ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮ ಜನ್ಮಭೂಮಿಗೆ ಟ್ರಸ್ಟ್ ರಚನೆ ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ

Last Updated 5 ಫೆಬ್ರುವರಿ 2020, 18:40 IST
ಅಕ್ಷರ ಗಾತ್ರ

ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಟ್ರಸ್ಟ್‌ ಅನ್ನು ರಚಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ ಬುಧವಾರ ಪ್ರಕಟಿಸಿದರು.

‘ಅಯೋಧ್ಯೆಯ ರಾಮ ಮಂದಿರದ ಅಭಿವೃದ್ಧಿಗೆ ನಾವು ಯೋಜನೆಯನ್ನು ಸಿದ್ಧಪಡಿಸಿದ್ದೇವೆ. ‘ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ’ ಎಂಬ ಹೆಸರಿನಲ್ಲಿ ಟ್ರಸ್ಟ್‌ ರಚಿಸಲಾಗಿದೆ’ ಎಂದು ಸಚಿವ ಸಂಪುಟ ಸಭೆಯ ನಂತರ ಅವರು ಘೋಷಿಸಿದರು.

ಸಂಪುಟ ಸಭೆಯಲ್ಲಿ ತೆಗೆದುಕೊಂಡ ಈ ಮಹತ್ವದ ನಿರ್ಧಾರವನ್ನು ಅಧಿವೇಶನ ನಡೆಯುತ್ತಿರುವುದರಿಂದ ಸದನದಲ್ಲಿ ಪ್ರಕಟಿಸಲಾಯಿತು.ದೆಹಲಿಯ ಗ್ರೇಟರ್‌ ಕೈಲಾಶ್‌ನಲ್ಲಿ ಟ್ರಸ್ಟ್‌ ಕಚೇರಿ ಇರಲಿದೆ ಎಂದು ಗೃಹ ಇಲಾಖೆ ಅಧಿಸೂಚನೆ ಹೊರಡಿಸಿದೆ.

ರಾಮಜನ್ಮಭೂಮಿ ಮತ್ತು ಬಾಬರಿ ಮಸೀದಿಯ ವಿವಾವಿದತ ನಿವೇಶನ ಕುರಿತು ಕಳೆದ ನವೆಂಬರ್‌ 9 ರಂದು ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್‌, ಆ ಜಾಗವನ್ನು ರಾಮಲ್ಲಾಗೆ ನೀಡುವಂತೆ ಆದೇಶಿಸಿತ್ತು. ಮೂರು ತಿಂಗಳೊಳಗೆ ಟ್ರಸ್ಟ್‌ ರಚಿಸಿ ಮಂದಿರ ನಿರ್ಮಾಣದ ಹೊಣೆಯನ್ನು ನೀಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನಿಡಿತ್ತು. ಮಸೀದಿ ನಿರ್ಮಾಣಕ್ಕೆ ಅಯೋಧ್ಯೆಯಲ್ಲಿಯೇ ಐದು ಎಕರೆ ಭೂಮಿಯನ್ನು ಸುನ್ನಿ ವಕ್ಫ್‌ ಮಂಡಳಿಗೆ ನೀಡುವಂತೆಯೂ ಹೇಳಿತ್ತು. ಈ ತಿರ್ಪಿನ ಮೇರೆಗೆ ಟ್ರಸ್ಟ್‌ ರಚನೆಯಾಗಿದೆ.

67. 703 ಎಕರೆ ಅಧಿಕೃತ ಜಮೀನನ್ನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ವರ್ಗಾಯಿಸಲು ನಿರ್ಧರಿಸಲಾಗಿದೆ.ರಾಮ ಮಂದಿರ ನಿರ್ಮಾಣ ವಿಷಯಕ್ಕೆ ಸಂಬಂಧಿಸಿದ ಎಲ್ಲ ನಿರ್ಧಾರಗಳನ್ನು ಈ ಟ್ರಸ್ಟ್‌ ಕೈಗೊಳ್ಳಲಿದೆ ಎಂದು ಪ್ರಧಾನಿ ಹೇಳಿದರು.

‘ರಾಮ ಮಂದಿರ ವಿಷಯ ಕುರಿತು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ ನಂತರ ದೇಶದ ಜನರು ಪ್ರಜಾಪ್ರಭುತ್ವದ ಪ್ರಕ್ರಿಯೆ ಮತ್ತು ಕಾರ್ಯವಿಧಾನಗಳಲ್ಲಿ ಅಪಾರವಾದ ನಂಬಿಕೆ ಪ್ರದರ್ಶಿಸಿದರು. ದೇಶದ 130 ಕೋಟಿ ಜನರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು’ ಎಂದು ಅವರು ಕೋರಿದರು.

‘ಭಾರತದಲ್ಲಿ ಹಿಂದೂಗಳು, ಮುಸ್ಲಿಮರು, ಸಿಖ್‌, ಕ್ರಿಶ್ಚಿಯನ್‌, ಪಾರ್ಸಿ, ಜೈನ್‌ ಮತ್ತು ಬೌದ್ಧ ಧರ್ಮದ ಪ್ರತಿಯೊಬ್ಬರೂ ಒಂದು ದೊಡ್ಡ ಕುಟುಂಬದಂತಿದ್ದೇವೆ. ಪ್ರತಿ ಕುಟುಂಬದ ಪ್ರತಿಯೊಬ್ಬ ಸದಸ್ಯನ ಅಭಿವೃದ್ಧಿ ಅಗತ್ಯವಿದೆ. ಅದಕ್ಕಾಗಿಯೇ ನಮ್ಮ ಸರ್ಕಾರ ’ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌’ ಮಂತ್ರದ ಮೂಲಕ ಕೆಲಸ ಮಾಡುತ್ತಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT