ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ಗ್ಯಾಂಗ್‌ಸ್ಟರ್‌–ರಾಜಕಾರಣಿ ಅನ್ಸಾರಿ: 63 ಪ್ರಕರಣ: 19 ವರ್ಷ ಜೈಲು; 5 ಬಾರಿ ಶಾಸಕ
ಗ್ಯಾಂಗ್‌ಸ್ಟರ್‌–ರಾಜಕಾರಣಿ ಅನ್ಸಾರಿ: 63 ಪ್ರಕರಣ: 19 ವರ್ಷ ಜೈಲು; 5 ಬಾರಿ ಶಾಸಕ
Published 29 ಮಾರ್ಚ್ 2024, 11:29 IST
Last Updated 29 ಮಾರ್ಚ್ 2024, 11:29 IST
ಅಕ್ಷರ ಗಾತ್ರ
1978ರಲ್ಲಿ ತನ್ನ 15ನೇ ವಯಸ್ಸಿನಲ್ಲೇ ಕಾನೂನಿಗೆ ಸೆಡ್ಡು ಹೊಡೆದು ಪಾತಕ ಲೋಕದ ನಂಟು ಬೆಳೆಸಿಕೊಂಡ ಮುಖ್ತಾರ್‌ ಅನ್ಸಾರಿ ಹೆಸರು ಮುಂದಿನ ಹತ್ತು ವರ್ಷಗಳಲ್ಲಿ ಉತ್ತರ ಪ್ರದೇಶದ ಪೂರ್ವಾಂಚಲ ಪ್ರಾಂತ್ಯದಲ್ಲಿ ಕುಖ್ಯಾತಿ ಪಡೆದಿತ್ತು. 63 ಪ್ರಕರಣಗಳು ತನ್ನ ವಿರುದ್ಧ ದಾಖಲಾಗಿದ್ದರೂ, ಐದು ಬಾರಿ ಶಾಸಕನಾಗುವ ಮಟ್ಟಕ್ಕೆ ಅನ್ಸಾರಿ ಬೆಳೆದು ನಿಂತಿದ್ದು ಮಾತ್ರವಲ್ಲ, ಪೂರ್ವ ಉತ್ತರ ಪ್ರದೇಶದ ಬಾಹುಬಲಿ ಎಂದೇ ಕುಖ್ಯಾತಿ ಪಡೆದಿದ್ದರು.

ಲಖನೌ: 2005ರಲ್ಲಿ ನಡೆದಿದ್ದ ಬಿಜೆಪಿ ಶಾಸಕ ಕೃಷ್ಣಾನಂದ ರಾಯ್ ಕೊಲೆ ಪ್ರಕರಣದಲ್ಲಿ 2023ರಲ್ಲಿ ಅನ್ಸಾರಿಗೆ 10 ವರ್ಷ ಕಾರಾಗೃಹ ಶಿಕ್ಷೆಯಾಗಿತ್ತು. 2022ರಲ್ಲಿ ಎಂಟು ಪ್ರಕರಣಗಳಲ್ಲಿ ಇವರಿಗೆ ಶಿಕ್ಷೆಯಾಗಿತ್ತು. ಕೇವಲ 40 ದಿನಗಳ ಹಿಂದೆ ತನಗೆ ಜೈಲಿನಲ್ಲಿ ವಿಷ ಉಣಿಸಲಾಗುತ್ತಿದೆ ಎಂದು ಆರೋಪಿಸಿದ್ದ 60 ವರ್ಷದ ಅನ್ಸಾರಿ, ಹೃದಯಾಘಾತದಿಂದ ಗುರುವಾರ ಮೃತಪಟ್ಟಿದ್ದಾರೆ. ಆದರೆ ಇದು ಯೋಜಿತ ಕೊಲೆ ಎಂದು ಅವರ ಕುಟುಂಬದವರು ಆರೋಪ ಮಾಡಿದ್ದಾರೆ. 

ಐದು ಬಾರಿ ಶಾಸಕರಾದ ಅನ್ಸಾರಿ ವಿರುದ್ಧ ಕೊಲೆ, ಅಪಹರಣ, ಸುಲಿಗೆ ಸೇರಿದಂತೆ ಸುಮಾರು 63 ಪ್ರಕರಣಗಳು ದಾಖಲಾಗಿವೆ. ಪಂಜಾಬ್ ಮತ್ತು ಉತ್ತರ ಪ್ರದೇಶದ ಹಲವು ಠಾಣೆಗಳಲ್ಲಿ ಇವರ ವಿರುದ್ಧ ಪ್ರಕರಣಗಳು ದಾಖಲಾಗಿವೆ. 

ಉತ್ತರ ಪ್ರದೇಶದ ಇತಿಹಾಸದಲ್ಲೇ ರಾಯ್ ಅವರ ಹತ್ಯೆಯು ಅತ್ಯಂತ ಭೀತಿ ಹುಟ್ಟಿಸಿದ ಘಟನೆಯಾಗಿತ್ತು. ಕೃಷ್ಣಾನಂದ ರಾಯ್‌ ಮೇಲೆ ಎಕೆ–47 ಬಂದೂಕಿನ ಮೂಲಕ ಗುಂಡಿನ ದಾಳಿ ನಡೆಸಲಾಗಿತ್ತು. ರಾಯ್‌ ದೇಹದ ತುಂಬೆಲ್ಲಾ ಗುಂಡುಗಳು ಹೊಕ್ಕಿದ್ದವು. ಇವರೊಂದಿಗೆ ಇನ್ನೂ ಆರು ಜನರೂ ಗುಂಡಿನ ದಾಳಿಗೆ ತುತ್ತಾಗಿದ್ದರು. ಘಟನಾ ಸ್ಥಳದಿಂದ ಪೊಲೀಸರು ವಶಪಡಿಸಿಕೊಂಡ ಬುಲೆಟ್‌ಗಳ ಒಟ್ಟು ಸಂಖ್ಯೆ 400ಕ್ಕೂ ಅಧಿಕ.

ಮುಖ್ತಾರ್‌ ಸೋದರ ಹಾಗೂ ಐದು ಬಾರಿ ಶಾಸಕ ಅಫ್ಜಲ್ ಅನ್ಸಾರಿಯನ್ನು ಕೃಷ್ಣಾನಂದ ರಾಯ್ 2002ರ ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಳಿಸಿದ್ದರು. ಆ ಸಂದರ್ಭದಲ್ಲಿ ದಂಗೆ ಪ್ರಕರಣದಲ್ಲಿ ಮುಖ್ತಾರ್‌ ಜೈಲಿನಲ್ಲಿದ್ದ. ಈತನ ಸೋದರರು ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿದ್ದರು.

1991ರಲ್ಲಿ ನಡೆದಿದ್ದ ಅವದೇಶ್ ರಾಯ್ ಕೊಲೆ ಪ್ರಕರಣದ ಆರೋಪಿಯಾಗಿದ್ದ ಅನ್ಸಾರಿಗೆ 2023ರಲ್ಲಿ ಶಿಕ್ಷೆ ಪ್ರಕಟವಾಗಿತ್ತು. ಸದ್ಯ ಅವದೇಶ್ ಸೋದರ ಅಜಯ್ ರಾಯ್ ಅವರು ವಾರಾಣಸಿ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿ ಎದುರು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.

1991ರಲ್ಲಿ ಕಾಂಗ್ರೆಸ್ ಮುಖಂಡರಾದ ಅವದೇಶ್ ರಾಯ್‌ ಹಾಗೂ ಅವರ ಸೋದರ ಅಜಯ್ ರಾಯ್ ಅವರ ಕೊಲೆ ಪ್ರಕರಣದಲ್ಲಿ ಅನ್ಸಾರಿಗೆ 2023ರಲ್ಲಿ ಶಿಕ್ಷೆ ಪ್ರಕಟವಾಗಿತ್ತು. 1986ರ ನಕಲಿ ಬಂದೂಕು ಪರವಾನಗಿ ಪ್ರಕರಣದಲ್ಲಿ ಭಾಗಿಯಾಗಿದ್ದಕ್ಕೆ ಜೀವಾವಧಿ ಶಿಕ್ಷೆಗೆ ಅನ್ಸಾರಿ ಗುರಿಯಾಗಿದ್ದರು.

ಅನ್ಸಾರಿ ಕುಟುಂಬದ ಖ್ಯಾತಿ ಹಾಗೂ ಅಪಖ್ಯಾತಿ ಹೊತ್ತವರು

ಮುಖ್ತಾರ್‌ ಅನ್ಸಾರಿ ಹುಟ್ಟಿದ್ದು ಉತ್ತರ ಪ್ರದೇಶದ ಗಾಜಿಪುರದಲ್ಲಿ 1963ರ ಜೂನ್ 30ರಂದು. ಮೊಹಮ್ಮದ್‌ನಗರದಲ್ಲಿರುವ ಇವರ ಪೂರ್ವಿಕರ ಮನೆಯಲ್ಲಿ ತೂಗುಹಾಕಿರುವ ಭಾವಚಿತ್ರದಲ್ಲಿ ಮುಖ್ತಾರ್‌ ಅನ್ಸಾರಿ ಸಹಿತ ಅವರ ಕುಟುಂಬದಲ್ಲಿ ಖ್ಯಾತಿ ಮತ್ತು ಅಪಖ್ಯಾತಿ ಪಡೆದ ವ್ಯಕ್ತಿಗಳಿದ್ದಾರೆ. 

ಈ ಕುಟುಂಬದ ಅತ್ಯಂತ ಹಿರಿಯರಲ್ಲಿ ಒಬ್ಬರಾದ ಡಾ. ಮುಖ್ತಾರ್‌ ಅಹ್ಮದ್ ಅನ್ಸಾರಿ ಅವರು ಸ್ವಾತಂತ್ರ್ಯ ಯೋಧರಾಗಿದ್ದರು. 1927–28ರವರೆಗೆ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದರು. ನವದೆಹಲಿಯಲ್ಲಿರುವ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಸಂಸ್ಥಾಪಕರು ಮತ್ತು ವಿಶ್ರಾಂತ ಕುಲಪತಿಯಾಗಿದ್ದವರು. ಅನ್ಸಾರಿ ತಾಯಿಯ ತಂದೆ ಬ್ರಿಗೇಡಿಯರ್ ಮೊಹಮ್ಮದ್ ಉಸ್ಮಾನ್ ಅನ್ಸಾರಿ. ಇವರನ್ನು ನೌಶೇರಾದ ಸಿಂಹ ಎಂದೇ ಕರೆಯಲಾಗುತ್ತಿತ್ತು. ಇವರು ಮಹಾವೀರ ಚಕ್ರ ಪದಕ ವಿಜೇತರೂ ಹೌದು. ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಕೂಡಾ ಇವರ ಕುಟುಂಬದ ಸಂಬಂಧಿಕರು.

ಅದೇ ರೀತಿ ಅಪಖ್ಯಾತಿ ಪಡೆದ ಇವರ ಕುಟುಂಬದ ಸದಸ್ಯರಲ್ಲಿ ಮುಖ್ತಾರ್‌ ಸೋದರ ಅಫ್ಜಲ್ ಅನ್ಸಾರಿ ಅವರು ಬಿಎಸ್‌ಪಿ ಮುಖಂಡ ಹಾಗೂ ಗಾಜಿಪುರದ ಸಂಸದ. ಇವರಿಗೂ ಅಪರಾಧ ಹಿನ್ನೆಲೆ ಇದೆ. ಈ ಬಾರಿ ಚುನಾವಣೆಯಲ್ಲಿ ಸಮಾಜವಾದ ಪಕ್ಷವು ಇವರನ್ನು ಗಾಜಿಪುರದಿಂದ ಕಣಕ್ಕಿಳಿಸಿದೆ.

ಮುಖ್ತಾರ್‌ ಅವರ ಮತ್ತೊಬ್ಬ ಮಗ, ಸದ್ಯ ಜೈಲಿನಲ್ಲಿರುವ ಅಬ್ಬಾಸ್ ಅನ್ಸಾರಿ ಕೂಡಾ ಶಿಕ್ಷೆಗೆ ಗುರಿಯಾದ ಅಪರಾಧಿ. ಮೌಊ ಕ್ಷೇತ್ರದ ಶಾಸಕರಾಗಿದ್ದವರು. ಮತ್ತೊಬ್ಬ ಸೋದರ ಸಿಬ್ಗತುಲ್ಲಾ ಅನ್ಸಾರಿ ಅವರು ಮೊಹಮ್ಮದಾಬಾದ್‌ನ ಎರಡು ಬಾರಿ ಶಾಸಕ. 

ಮುಖ್ತಾರ್‌ ಅನ್ಸಾರಿ

ಮುಖ್ತಾರ್‌ ಅನ್ಸಾರಿ

ಎಕ್ಸ್ ಚಿತ್ರ

ಮುಖ್ತಾರ್‌ ಅನ್ಸಾರಿ

ಮುಖ್ತಾರ್‌ ಅನ್ಸಾರಿ

ಪಿಟಿಐ ಚಿತ್ರ

ರಾಜಕೀಯ–ಅಪರಾಧ ಲೋಕದ ಸಂಬಂಧ

ರಾಜಕೀಯ ಮತ್ತು ಅಪರಾಧ ಪ್ರಕರಣಗಳು ಉತ್ತರ ಪ್ರದೇಶದಲ್ಲಿ ಅವಿನಾಭಾವ ಸಂಬಂಧ ಹೊಂದಿರುವಂತವು. 90ರ ದಶಕದಲ್ಲಿ ಇಂಥ ಮೊದಲ ಚಿತ್ರಣ ಜನರ ಮುಂದೆ ಬಂದಿತು. ಪಂಚಾಯ್ತಿ ಚುನಾವಣೆಯಲ್ಲಿ ಪಾತಕ ಲೋಕದ ಬೆಂಬಲಿಗರೇ ಪ್ರಾಬಲ್ಯ ಮೆರೆದರು. 

ಪಾತಕಲೋಕದ ನಂಟಿನೊಂದಿಗೆ 1990ರಿಂದ ಮುಖ್ತಾರ್‌ ಅನ್ಸಾರಿಯ ರಾಜಕೀಯ ಜೀವನವೂ ಆರಂಭಗೊಂಡಿತು. ಬನಾರಸ್ ಹಿಂದೂ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿರುವ ಹೊತ್ತಿಗೆ, ಗುಜರಿ, ಗಣಿಗಾರಿಕೆ ಮತ್ತು ರೈಲ್ವೆ ಗುತ್ತಿಗೆಗಳಲ್ಲಿ  ಮುಖ್ತಾರ್‌ ಹಿಡಿತ ಹೆಚ್ಚಾಯಿತು. ಆತನ ಜಾಲ ಉತ್ತರ ಪ್ರದೇಶದ ಪೂರ್ವ ಭಾಗದಲ್ಲಿ ವ್ಯಾಪಿಸಿತು. 

ಪಾತಕಲೋಕದಲ್ಲಿ ಮುಖ್ತಾರ್‌ನ ಮೊದಲ ವೃತ್ತಿಯೇ ಮಖಾನು ಸಿಂಗ್‌ ಗ್ಯಾಂಗ್‌ನಲ್ಲಿ ಶೂಟರ್‌. ಜನರಲ್ಲಿ ಭೀತಿ ಹುಟ್ಟಿಸುವುದರ ಜತೆಗೆ, ಶ್ರೀಮಂತರ ಸಂಪತ್ತು ಕಿತ್ತು, ಬಡವರಿಗೆ ಹಂಚುವ ರಾಬಿನ್‌ವುಡ್‌ ಎಂದೂ ಕರೆಯಿಸಿಕೊಂಡಿದ್ದ. ತನ್ನ ಬದುಕಿನ 19 ವರ್ಷಗಳ ಕಾಲ ಜೈಲಿನಲ್ಲೇ ಕಳೆದರೂ, ಪೂರ್ವಾಂಚಲ ಪ್ರಾಂತ್ಯದ ಸುಮಾರು 100 ಕಿ.ಮೀ. ಪ್ರದೇಶದಲ್ಲಿ ಈತನ ಹೆಸರು ಪ್ರತಿಧ್ವನಿಸುತ್ತಿತ್ತು.

ಬಹುಜನ ಸಮಾಜ ಪಕ್ಷದ ಅಭ್ಯರ್ಥಿಯಾಗಿ 1996ರಲ್ಲಿ ಮುಖ್ತಾರ್‌ ಮೊದಲ ಚುನಾವಣಾ ಗೆಲುವು ದಾಖಲಿಸಿದ್ದರು. 2022ರವರೆಗೂ ಜೈಲಿನಲ್ಲಿದ್ದರೂ ಐದು ಬಾರಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ಹಲವರ ಹುಬ್ಬೇರಿಸಿದ್ದಾರೆ. 2009ರಲ್ಲಿ ವಾರಾಣಸಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಈತ ಬಿಜೆಪಿಯ ಮುರಳಿ ಮನೋಹರ ಜೋಶಿ ವಿರುದ್ಧ ಪರಾಭವಗೊಂಡಿದ್ದ. ಈ ಕ್ಷೇತ್ರವನ್ನು ಈಗ ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುತ್ತಿದ್ದಾರೆ.

2012ರ ವಿಧಾನಸಭಾ ಚುನಾವಣೆಯಲ್ಲಿ ಶಾಸಕರಾದ 403 ಜನರಲ್ಲಿ 205 ಜನರ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ. 2017ರಲ್ಲಿ ಈ ಸಂಖ್ಯೆ 143ಕ್ಕೆ ತಗ್ಗಿದೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್‌ ಹೇಳಿದೆ.

ಮುಖ್ತಾರ್‌ ಅನ್ಸಾರಿ ವಿರುದ್ಧದ ಪ್ರಕರಣಗಳು

2005ರಿಂದ ಸಾಯುವ ಕ್ಷಣದವರೆಗೂ ಮುಖ್ತಾರ್‌ ಅನ್ಸಾರಿ ವಿರುದ್ಧ ಉತ್ತರ ಪ್ರದೇಶ ಮತ್ತು ಪಂಜಾಬ್‌ನ ಹಲವು ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.

  • 28 ಕ್ರಿಮಿನಲ್ ಪ್ರಕರಣಗಳಿವೆ. ಇದರಲ್ಲಿ ಕೊಲೆ ಹಾಗೂ ಉತ್ತರ ಪ್ರದೇಶ ಗ್ಯಾಂಗ್‌ಸ್ಟರ್‌ ಕಾಯ್ದೆಯಡಿ ಏಳು ಪ್ರಕರಣಗಳು ದಾಖಲಾಗಿವೆ.

  • 2022ರಿಂದ ಎಂಟು ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. 21 ಪ್ರಕರಣಗಳ ವಿಚಾರಣೆ ವಿವಿಧ ನ್ಯಾಯಾಲಯಗಳಲ್ಲಿ ನಡೆಯುತ್ತಿದೆ.

  • 37 ವರ್ಷಗಳ ಹಿಂದಿನ ಬಂದೂಕು ಪರವಾನಗಿ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಹಾಗೂ ₹2.02 ಲಕ್ಷ ದಂಡವನ್ನು ಅನ್ಸಾರಿಗೆ ವಿಧಿಸಲಾಗಿದೆ. ಕಳೆದ 18 ತಿಂಗಳುಗಳಲ್ಲಿ ಅನ್ಸಾರಿಗೆ ಜೀವಾವಧಿ ಶಿಕ್ಷೆಯಾಗಿದ್ದ ಎಂಟನೇ ಪ್ರಕರಣ ಇದಾಗಿದೆ.

  • ಮಹಾವೀರ್ ಪ್ರಸಾದ್ ರುಂಗ್ಟಾ ಅವರ ಕೊಲೆ ಬೆದರಿಕೆಗೆ ಸಂಬಂಧಿಸಿದಂತೆ 5.5 ವರ್ಷಗಳ ಜೈಲು ಶಿಕ್ಷೆಯನ್ನು ವಾರಾಣಸಿ ಜನಪ್ರತಿನಿಧಿಗಳ ನ್ಯಾಯಾಲಯವು 2023ರಲ್ಲಿ ವಿಧಿಸಿತ್ತು.

  • 2023ರ ಅ. 27ರಂದು ಘಾಝಿಯಾಪುರ ಜನಪ್ರತಿನಿಧಿಗಳ ನ್ಯಾಯಾಲಯವು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹5 ಲಕ್ಷ ದಂಡ ವಿಧಿಸಿತ್ತು.

  • ಅವದೇಶ ರಾಯ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 2023ರ ಜೂನ್ 5ರಂದು ವಾರಾಣಸಿ ಜನಪ್ರತಿನಿಧಿಗಳ ನ್ಯಾಯಾಲಯವು ಜೀವಾವಧಿ ಶಿಕ್ಷೆ ಪ್ರಕಟಿಸಿತ್ತು.

  • ಕೃಷ್ಣಾನಂದ ರಾಯ್ ಕೊಲೆ ಪ್ರಕರಣದಲ್ಲಿ 2023ರ ಏ. 29ರಂದು ಜನಪ್ರತಿನಿಧಿಗಳ ನ್ಯಾಯಾಲಯವು 10 ವರ್ಷಗಳ ಕಾರಾಗೃಹ ಶಿಕ್ಷೆ ನೀಡಿತ್ತು.

  • 1996 ಹಾಗೂ 2007ರ ಎರಡು ಗ್ಯಾಂಗ್‌ಸ್ಟರ್ ಕಾಯ್ದೆ ಪ್ರಕರಣದಲ್ಲಿ 10 ವರ್ಷ ಜೈಲು ಮತ್ತು ₹5 ಲಕ್ಷ ದಂಡವನ್ನು ಅನ್ಸಾರಿಗೆ ನ್ಯಾಯಲಯ ವಿಧಿಸಿದೆ.

  • ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ ಪಂಜಾಬ್‌ನಲ್ಲಿದ್ದ ಅನ್ಸಾರಿಯನ್ನು ಉತ್ತರ ಪ್ರದೇಶದ ವಶಕ್ಕೆ ನೀಡಲಾಯಿತು.

  • 2020ರಿಂದ ಈಚೆಗೆ ಅನ್ಸಾರಿ ಗ್ಯಾಂಗ್‌ಗೆ ಪೊಲೀಸ್ ಬಿಸಿ ಮುಟ್ಟಿಸಿದೆ. ಈ ಗ್ಯಾಂಗ್‌ನವರಿಗೆ ಸೇರಿದ ಅಕ್ರಮ ಮನೆಗಳನ್ನು ನೆಲಸಮಗೊಳಿಸಲಾಗಿದೆ. ಇದರ ಮೊತ್ತ ಸುಮಾರು ₹608 ಕೋಟಿ ಎಂದು ಅಂದಾಜಿಸಲಾಗಿದೆ. ಅಕ್ರಮ ವ್ಯವಹಾರಗಳಿಗೆ ಕಡಿವಾಣ ಹಾಕಲಾಗಿದೆ. ಇದರ ಒಟ್ಟು ಮೊತ್ತ ₹215 ಕೋಟಿ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT