ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚಲಿದೆ ಡಿಜಿಟಲ್ ವಹಿವಾಟು: ಪ್ರಧಾನಿ ಮೋದಿ

ಯುಪಿಐ–ಪೇನೌ ಹೊಸ ಸೇವೆ ಆರಂಭದ ವೇಳೆ ಪ್ರಧಾನಿ ಮೋದಿ ವಿಶ್ವಾಸ
Last Updated 21 ಫೆಬ್ರುವರಿ 2023, 22:15 IST
ಅಕ್ಷರ ಗಾತ್ರ

ನವದೆಹಲಿ/ಸಿಂಗಪುರ: ಯುಪಿಐ ಪಾವತಿ ವ್ಯವಸ್ಥೆಯ ಜನಪ್ರಿಯತೆಯು ದಿನೇ ದಿನೇ ಹೆಚ್ಚಾಗುತ್ತಿರುವ ಕಾರಣ, ಡಿಜಿಟಲ್ ಪಾವತಿಗಳ ಮೊತ್ತವು ನಗದು ಪಾವತಿಗಳ ಮೊತ್ತಕ್ಕಿಂತ ಶೀಘ್ರದಲ್ಲಿಯೇ ಹೆಚ್ಚಾಗಲಿದೆ ಎಂಬ ವಿಶ್ವಾಸವನ್ನು ಪ್ರಧಾನಿ ನರೇಂದ್ರ ಮೋದಿ
ವ್ಯಕ್ತಪಡಿಸಿದ್ದಾರೆ.

ಭಾರತ ಹಾಗೂ ಸಿಂಗಪುರ ನಡುವೆ ಹಣ ವರ್ಗಾವಣೆಗೆ ಯುಪಿಐ ಮತ್ತು ಪೇನೌ ಆಧಾರಿತ ವ್ಯವಸ್ಥೆಗೆ ಪ್ರಧಾನಿ ಮೋದಿ ಅವರು ಮಂಗಳವಾರ ಚಾಲನೆ ನೀಡಿದ್ದಾರೆ. ‘ಯುಪಿಐ ಮೂಲಕ ನಡೆಯುತ್ತಿರುವ ಭಾರಿ ಸಂಖ್ಯೆಯ ವಹಿವಾಟುಗಳು, ಈ ವ್ಯವಸ್ಥೆ ಸುರಕ್ಷಿತ ಎಂಬುದನ್ನು ತೋರಿಸುತ್ತಿವೆ’ ಎಂದು ಪ್ರಧಾನಿ ಹೇಳಿದ್ದಾರೆ.

ಪೇನೌ ಹಾಗೂ ಯುಪಿಐ ಜೋಡಿಸುವ ಆಲೋಚನೆಯು, ಮೋದಿ ಅವರು 2018ರಲ್ಲಿ ಸಿಂಗಪುರಕ್ಕೆ ಭೇಟಿ ನೀಡಿದ್ದಾಗ ಮೂಡಿತ್ತು. ಅದಾದ ನಂತರದಲ್ಲಿ ಎರಡೂ ದೇಶಗಳ ಕೇಂದ್ರೀಯ ಬ್ಯಾಂಕ್‌ಗಳು ಈ ನಿಟ್ಟಿನಲ್ಲಿ ಕೆಲಸ ಆರಂಭಿಸಿದವು ಎಂದು ಸಿಂಗಪುರದ ಪ್ರಧಾನಿ ಲೀ ಎಚ್. ಲೂಂಗ್ ಹೇಳಿದ್ದಾರೆ. ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಯುಪಿಐ ಹಾಗೂ ಪೇನೌ ಜೋಡಣೆಯು ಭಾರತ–ಸಿಂಗಪುರ ನಡುವಿನ ಸಂಬಂಧದಲ್ಲಿ ಹೊಸದೊಂದು ಮೈಲಿಗಲ್ಲು ಎಂದು ಬಣ್ಣಿಸಿದ ಮೋದಿ ಅವರು, ಇದು ಎರಡೂ ದೇಶಗಳ ಜನರಿಗೆ ತಮ್ಮ ಮೊಬೈಲ್‌ ಫೋನ್ ಮೂಲಕ ಕಡಿಮೆ ವೆಚ್ಚದಲ್ಲಿ ಹಣ ವರ್ಗಾವಣೆ ಮಾಡಲು ನೆರವಾಗುತ್ತದೆ ಎಂದಿದ್ದಾರೆ.

ಈಗ ಆರಂಭಿಸಿರುವ ವ್ಯವಸ್ಥೆಯ ಕಾರಣದಿಂದಾಗಿ, ಬ್ಯಾಂಕ್‌ ಖಾತೆ ಅಥವಾ ಇ–ವಾಲೆಟ್‌ಗಳಲ್ಲಿ ಇರುವ ಹಣವನ್ನು ಭಾರತದಿಂದ ಸಿಂಗಪುರಕ್ಕೆ ಅಥವಾ ಸಿಂಗಪುರದಿಂದ ಭಾರತಕ್ಕೆ ಯುಪಿಐ ಐಡಿ, ಮೊಬೈಲ್‌ ಸಂಖ್ಯೆ ಮೂಲಕವೇ ವರ್ಗಾವಣೆ ಮಾಡಬಹುದು ಎಂದು ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ) ತಿಳಿಸಿದೆ.

ಆರಂಭಿಕ ಹಂತದಲ್ಲಿ ಎಸ್‌ಬಿಐ, ಇಂಡಿಯನ್‌ ಓವರ್ಸೀಸ್‌ ಬ್ಯಾಂಕ್, ಇಂಡಿಯನ್ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್‌ ಮೂಲಕ ಹಣ ಕಳುಹಿಸುವ ಹಾಗೂ ಹಣ ಸ್ವೀಕರಿಸುವ ಸೇವೆಗಳನ್ನು ಪಡೆಯಬಹುದು. ಈಗ ಭಾರತದ ಗ್ರಾಹಕರು ದಿನವೊಂದಕ್ಕೆ ₹ 60 ಸಾವಿರದವರೆಗೆ ಹಣ ಕಳುಹಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT