ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಫಲಿತಾಂಶ: ರಾಹುಲ್‌ ಗಾಂಧಿ ವಿರುದ್ಧ ಟಿಎಂಸಿ ಕಿಡಿ– ಬೆಂಬಲಕ್ಕೆ ನಿಂತ ಸಿಪಿಎಂ

Published 3 ಡಿಸೆಂಬರ್ 2023, 16:23 IST
Last Updated 3 ಡಿಸೆಂಬರ್ 2023, 16:23 IST
ಅಕ್ಷರ ಗಾತ್ರ

ಕೋಲ್ಕತ್ತ: ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಭಾನುವಾರ ಪ್ರಕಟವಾದ ಬೆನ್ನಲ್ಲೇ, ವಿರೋಧ ಪಕ್ಷಗಳ ಒಕ್ಕೂಟ ‘ಇಂಡಿಯಾ’ದ ಭಾಗವಾಗಿರುವ ಟಿಎಂಸಿ ಹಾಗೂ ಸಿಪಿಎಂ ನಡುವೆ ಕೆಸರೆರಚಾಟ ಶುರುವಾಗಿದೆ.

ಫಲಿತಾಂಶ ವಿಚಾರವಾಗಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರುದ್ಧ ಟಿಎಂಸಿ ಅಸಮಾಧಾನ ಹೊರಹಾಕಿದ್ದರೆ, ಸಿಪಿಎಂ ಮಾತ್ರ ರಾಹುಲ್‌ ಪರ ನಿಂತಿದೆ.

ರಾಜಸ್ಥಾನ, ಮಧ್ಯ ಪ್ರದೇಶ ಹಾಗೂ ಛತ್ತೀಸಗಢದಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಇದು ಬಿಜೆಪಿಯ ಗೆಲುವು ಎನ್ನುವುದಕ್ಕಿಂತ ಕಾಂಗ್ರೆಸ್‌ ಪಕ್ಷದ ವೈಫಲ್ಯ ಎಂದು ಟಿಎಂಸಿ ವಕ್ತಾರ ಕುನಾಲ್‌ ಘೋಷ್‌ ಹೇಳಿದ್ದಾರೆ.

‘ಟಿಎಂಸಿ ನಾಯಕಿ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಅಭಿವೃದ್ಧಿ ಕೇಂದ್ರಿತ ರಾಜಕಾರಣ ಭಾರಿ ಯಶಸ್ಸು ಕಂಡಿದ್ದು, ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ನೀಡಿದೆ. ಹೀಗಾಗಿ, ಮಮತಾ ಬ್ಯಾನರ್ಜಿ ಅವರನ್ನು ವಿರೋಧ ಪಕ್ಷಗಳ ಒಕ್ಕೂಟದ ನಾಯಕಿಯಾಗಿ ಘೋಷಿಸಬೇಕು’ ಎಂದು ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ. 

‘ಬಿಜೆಪಿ ವಿರುದ್ಧದ ಹೋರಾಟದಲ್ಲಿ ವಿರೋಧ ಪಕ್ಷಗಳ ಒಕ್ಕೂಟಕ್ಕೆ ಟಿಎಂಸಿ ಸಮರ್ಥ ನಾಯಕತ್ವ ಒದಗಿಸಬಲ್ಲದು’ ಎಂದೂ ಹೇಳಿದ್ದಾರೆ.

ಕಾಂಗ್ರೆಸ್‌ ಪರ ನಿಂತಿರುವ ಸಿಪಿಎಂನ ಕೇಂದ್ರ ಸಮಿತಿ ಸದಸ್ಯ ಸುಜನ್‌ ಚಕ್ರವರ್ತಿ, ‘ರಾಹುಲ್‌ ಗಾಂಧಿ ಕೈಗೊಂಡಿದ್ದ ಭಾರತ ಜೋಡೊ ಯಾತ್ರೆಯು ಮೂರು ರಾಜ್ಯಗಳ ಚುನಾವಣೆ ಮೇಲೆ ಪರಿಣಾಮ ಬೀರಿಲ್ಲ ಎಂದು ಹೇಳುವುದು ಸರಿಯಲ್ಲ’ ಎಂದಿದ್ದಾರೆ.

‘ಮೂರು ರಾಜ್ಯಗಳಲ್ಲಿ ಬಿಜೆಪಿ ಗೆದ್ದಿರುವ ಕಾರಣ ದೇಶದಲ್ಲಿ ಕೇಸರಿ ಅಲೆ ಇದೆ ಎಂದು ಹೇಳುವುದೂ ಸರಿಯಲ್ಲ. ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆಯ ಹೋರಾಟವೇ ಬೇರೆಯಾಗಿರಲಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT