ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಂಪುಕೋಟೆ ದಾಳಿ ಪ್ರಕರಣ: ಪಾಕ್ ಉಗ್ರನಿಗೆ ಕ್ಷಮಾದಾನ ನೀಡಲು ರಾಷ್ಟ್ರಪತಿ ನಕಾರ

Published 12 ಜೂನ್ 2024, 13:31 IST
Last Updated 12 ಜೂನ್ 2024, 13:31 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿಯ ಕೆಂಪುಕೋಟೆ ಮೇಲೆ 24 ವರ್ಷಗಳ ಹಿಂದೆ ದಾಳಿ ನಡೆಸಿದ್ದ ಪಾಕಿಸ್ತಾನದ ಭಯೋತ್ಪಾದಕ ಮೊಹಮ್ಮದ್ ಆರೀಫ್‌ ಅಲಿಯಾಸ್ ಅಶ್ಫಕ್‌ ಕ್ಷಮಾಪಣಾ ಅರ್ಜಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ತಿರಸ್ಕರಿಸಿದ್ದಾರೆ. 

2022ರ ಜುಲೈ 25ಕ್ಕೆ ಅಧಿಕಾರ ವಹಿಸಿಕೊಂಡ ನಂತರ ಮುರ್ಮು ಅವರು ತಿರಸ್ಕರಿಸುತ್ತಿರುವ ಎರಡನೇ ಕ್ಷಮಾಪಣಾ ಅರ್ಜಿ ಇದಾಗಿದೆ.

ಕೆಂಪುಕೋಟೆ ಮೇಲೆ ದಾಳಿ ನಡೆಸಿದ್ದ ಪ್ರಕರಣದಲ್ಲಿ ಅಶ್ಫಕ್‌ಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿತ್ತು. ಶಿಕ್ಷೆಯನ್ನು ಪುನರ್‌ ಪರಿಶೀಲಿಸುವಂತೆ ಆತ ಸಲ್ಲಿಸಿದ್ದ ಅರ್ಜಿಯನ್ನು 2022ರ ನ. 3ರಂದು ಸುಪ್ರೀಂ ಕೋರ್ಟ್‌ ವಜಾಗೊಳಿಸಿತು. ಕೆಂಪುಕೋಟೆ ಮೇಲಿನ ದಾಳಿಯು ದೇಶದ ಏಕತೆ, ಸಮಗ್ರತೆ ಹಾಗೂ ಸಾರ್ವಭೌಮತೆ ಮೇಲೆ ನಡೆದಿರುವ ದಾಳಿಯಾಗಿದೆ ಎಂದು ಅಭಿಪ್ರಾಯಪಟ್ಟ ಸುಪ್ರೀಂ ಕೋರ್ಟ್‌, ಆರೀಫ್ ಪರವಾಗಿ ಅನುಕಂಪ ತೋರುವ ಯಾವುದೇ ಸನ್ನಿವೇಶಗಳಿಲ್ಲ ಎಂದಿತ್ತು. ಇದಾದ ನಂತರ ಕ್ಷಮಾದಾನ ನೀಡುವಂತೆ ರಾಷ್ಟ್ರಪತಿಯನ್ನು ಈತ ಕೋರಿದ್ದ.

‘ಆರೀಫ್‌ನ ಕ್ಷಮಾಪಣಾ ಅರ್ಜಿಯು ಮೇ 15ರಂದು ಸ್ವೀಕರಿಸಲಾಗಿದೆ. ಇದನ್ನು ಮೇ 27ರಂದು ರಾಷ್ಟ್ರಪತಿ ಅವರು ತಿರಸ್ಕರಿಸಿದರು. ಆದೇಶವು ಮೇ 29ರಂದು ಹೊರಡಿಸಲಾಗಿದೆ’ ಎಂದು ರಾಷ್ಟ್ರಪತಿ ಅವರ ಕಾರ್ಯದರ್ಶಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಕೆಂಪುಕೋಟೆ ಮೇಲಿನ ಘಟನೆಯು 2000ದ ಡಿ. 22ರಂದು ನಡೆದಿತ್ತು. ಕೆಂಪು ಕೋಟೆಗೆ ಭದ್ರತೆ ನೀಡುತ್ತಿದ್ದ 7 ರಜಪೂತ್ ರೈಫಲ್ಸ್‌ನ ಯೋಧರ ಮೇಲೆ ಆರೀಫ್‌ ನಡೆಸಿದ್ದ ಗುಂಡಿನ ದಾಳಿಯಲ್ಲಿ, ಮೂವರು ಯೋಧರು ಹುತಾತ್ಮರಾಗಿದ್ದರು.

ಆರೀಫ್‌ ಪಾಕಿಸ್ತಾನದ ಪ್ರಜೆ ಹಾಗೂ ನಿಷೇಧಿತ ಲಷ್ಕರ್‌–ಎ–ತಯಬಾದ ಸದಸ್ಯ. ಈತನನ್ನು ಘಟನೆ ನಡೆದ ಕೆಲ ದಿನಗಳ ಬಳಿಕ ದೆಹಲಿ ಪೊಲೀಸರು ಬಂಧಿಸಿದ್ದರು. 2005ರ ಅಕ್ಟೋಬರ್‌ನಲ್ಲಿ ಈತನಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿತ್ತು. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಶಿಕ್ಷೆಯನ್ನು ಎತ್ತಿ ಹಿಡಿದಿದ್ದವು.

ಈ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾಗಿದ್ದರೂ, ಶಿಕ್ಷೆ ನೀಡುವಲ್ಲಿ ಆಗಿರುವ ವಿಳಂಬವನ್ನು ಸಂವಿಧಾನದ 32ನೇ ಪರಿಚ್ಛೇಧದಲ್ಲಿ ನೀಡಿರುವ ಅವಕಾಶದಂತೆ ಮತ್ತೊಮ್ಮೆ ಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಕಾನೂನು ಪಂಡಿತರು ಹೇಳುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT