ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಆಡಳಿತದ ಒಂದು ದಶಕದಲ್ಲಿ ಬಡವರ ಬದುಕು ಬದಲಾಗಿದೆ: ಕೇಂದ್ರ ಸಚಿವ ಶೇಖಾವತ್

Published 12 ಫೆಬ್ರುವರಿ 2024, 2:55 IST
Last Updated 12 ಫೆಬ್ರುವರಿ 2024, 2:55 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕಳೆದ 10 ವರ್ಷಗಳ ಆಡಳಿತದಲ್ಲಿ ಮೂಲಸೌಕರ್ಯ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬೆಳವಣಿಗೆ ಮತ್ತು ಆಧುನೀಕರಣ ಸಾಧ್ಯವಾಗಿದೆ. ಇದರೊಂದಿಗೆ, ಬಡವರ ಬದುಕಿನಲ್ಲಿ ಬದಲಾವಣೆ ತರುವಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗಿದೆ ಎಂದು ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ಹೇಳಿದ್ದಾರೆ.

ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿರುವ ಶೇಖಾವತ್‌, ಭಾರತವು ಜಲಸಂಪನ್ಮೂಲ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕಳೆದ 10 ವರ್ಷಗಳಲ್ಲಿ ಭಾರಿ ಹೂಡಿಕೆ ಮಾಡಿರುವ ದೇಶಗಳಲ್ಲಿ ಒಂದಾಗಿದೆ. ನೀರಾವರಿ, ನದಿ ಸ್ವಚ್ಛತೆ, ಕುಡಿಯುವ ನೀರು ಹಾಗೂ ಅಂತರ್ಜಲ ಮರುಪೂರಣಕ್ಕೆ ಸಂಬಂಧಿಸಿದಂತೆ ದೇಶದಲ್ಲಿ ಅಂದಾಜು ₹ 20 ಲಕ್ಷ ಕೋಟಿ ಹೂಡಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಸ್ವಾತಂತ್ರ್ಯಾನಂತರ 2019ರ ವರೆಗೆ ಶೇ 16 ರಷ್ಟು ಮನೆಗಳು ಮಾತ್ರ ನಲ್ಲಿ ನೀರಿನ ಸಂಪರ್ಕ ಹೊಂದಿದ್ದವು. ಆದರೆ, ಪ್ರಧಾನಿ ಮೋದಿ ಅವರು 2019ರಲ್ಲಿ ಜಲ ಜೀವನ್‌ ಮಿಷನ್‌ (ಜೆಜೆಎಂ) ಘೋಷಿಸಿದ ಬಳಿಕ ಕ್ರಾಂತಿಕಾರಿ ಬದಲಾವಣೆ ಸಾಧ್ಯವಾಗಿದೆ. ಈ ವಿಭಾಗದಲ್ಲಿ ಸ್ವಾತಂತ್ರ್ಯಾನಂತರದ 72 ವರ್ಷಗಳಲ್ಲಿ ಆಗಿದ್ದ ಕೆಲಸಕ್ಕಿಂತ 3.5 ಪಟ್ಟು ಅಧಿಕ ಕೆಲಸ ಕಳೆದ ನಾಲ್ಕೇ ವರ್ಷಗಳಲ್ಲಿ ಆಗಿದೆ ಎಂದಿದ್ದಾರೆ.

'ದೇಶದ 19.40 ಕೋಟಿ ಮನೆಗಳ ಪೈಕಿ ಕೇವಲ 3.23 ಕೋಟಿ ಮನೆಗಳಿಗಷ್ಟೇ 72 ವರ್ಷಗಳಲ್ಲಿ ನಲ್ಲಿ ನೀರಿನ ಸಂಪರ್ಕ ಕಲ್ಪಿಸಲಾಗಿತ್ತು. ಆದರೆ, ಈಗ ಶೇ 74ರಷ್ಟು ಅಂದರೆ, 14.50 ಕೋಟಿ ಮನೆಗಳು ಕುಡಿಯುವ ನೀರಿನ ಸಂಪರ್ಕ ಪಡೆದಿವೆ' ಎಂದು ವಿವರಿಸಿದ್ದಾರೆ.

'ನಾಲ್ಕು ವರ್ಷಗಳಲ್ಲಿ 11.25 ಕೋಟಿ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸುವಲ್ಲಿ ಯಶಸ್ವಿಯಾಗಿದ್ದೇವೆ. ಸ್ವಾತಂತ್ರ್ಯಾನಂತರದ 72 ವರ್ಷಗಳಲ್ಲಿ ಆಗಿದ್ದ ವೇಗದಲ್ಲೇ ಕೆಲಸ ಮಾಡಿದ್ದರೆ, ಈ ಮೈಲುಗಲ್ಲು ಸಾಧಿಸಲು ಇನ್ನೂ ನೂರು ವರ್ಷಗಳು ಬೇಕಾಗುತ್ತಿತ್ತು' ಎಂದು ಅಭಿಪ್ರಾಯಪಟ್ಟಿದ್ದಾರೆ.

ಬಡವರ ಬದುಕಿನಲ್ಲಿ ಬದಲಾವಣೆ ತರುವಲ್ಲಿ ಕೇಂದ್ರ ಸರ್ಕಾರ ಕಳೆದ ಒಂದು ದಶಕದಲ್ಲಿ ಯಶಸ್ವಿಯಾಗಿದೆ ಎಂದು ಹೇಳಿರುವ ಅವರು, ವಿಶ್ವಸಂಸ್ಥೆ ಸಮಿತಿ, ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಹಾಗೂ ನೀತಿ ಆಯೋಗದ ವರದಿ ಪ್ರಕಾರ ಕಳೆದ ಒಂದು ದಶಕದ ಅವಧಿಯಲ್ಲಿ ಸುಮಾರು 25 ಕೋಟಿ ಭಾರತೀಯರು ಬಹು ಆಯಾಮದ ಬಡತನದಿಂದ ಹೊರಬಂದಿದ್ದಾರೆ ಎಂದಿದ್ದಾರೆ.

'ಮೂಲಸೌಕರ್ಯಗಳ ಸ್ಥಾಪನೆಯೇ ಯಾವುದೇ ದೇಶದ ಸುಸ್ಥಿರ ಹಾಗೂ ಸಮಗ್ರ ಅಭಿವೃದ್ಧಿಗೆ ಮಾಧ್ಯಮಾಗಿದೆ ಎಂಬುದು ಪ್ರಧಾನಿಯವರ ಸ್ಪಷ್ಟ ನಂಬಿಕೆಯಾಗಿದೆ. ರಸ್ತೆ, ರೈಲು, ಜಲ ಸಂಪರ್ಕ, ವಿಮಾನ ನಿಲ್ದಾಣಗಳು, ಇಂಧನ ಮತ್ತು ಬಾಹ್ಯಾಕಾಶ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿಯೂ ಮೂಲಸೌಕರ್ಯ ವ್ಯವಸ್ಥೆ ಅಭಿವೃದ್ಧಿಪಡಿಸುವ ಮೂಲಕ ಮೋದಿ ಸರ್ಕಾರ ಕ್ರಾಂತಿಕಾರಿ ಬದಲಾವಣೆಯನ್ನು ತಂದಿದೆ' ಎಂದು ಸಚಿವ ಪ್ರತಿ‍ಪಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT