ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಷ್ಟೀಕರಣದ ವಿಷ ದುರ್ಬಲ: ಉತ್ತರ ಪ್ರದೇಶದ ರ‍್ಯಾಲಿಯಲ್ಲಿ ಪ್ರಧಾನಿ ಹೇಳಿಕೆ

ಅಭಿವೃದ್ಧಿಯ ಹೊಸ ಎತ್ತರ ಕಾರಣ: ನರೇಂದ್ರ ಮೋದಿ
Published 10 ಮಾರ್ಚ್ 2024, 15:02 IST
Last Updated 10 ಮಾರ್ಚ್ 2024, 15:02 IST
ಅಕ್ಷರ ಗಾತ್ರ

ಆಜಂಗಢ, ಉತ್ತರ ಪ್ರದೇಶ: ‘ಉತ್ತರ ಪ್ರದೇಶದಲ್ಲಿ ಇಂದು ಅಭಿವೃದ್ಧಿಯು ಹೊಸ ಎತ್ತರವನ್ನು ತಲುಪಿದ್ದು, ಇದರ ಪರಿಣಾಮ ‘ತುಷ್ಟೀಕರಣದ ವಿಷ’ವು ದುರ್ಬಲಗೊಳ್ಳುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಭಾನುವಾರ ಇಲ್ಲಿ ನಡೆದ ಸಾರ್ವಜನಿಕ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮುಲಾಯಂ ಮತ್ತು ಅಖಿಲೇಶ್‌ ಯಾದವ್ ಕುಟುಂಬವನ್ನು ಪರೋಕ್ಷವಾಗಿ ಉಲ್ಲೇಖಿಸಿ, ರಾಜಕೀಯದಲ್ಲಿ ಸ್ವಜನಪಕ್ಷಪಾತ ಧೋರಣೆಯನ್ನು ಕಟುವಾಗಿ ತರಾಟೆಗೆ ತೆಗೆದುಕೊಂಡರು.

ಆಜಂಗಢ ಕ್ಷೇತ್ರವನ್ನು ಭದ್ರ ನೆಲೆ ಎಂದೇ ಪರಿಣಿಸಿದ್ದ ಯಾದವ್ ಕುಟುಂಬವನ್ನು ಟೀಕಿಸಿದರು. ಸ್ವಜನಪಕ್ಷಪಾತದ ಧೋರಣೆಯಿಂದಾಗಿ, ಕುಟುಂಬವೇ ಇಲ್ಲದ ವ್ಯಕ್ತಿಯೇ ಅವರ ವಿರುದ್ಧ ಜಯಗಳಿಸಿದ್ದ ಎಂದು ಈ ಕ್ಷೇತ್ರದ ಉಪ ಚುನಾವಣೆಯ ಫಲಿತಾಂಶವನ್ನು ಉಲ್ಲೇಖಿಸಿದರು.

ಆಜಂಗಢ ಕ್ಷೇತ್ರದಿಂದ ದಿವಂಗತ ಮುಲಾಯಂ ಸಿಂಗ್ ಯಾದವ್ 2014ರಲ್ಲಿ, ಅವರ ಪುತ್ರ ಅಖಿಲೇಶ್‌ ಯಾದವ್ 2019ರಲ್ಲಿ ಆಯ್ಕೆಯಾಗಿದ್ದರು. ವಿಧಾನಸಭೆಗೆ ಸ್ಪರ್ಧಿಸಲು ಅಖಿಲೇಶ್‌ ತೆರವುಗೊಳಿಸಿದ್ದ ಕ್ಷೇತ್ರದಲ್ಲಿ 2022ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಯಾದವ್ ಕುಟುಂಬ ಪರಾಭವಗೊಂಡಿತ್ತು. ಬಿಜೆಪಿಯ ದಿನೇಶ್ ಲಾಲ್ ಯಾದವ್ ಅವರು ಜಯಶೀಲರಾಗಿದ್ದರು.

ಆ ಸೋಲಿನ ಕಾರಣದಿಂದಲೇ ‘ಪರಿವಾರವಾದಿ’ಗಳು (ಪ್ರತಿಪಕ್ಷದವರು) ತೀವ್ರ ಹತಾಶರಾಗಿದ್ದು, ಮೋದಿಯನ್ನು ಟೀಕಿಸುತ್ತಿದ್ದಾರೆ. ಒಂದು ಕಾಲದಲ್ಲಿ ಹಿಂದುಳಿದಿದ್ದ ಆಜಂಗಢ ಕ್ಷೇತ್ರವು ಇಂದು ಪ್ರಕಾಶಿಸುತ್ತಿದೆ. ಅಭಿವೃದ್ಧಿಯಲ್ಲಿ ಹೊಸ ಅಧ್ಯಾಯ ಬರೆಯುತ್ತಿದೆ ಎಂದು ಹೇಳಿದರು.

ಇದಕ್ಕೂ ಮೊದಲು ಪ್ರಧಾನಿ ಅವರು ದೇಶದಾದ್ಯಂತ ಜಾರಿಗೊಳ್ಳಲಿರುವ ₹ 42,000 ಕೋಟಿ ವೆಚ್ಚದ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಈ ಪೈಕಿ ₹ 34,700 ಕೋಟಿ ವೆಚ್ಚದ ಯೋಜನೆಗಳು ಉತ್ತರ ಪ್ರದೇಶದಲ್ಲಿಯೇ ಅನುಷ್ಠಾನಗೊಳ್ಳಲಿವೆ.

2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿಸುವ ಗುರಿ ಸಾಧಿಸುವ ನಿಟ್ಟಿನಲ್ಲಿ ನಾನು ಅಭಿವೃದ್ಧಿ ಯೋಜನೆಗಳಿಗೆ ವೇಗ ನೀಡುತ್ತಿದ್ದೇನೆ. ಅದೇ ವೇಗದಲ್ಲಿಯೇ ನಾನೂ ಓಡುತ್ತಿದ್ದೇನೆ ಎಂದು ಪ್ರಧಾನಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT