ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೋದಿ ಹೇಳಿದ ‘ನೂಬ್‌’ ಯಾರು? ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆ

Published 13 ಏಪ್ರಿಲ್ 2024, 15:37 IST
Last Updated 13 ಏಪ್ರಿಲ್ 2024, 15:37 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ‘ಇ–ಗೇಮಿಂಗ್‌’ ಉದ್ಯಮದ ಗೇಮರ್‌ಗಳ ಜತೆ ಸಂವಾದ ನಡೆಸಿದರು. ಈ ಉದ್ಯಮದ ಮುಂದಿನ ಭವಿಷ್ಯ ಮತ್ತು ಸವಾಲುಗಳ ಕುರಿತು ಚರ್ಚಿಸಿದರು.

ಈ ವೇಳೆ ಭಾರತದ ಟಾಪ್‌ ಆನ್‌ಲೈನ್‌ ಗೇಮರ್‌ಗಳು, ಉದ್ಯಮದಲ್ಲಿನ ‘ನೂಬ್‌’ ಮತ್ತು ‘ಗ್ರೈಂಡ್‌’ ನಂತಹ ಕೆಲ ಪಾರಿಭಾಷಿಕ ಪದಗಳ ಕುರಿತು ಚರ್ಚಿಸಿದರು.

‘ನೂಬ್‌’ ಎಂಬುದು ಹೊಸಬ ಅಥವಾ ಆಟದಲ್ಲಿ ಹೆಚ್ಚು ಪರಿಣತಿ ಹೊಂದಿರದ ವ್ಯಕ್ತಿಯನ್ನು ಉಲ್ಲೇಖಿಸುತ್ತದೆ ಎಂದು ಗೇಮರ್‌ಗಳು ವಿವರಿಸಿದಾಗ, ಮೋದಿ ಅವರು ನಗುತ್ತಾ, ‘ಚುನಾವಣೆಯ ಸಮಯದಲ್ಲಿ ಈ ಪದವನ್ನು ನಾನು ಬಳಸಿದರೆ, ಯಾರನ್ನು ಉಲ್ಲೇಖಿಸಿದ್ದೇನೆ ಎಂದು ಜನರು ಆಶ್ಚರ್ಯ ಪಡುತ್ತಾರೆ. ನೀವು ಸಹ ನಿರ್ದಿಷ್ಟ ವ್ಯಕ್ತಿಯನ್ನು ಊಹಿಸುತ್ತೀರಿ’ ಎಂದು ಹೇಳಿದರು.

ಪ್ರಧಾನಿ ಅವರ ಈ ಹೇಳಿಕೆಯು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದ್ದು, ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷಗಳ ನಡುವೆ ವಾಕ್‌ ಸಮರಕ್ಕೆ ಕಾರಣವಾಗಿದೆ.

ಈ ವೇಳೆ ಮೋದಿ ಅವರು ಯಾರೊಬ್ಬರ ಹೆಸರನ್ನೂ ಉಲ್ಲೇಖಿಸಲಿಲ್ಲ. ಆದರೆ ಕಾಂಗ್ರೆಸ್‌ ನಾಯಕ ಪ್ರಮೋದ್‌ ತಿವಾರಿ ಅವರು ಈ ಹೇಳಿಕೆ ಬಗ್ಗೆ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ‘ಅವರು ನಿರ್ದಿಷ್ಟವಾಗಿ ಯಾರ ಬಗ್ಗೆ ಮಾತನಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಆದರೆ ಅವರು ವಿರೋಧ ಪಕ್ಷದ ಸದಸ್ಯರ ಬಗ್ಗೆಯೇ ಮಾತನಾಡಿದ್ದಾರೆ. ಉನ್ನತ ವಿಶ್ವವಿದ್ಯಾಲಯಗಳಲ್ಲಿ ಓದಿದವರ ಬಗ್ಗೆ ಮಾತನಾಡಿದ್ದಾರೆ. ಇದು ಚುನಾವಣೆ ಸಂದರ್ಭದಲ್ಲಿ ಬಿಜೆಪಿ ರಾಜಕೀಯ ತಂತ್ರಗಾರಿಕೆಯಾಗಿದ್ದು, ಅವರಿಗೆ ತಿರುಗುಬಾಣವಾಗುತ್ತದೆ’ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ. 

ಈ ಕುರಿತು ‘ಎಕ್ಸ್‌’ನಲ್ಲಿ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಶೆಹಜಾದ್‌ ಪೂನಾವಾಲ ಅವರು, ‘ಪ್ರಧಾನಿ ಅವರು ಯಾರ ಹೆಸರನ್ನೂ ಪ್ರಸ್ತಾಪಿಸದೇ ಇರುವಾಗ, ವಿರೋಧ ಪಕ್ಷದ ನಾಯಕರ ಪ್ರತಿಕ್ರಿಯೆಯು ರಾಜಕೀಯದಲ್ಲಿ ‘ನೂಬ್‌’ ಯಾರು ಎಂಬುದನ್ನು ಖಚಿತಪಡಿಸುತ್ತದೆ’ ಎಂದಿದ್ದಾರೆ.

ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮತ್ತು ನಟಿ ಕಂಗನಾ ರನೌತ್‌ ಅವರು, ಪ್ರಧಾನಿ ಮೋದಿ ಅವರು ಗೇಮರ್‌ಗಳೊಂದಿಗೆ ನಡೆಸಿದ ಸಂವಾದದ ಕ್ಲಿಪ್‌ ಅನ್ನು ಪೋಸ್ಟ್‌ ಮಾಡಿ, ‘ಯಾರು ಈ ನೂಬ್‌’ ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್‌ ಚುಘ್‌ ಅವರು, ವಿರೋಧ ಪಕ್ಷದಲ್ಲಿರುವ ದೊಡ್ಡ ‘ನೂಬ್‌’ ಯಾರೆಂಬುದು ಇಡೀ ದೇಶಕ್ಕೆ ಗೊತ್ತಿದೆ ಎಂದಿದ್ದಾರೆ. ಇದೆಲ್ಲದರ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ‘ನೂಬ್‌ ಯಾರು’? ಎಂದು ಕೇಳವ ಹಲವು ಮೀಮ್‌ಗಳನ್ನು ಹರಿದಾಡಿವೆ.

ಗೇಮರ್‌ಗಳಾದ ತೀರ್ಥ್‌ ಮೆಹ್ತಾ, ಅನಿಮೇಶ್‌ ಅಗರ್ವಾಲ್‌, ಅಂಶು ಬಿಶ್ತ್‌, ನಮನ್‌ ಮಾಥುರ್‌, ಮಿಥಿಲೇಶ್‌ ಪಾಟಂಕರ್‌, ಗಣೇಶ್‌ ಗಂಗಾಧರ್‌ ಮತ್ತು ಪಾಯಲ್‌ ಧಾರೆ ಅವರು ಪ್ರಧಾನಿ ಜತೆ ಅರ್ಧ ಗಂಟೆ ಸಂವಾದ ನಡೆಸಿದರು.

ಗೇಮಿಂಗ್‌ ಉದ್ಯಮದಲ್ಲಿನ ಹೊಸ ಬೆಳವಣಿಗೆಗಳ ಬಗ್ಗೆ ಈ ವೇಳೆ ಚರ್ಚೆ ನಡೆಯಿತು. ದೇಶದಲ್ಲಿ ಗೇಮಿಂಗ್‌ ಉದ್ಯಮವನ್ನು ಉತ್ತೇಜಿಸುವ ಮೂಲಕ ಗೇಮರ್‌ಗಳ ಸೃಜನಶೀಲತೆಯನ್ನು ಸರ್ಕಾರ ಹೇಗೆ ಗುರುತಿಸಿದೆ ಎಂಬುದನ್ನು ಪ್ರಧಾನಿ ಒತ್ತಿ ಹೇಳಿದರು. ಗೇಮಿಂಗ್‌ ಉದ್ಯಮದಲ್ಲಿ ಮಹಿಳೆಯರ ಭಾಗವಹಿಸುವಿಕೆ ಮತ್ತು ಜೂಜಿನಿಂದ ಗೇಮಿಂಗ್‌ಗೆ ಎದುರಾಗುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT