ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ವಾನುಮತದಿಂದ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಕ್ಕೆ ಸಂಸದರಿಗೆ ಮೋದಿ ಮನವಿ

Published 19 ಸೆಪ್ಟೆಂಬರ್ 2023, 10:49 IST
Last Updated 19 ಸೆಪ್ಟೆಂಬರ್ 2023, 10:49 IST
ಅಕ್ಷರ ಗಾತ್ರ

ನವದೆಹಲಿ: ಸಂಸತ್ತಿನ ಉಭಯ ಸದನಗಳಲ್ಲೂ ಮಹಿಳಾ ಮೀಸಲಾತಿ ಮಸೂದೆಯನ್ನು ಸರ್ವಾನುಮತದಿಂದ ಅಂಗೀಕರಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರು ಸಂಸದರನ್ನು ಒತ್ತಾಯಿಸಿದ್ದಾರೆ.

‘ನಾರಿ ಶಕ್ತಿ ವಂದನಾ ಅಧಿನಿಯಮ’ಎಂಬ ಹೆಸರಿನಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದರಷ್ಟು ಸ್ಥಾನಗಳನ್ನು ಮೀಸಲಿಡುವ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರ್ಕಾರ ಮಂಗಳವಾರ ಲೋಕಸಭೆಯಲ್ಲಿ ಮಂಡಿಸಿದೆ.

ಹೊಸ ಸಂಸತ್ ಭವನದ ಮೊದಲ ಭಾಷಣದಲ್ಲಿ ಮಹಿಳಾ ಮೀಸಲಾತಿ ಮಸೂದೆ ಬಗ್ಗೆ ಮಾತನಾಡಿದ ಮೋದಿ, ‘ಮಹಿಳಾ ಮೀಸಲಾತಿ ಮಸೂದೆ ಬಗ್ಗೆ ಹಲವು ವರ್ಷಗಳಿಂದ ಹಲವು ಬಾರಿ ಚರ್ಚೆಗಳು ನಡೆದಿವೆ. ಸಂಸತ್ತಿನ ಮಸೂದೆ ಜಾರಿಗೆ ಹಲವು ಪ್ರಯತ್ನಗಳು ನಡೆದಿವೆ. 1996ರಲ್ಲಿ ಈ ಸಂಬಂಧ ಮಸೂದೆ ಮಂಡಿಸಲಾಗಿತ್ತು. ಅಟಲ್ ಬಿಹಾರಿ ವಾಜಪೇಯಿ ಅವರ ಕಾಲದಲ್ಲಿ ಹಲವು ಪ್ರಯತ್ನ ನಡೆದಿವೆ. ಆದರೆ, ಸಂಖ್ಯಾಬಲದ ಕೊರತೆಯಿಂದ ಮಹಿಳಾ ಮೀಸಲಾತಿಯ ಕನಸು ಈಡೇರಲಿಲ್ಲ’ ಎಂದು ಹೇಳಿದರು.

‘ಮಹಿಳೆಯರಿಗೆ ಅವರ ಹಕ್ಕುಗಳನ್ನು ಖಚಿತಪಡಿಸಲು ಮತ್ತು ಅವರ ಶಕ್ತಿಯನ್ನು ಹಲವು ಅತ್ಯುತ್ತಮ ಕೆಲಸಗಳಿಗೆ ಬಳಸಲು ದೇವರು ನನ್ನನ್ನು ಆಯ್ಕೆ ಮಾಡಿದ್ದಾನೆ. ಆ ದಿಕ್ಕಿನಲ್ಲಿ ಮತ್ತೊಮ್ಮೆ ನಮ್ಮ ಸರ್ಕಾರ ಅಡಿ ಇಡುತ್ತಿದೆ. ನಿನ್ನೆ ನಡೆದ ಸಂಪುಟ ಸಭೆಯು ಮಸೂದೆಯನ್ನು ಅಂಗೀಕರಿಸಿದೆ. ಸೆಪ್ಟೆಂಬರ್ 19ರ ಈ ದಿನ ಇತಿಹಾಸದಲ್ಲಿ ದಾಖಲಾಗಲಿದೆ’ ಎಂದು ಮೋದಿ ಹೇಳಿದ್ದಾರೆ.

ಎಲ್ಲ ವಲಯಗಳಲ್ಲೂ ಮಹಿಳೆಯರು ಮುಂದಡಿ ಇಡುತ್ತಿರುವಾಗ ನೀತಿ ನಿರೂಪಣೆಯಲ್ಲೂ ಅವರ ಗರಿಷ್ಠ ಪಾಲ್ಗೊಳ್ಳುವಿಕೆ ಅತ್ಯಂತ ಮುಖ್ಯವಾಗಿದೆ ಎಂದು ಮೋದಿ ಹೇಳಿದರು.

‘ಮಹಿಳೆಯರನ್ನೊಳಗೊಂಡ ಅಭಿವೃದ್ಧಿ ದೃಷ್ಟಿಯಿಂದ ಸರ್ಕಾರವು ಪ್ರಮುಖ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಮಂಡಿಸುತ್ತಿದೆ. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಹೆಚ್ಚಿಸುವುದು ಮಸೂದೆಯ ಗುರಿಯಾಗಿದೆ. ನಾರಿ ಶಕ್ತಿ ವಂದನಾ ಅಧಿನಿಯಮದ ಮೂಲಕ ನಮ್ಮ ಪ್ರಜಾಪ್ರಭುತ್ವ ಬಲಗೊಳ್ಳಲಿದೆ’ಎಂದು ಅವರು ಹೇಳಿದರು.

‘ಈ ಸಂದರ್ಭ ನನ್ನ ತಾಯಂದಿರು, ಸಹೋದರಿಯರು, ಹೆಣ್ಣುಮಕ್ಕಳಿಗೆ ಶುಭಾಶಯ ತಿಳಿಸಲು ಬಯಸುತ್ತೇನೆ. ಈ ಮಸೂದೆ ಕಾನೂನಾಗಿ ಜಾರಿಗೆ ಬರಲಿದೆ ಎಂದು ನಾವು ಅವರಿಗೆ ಭರವಸೆ ನೀಡುತ್ತೇವೆ. ಸರ್ವಾನುಮತದಿಂದ ಈ ಮಸೂದೆ ಅಂಗೀಕರಿಸುವಂತೆ ಉಭಯ ಸದನಗಳ ಎಲ್ಲ ಸದಸ್ಯರಿಗೂ ನಾನು ಮನವಿ ಮಾಡುತ್ತೇನೆ’ ಎಂದು ಮೋದಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT