ಕೊಚ್ಚಿ: ನಟಿಯೊಬ್ಬರ ವಿರುದ್ಧ ಕೇರಳದ ಪೊಲೀಸರು ಶುಕ್ರವಾರ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಲಯಾಳ ಚಿತ್ರರಂಗದ ಹೆಸರಾಂತ ನಟರ ವಿರುದ್ಧ ಅತ್ಯಾಚಾರ, ಲೈಂಗಿಕ ಕಿರುಕುಳ ಆರೋಪ ಕುರಿತು ಈ ನಟಿ ದೂರು ನೀಡಿದ್ದರು.
ನಟಿಯ ಸಂಬಂಧಿಕ ಮಹಿಳೆಯೊಬ್ಬರು ನೀಡಿದ್ದ ದೂರು ಆಧರಿಸಿ ಪೋಕ್ಸೊ ಕಾಯ್ದೆಯಡಿ ಇಲ್ಲಿನ ಮೂವಾಟ್ಟುಪುಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 2014ರಲ್ಲಿ ನಡೆದಿದ್ದ ಘಟನೆಗೆ ಸಂಬಂಧಿಸಿದ ದೂರು ದಾಖಲಾಗಿದೆ ಎಂದಿದ್ದಾರೆ.
‘ನಟಿಯು ವೇಶ್ಯಾವಾಟಿಕೆ ಜಾಲ ನಡೆಸುತ್ತಿದ್ದಾರೆ. ಚೆನ್ನೈಗೆ ಸಿನಿಮಾ ಆಡಿಷನ್‌ಗೆ ಕರೆದೊಯ್ದು ಅಲ್ಲಿ, ಲೈಂಗಿಕವಾಗಿ ಸಹಕರಿಸುವಂತೆ ಹಲವರ ಎದುರು ನಿಲ್ಲಿಸಿದ್ದರು’ ಎಂದು ಮಹಿಳೆಯು ಗುರುವಾರ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.
ದೂರುದಾರ ಮಹಿಳೆಯ ಹೇಳಿಕೆ ದಾಖಲಿಸಲಾಗಿದೆ. ‘ಘಟನೆ ನಡೆದಾಗ ನಾನು ಅಪ್ರಾಪ್ತ ವಯಸ್ಕಳಾಗಿದ್ದೆ’ ಎಂದು ತಿಳಿಸಿದ್ದಾರೆ ಎಂದು ಪೊಲೀಸರು ಪ್ರತಿಕ್ರಿಯಿಸಿದ್ದರು.
ಆದರೆ, ನಟಿ ಈ ಆರೋಪವನ್ನು ತಳ್ಳಿಹಾಕಿದ್ದಾರೆ. ‘ಸಂಬಂಧಿಕಳೂ ಆಗಿರುವ ಮಹಿಳೆ ನನಗೆ ಹಣ ನೀಡಬೇಕು. ಹೆಸರಾಂತ ನಟರ ವಿರುದ್ಧದ ಪ್ರಕರಣದ ಗಮನ ಬೇರೆಡೆ ಸೆಳೆಯುವುದು ಈ ದೂರಿನ ಉದ್ದೇಶ’ ಎಂದು ಪ್ರತಿಕ್ರಿಯಿಸಿದ್ದಾರೆ.
ನಟಿಯು ಇತ್ತೀಚೆಗೆ ನಟರಾದ ಮುಕೇಶ್, ಜಯಸೂರ್ಯ, ಇದವೆಲ ಬಾಬು ಸೇರಿ ಹಲವರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿ ದೂರು ನೀಡಿದ್ದರು.