ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೃದಯಸ್ತಂಭನದಿಂದಲೇ ಮುಖ್ತಾರ್ ಅನ್ಸಾರಿ ಸಾವು; ಶವಪರೀಕ್ಷೆ ವರದಿಯಲ್ಲಿ ಮಾಹಿತಿ

Published 30 ಮಾರ್ಚ್ 2024, 4:55 IST
Last Updated 30 ಮಾರ್ಚ್ 2024, 4:55 IST
ಅಕ್ಷರ ಗಾತ್ರ

ಲಖನೌ: ಜೈಲಿನಲ್ಲಿದ್ದ ಗ್ಯಾಂಗ್‌ಸ್ಟರ್‌, ರಾಜಕಾರಣಿ ಮುಖ್ತಾರ್ ಅನ್ಸಾರಿ ಮೃತಪಟ್ಟಿರುವುದು ಹೃದಯಸ್ತಂಭನದಿಂದಲೇ ಎಂಬುದು ಶವಪರೀಕ್ಷೆ ವರದಿಯಿಂದ ಖಚಿತವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

60ಕ್ಕೂ ಹೆಚ್ಚು ಕ್ರಿಮಿನಲ್‌ ಪ್ರಕರಣ ಎದುರಿಸುತ್ತಿದ್ದ ಮಾಜಿ ಶಾಸಕ ಅನ್ಸಾರಿ, ರಾಣಿ ದುರ್ಗಾವತಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಗುರುವಾರ ರಾತ್ರಿ ಮೃತಪಟ್ಟಿದ್ದರು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ಬಾಂಡಾ ಜಿಲ್ಲಾ ಕಾರಾಗೃಹದಿಂದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.

ಜೈಲಿನಲ್ಲಿ, ಅನ್ಸಾರಿಗೆ ನಿಧಾನವಾಗಿ ಪರಿಣಾಮ ಬೀರುವ ವಿಷ ಉಣಿಸಲಾಗಿದೆ. ಹೀಗಾಗಿಯೇ ಅವರು ಮೃತಪಟ್ಟಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದರು.

ಆದರೆ, ಮರಣೋತ್ತರ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದ ಆಸ್ಪತ್ರೆಯ ವೈದ್ಯರೊಬ್ಬರು 'ಮುಖ್ತಾರ್‌ ಅನ್ಸಾರಿ ಸಾವಿಗೆ ಹೃದಯಾಘಾತವೇ ಕಾರಣ ಎಂಬುದು ಖಚಿತವಾಗಿದೆ' ಎಂದು ತಿಳಿಸಿದ್ದಾರೆ.

ಐವರು ವೈದ್ಯರ ತಂಡ ಶವಪರೀಕ್ಷೆಯಲ್ಲಿ ಪಾಲ್ಗೊಂಡಿತ್ತು. ಮುಖ್ತಾರ್ ಅನ್ಸಾರಿ ಕಿರಿಯ ಮಗ ಉಮರ್‌ ಅನ್ಸಾರಿ ಸಹ, ಈ ವೇಳೆ ಹಾಜರಿದ್ದರು.

ಬಳಿಕ ಅನ್ಸಾರಿ ಶವವನ್ನು ಬಿಗಿ ಭದ್ರತೆಯಲ್ಲಿ ಬಾಂಡಾದಿಂದ ರವಾನಿಸಲಾಯಿತು. ಗಾಜಿಪುರದಲ್ಲಿ ಇಂದು (ಶನಿವಾರ) ಅಂತ್ಯಸಂಸ್ಕಾರ ನಡೆದಿದೆ.

ನ್ಯಾಯಾಂಗ ತನಿಖೆಗೆ ಆದೇಶ

ಅನ್ಸಾರಿ ಸಾವಿನ ವಿಚಾರವಾಗಿ ಕೇಳಿಬಂದಿರುವ ಆರೋಪಗಳಿಗೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆ ನಡೆಸುವಂತೆ ಉತ್ತರಪ್ರದೇಶ ಬಾಂಡಾ ಜಿಲ್ಲಾ ನ್ಯಾಯಾಲಯ ಆದೇಶಿಸಿದೆ.

ಪ್ರಕರಣದ ತನಿಖೆಗೆ ಹೆಚ್ಚುವರಿ ಮುಖ್ಯ ನ್ಯಾಯಾಧೀಶ ಗರಿಮ್‌ ಸಿಂಗ್‌ ಅವರನ್ನು ನೇಮಿಸಿ ಬಾಂಡಾ ಜಿಲ್ಲಾ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಭಗವಾನ್‌ದಾಸ್‌ ಗುಪ್ತಾ ಆದೇಶಿಸಿದ್ದಾರೆ.

ಒಂದು ತಿಂಗಳಲ್ಲಿ ವರದಿ ಸಲ್ಲಿಸುವಂತೆಯೂ ನಿರ್ದೇಶನ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT