ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸತ್ ಭವನ ಉದ್ಘಾಟನೆಗೆ ‍ಪ್ರತಿಪಕ್ಷಗಳ ಬಹಿಷ್ಕಾರ: ಪರೋಕ್ಷ ಚಾಟಿ ಬೀಸಿದ ಪ್ರಧಾನಿ ಮೋದಿ

Published 25 ಮೇ 2023, 4:45 IST
Last Updated 25 ಮೇ 2023, 4:45 IST
ಅಕ್ಷರ ಗಾತ್ರ

ನವದೆಹಲಿ: ನೂತನ ಸಂಸತ್‌ ಭವನ ಉದ್ಘಾಟನಾ ಸಮಾರಂಭವನ್ನು ಬಹಿಷ್ಕರಿಸುವುದಾಗಿ ಘೋಷಣೆ ಮಾಡಿರುವ ಹಲವು ವಿರೋಧ ಪಕ್ಷಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಗುರುವಾರ ಪರೋಕ್ಷ ವಾಗ್ದಾಳಿ ನಡೆಸಿದರು.

‘ಸಿಡ್ನಿಯಲ್ಲಿ ಭಾರತೀಯ ಸಮುದಾಯ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಸ್ಟ್ರೇಲಿಯಾದ ಆಡಳಿತ ಮತ್ತು ವಿರೋಧ ಪಕ್ಷದ ನಾಯಕರು ಪಾಲ್ಗೊಂಡಿದ್ದರು. ಅದು ಪ್ರಜಾಪ್ರಭುತ್ವ ವ್ಯವಸ್ಥೆಯ ಆತ್ಮ ಮತ್ತು ಶಕ್ತಿಯ ಪ್ರದರ್ಶನದಂತಿತ್ತು’ ಎಂದು ಹೇಳುವ ಮೂಲಕ ವಿರೋಧ ಪಕ್ಷಗಳತ್ತ ಚಾಟಿ ಬೀಸಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸದಿಂದ ಮರಳಿದ ನಂತರ ಪಾಲಂ ವಿಮಾನ ನಿಲ್ದಾಣದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಸಿಡ್ನಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್‌ ಸೇರಿದಂತೆ ಆಡಳಿತ ಪಕ್ಷದ ಪದಾಧಿಕಾರಿಗಳು ಮಾತ್ರವಲ್ಲ, ಮಾಜಿ ಪ್ರಧಾನಿ ಸೇರಿ ವಿರೋಧ ಪಕ್ಷಗಳ ಸದಸ್ಯರು ಕೂಡ ಪಾಲ್ಗೊಂಡಿದ್ದರು’ ಎಂದರು.

‘ಭಾರತೀಯ ಸಮುದಾಯ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರು ಪಾಲ್ಗೊಂಡಿದ್ದರಿಂದ ಅಲ್ಲಿ ಪ್ರಜಾತಂತ್ರದ ಪರಿಸರ ಕಂಡುಬಂದಿತ್ತು. ಭಾರತದ ಪ್ರತಿನಿಧಿಯೊಬ್ಬರಿಗೆ ಪ್ರತಿಯೊಬ್ಬರು ಗೌರವ ನೀಡಿದರು. ಅಂದಿನ ಕಾರ್ಯಕ್ರಮ ಮೋದಿಯ ವೈಭವೀಕರಣವಾಗಿರದೇ, ಭಾರತದ ಶಕ್ತಿಗೆ ಸಂದ ಗೌರವವಾಗಿತ್ತು’ ಎಂದು ಹೇಳಿದರು.

ಹೆಚ್ಚಿದ ವಿಪಕ್ಷಗಳ ಸಂಖ್ಯೆ
ನೂತನ ಸಂಸತ್‌ ಭವನವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಬದಲಾಗಿ ಪ್ರಧಾನಿ ಮೋದಿ ಉದ್ಘಾಟಿಸುತ್ತಿರುವುದರಿಂದ ಸಮಾರಂಭವನ್ನು ಬಹಿಷ್ಕರಿಸುವುದಾಗಿ ವಿರೋಧ ಪಕ್ಷಗಳು ಬುಧವಾರ ಘೋಷಿಸಿದ್ದವು. ಎಐಯುಡಿಎಫ್‌ ಕೂಡ ಕಾರ್ಯಕ್ರಮದಿಂದ ದೂರ ಉಳಿಯುವುದಾಗಿ ಹೇಳಿದ್ದು, ಸಮಾರಂಭವನ್ನು ಬಹಿಷ್ಕರಿಸಿರುವ ವಿರೋಧ ಪಕ್ಷಗಳ ಸಂಖ್ಯೆ 22ಕ್ಕೆ ಏರಿದಂತಾಗಿದೆ. ಈ ವಿಷಯವಾಗಿ ವಿರೋಧ ಪಕ್ಷಗಳು ಮೋದಿ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿವೆ. ‘ಮೋದಿ ನೇತೃತ್ವದ ಸರ್ಕಾರದ ಅಹಂಕಾರವು ದೇಶದ ಸಂಸದೀಯ ವ್ಯವಸ್ಥೆಯನ್ನು ನಾಶಪ‍ಡಿಸಿದೆ’ ಎಂದು ಹರಿದಾಯ್ದಿವೆ.
ವಿದೇಶ ನೆಲದಲ್ಲಿ ಭಾರತ ಮತ್ತು ಭಾರತೀಯರ ಶಕ್ತಿ ಬಗ್ಗೆ ವಿಶ್ವಾಸದಿಂದ ಮಾತನಾಡುತ್ತೇನೆ. ನನ್ನ ಮುಂದೆ ದೊಡ್ಡ ಸವಾಲುಗಳಿವೆ. ಆದರೆ ಸವಾಲುಗಳಿಗೇ ಸವಾಲು ಒಡ್ಡುವುದು ನನ್ನ ಸ್ವಭಾವ.
ನರೇಂದ್ರ ಮೋದಿ, ಪ್ರಧಾನಿ
ಎನ್‌ಡಿಎ ಮಿತ್ರ ಪಕ್ಷಗಳ ವಾಗ್ದಾಳಿ
ಸಮಾರಂಭದಿಂದ ದೂರ ಉಳಿಯುವ ವಿರೋಧ ಪಕ್ಷಗಳ ನಿರ್ಧಾರವು ಪ್ರಜಾಸತ್ತಾತ್ಮಕ ತತ್ವಗಳು ಹಾಗೂ ಸಾಂವಿಧಾನಿಕ ಮೌಲ್ಯಗಳಿಗೆ ಮಾಡಿರುವ ಘೋರ ಅವಮಾನ ಎಂದು ಎನ್‌ಡಿಎ ಮಿತ್ರ ಪಕ್ಷಗಳು ಟೀಕಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT