಜ್ಯದಲ್ಲಿ ಉಂಟಾಗಿರುವ ಸೂಕ್ಷ್ಮ ಭದ್ರತಾ ಪರಿಸ್ಥಿತಿಯ ಹೊಣೆಯನ್ನು ಕೇಂದ್ರ ಸರ್ಕಾರವೇ ಹೊರಬೇಕು ಎಂದು ಒತ್ತಾಯಿಸಿದೆ.

ಸುಪ್ರೀಂಕೋರ್ಟ್‌ ಆದೇಶದಂತೆ ‘ಮಣಿಪುರ ತನಿಖಾ ಆಯೋಗ’ವು ಹಿಂಸಾಚಾರಕ್ಕೆ ಕಾರಣವಾದ ವಿಚಾರಣೆಯನ್ನು ತ್ವರಿತಗೊಳಿಸಬೇಕು ಎಂದು ಈ ವೇಳೆ ಕಾಂಗ್ರೆಸ್‌ ಆಗ್ರಹಿಸಿದೆ.

‘ಮಣಿಪುರದ ಪರಿಸ್ಥಿತಿ ನಿಯಂತ್ರಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೀನಾಯವಾದ ವೈಫಲ್ಯವನ್ನು ಕ್ಷಮಿಸಲು ಅಸಾಧ್ಯ’ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು  ‘ಎಕ್ಸ್‌’ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ ಕುರಿತಂತೆ ಅಲ್ಲಿನ ಮಾಜಿ ರಾಜ್ಯಪಾಲೆ ಅನುಸೂಯ ಊಕೆಜಿ ಕೂಡ ಧ್ವನಿ ಎತ್ತಿದ್ದಾರೆ. ರಾಜ್ಯದಲ್ಲಿನ ಹಿಂಸೆಯಿಂದ ಜನರು ತುಂಬಾ ಶೋಕದಲ್ಲಿದ್ದು, ಪ್ರಧಾನಿ ನರೇಂದ್ರ ಮೋದಿ ಅಲ್ಲಿಗೆ ಭೇಟಿ ನೀಡಬೇಕು ಎಂದು ಬಯಸುತ್ತಿದ್ದಾರೆ’ ಎಂದು ಅವರ ಹೇಳಿಕೆಯನ್ನು ಖರ್ಗೆ ಅವರು ಉಲ್ಲೇಖಿಸಿದ್ದಾರೆ.

‘ಕಳೆದ 16 ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಒಂದು ಸೆಕೆಂಡ್ ಕೂಡ ಮಣಿಪುರದಲ್ಲಿ ಕಳೆದಿಲ್ಲ. ಹಿಂಸೆಯು ಮುಂದುವರಿದಿದ್ದು, ಮೋದಿ–ಶಾ ವೈಫಲ್ಯದಿಂದ ಜನರು ಪರಿತಪಿಸುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಮಣಿಪುರದಲ್ಲಿ ಬಿಜೆಪಿ ಮುಖ್ಯಮಂತ್ರಿ ಜವಾಬ್ದಾರಿ ನಿರ್ವಹಣೆಯ ವೈಫಲ್ಯದಲ್ಲಿ ದಾಖಲೆ ನಿರ್ಮಿಸಿದ್ದಾರೆ. ರಾಜ್ಯದ ಸಂಪೂರ್ಣ ಭದ್ರತಾ ಜವಾಬ್ದಾರಿಯನ್ನು ಕೇಂದ್ರ ಗೃಹ ಸಚಿವಾಲಯ, ರಾಜ್ಯ ಭದ್ರತಾ ಸಲಹೆಗಾರ ಹಾಗೂ ಭಾರತೀಯ ಸೇನೆ ವಹಿಸಿಕೊಂಡಿದೆ. ಪ್ರಧಾನಿ ಅವರಂತೆ, ಮಣಿಪುರದ ಜನತೆಗೆ ಭದ್ರತೆ ಒದಗಿಸುವುದು ಕೇಂದ್ರ ಗೃಹ ಸಚಿವರ ಹೊಣೆಗಾರಿಕೆಯಾಗಿದೆ. ಆದರೆ ಅವರು, ಚುನಾವಣಾ ರ‍್ಯಾಲಿಗಳಲ್ಲಿ ರಾಜಕೀಯ ಮಾಡುವುದರಲ್ಲಿ ಕಾರ್ಯನಿರತರಾಗಿದ್ದಾರೆ’ ಎಂದು ಖರ್ಗೆ ಕಿಡಿಕಾರಿದ್ದಾರೆ.

ಹಿಂಸಾಪೀಡಿತ ಮಣಿಪುರ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಏಕೆ ಭೇಟಿ ನೀಡುತ್ತಿಲ್ಲ ಎಂದು ಅಲ್ಲಿನ ಜನರು ಪ್ರಶ್ನೆ ಮಾಡುತ್ತಿದ್ದಾರೆ..?
ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT