ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅನಂತ್ ಅಂಬಾನಿ ವಿವಾಹ ಸಮಾರಂಭದಲ್ಲಿ ಪ್ರಿಯಾಂಕಾ ಗಾಂಧಿ ಪಾಲ್ಗೊಂಡಿಲ್ಲ: ಕಾಂಗ್ರೆಸ್

Published 6 ಆಗಸ್ಟ್ 2024, 13:15 IST
Last Updated 6 ಆಗಸ್ಟ್ 2024, 13:15 IST
ಅಕ್ಷರ ಗಾತ್ರ

ನವದೆಹಲಿ: ರಿಲಯನ್ಸ್‌ ಸಮೂಹ ಸಂಸ್ಥೆಯ ಮುಖ್ಯಸ್ಥ ಮುಖೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ವಿವಾಹ ಸಮಾರಂಭದಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಪಾಲ್ಗೊಂಡಿರಲಿಲ್ಲ ಎಂದು ಕಾಂಗ್ರೆಸ್ ಮಂಗಳವಾರ ಸ್ಪಷ್ಟಪಡಿಸಿದೆ.

ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರ ಆರೋಪಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್, ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಈ ವಿಷಯ ಹಂಚಿಕೊಂಡಿದೆ. ಜತೆಗೆ ಕಾಂಗ್ರೆಸ್‌ ಮುಖಂಡ ಕೆ.ಸಿ. ವೇಣುಗೋಪಾಲ್ ಅವರು ಈ ವಿಷಯವನ್ನು ಲೋಕಸಭೆಯಲ್ಲೂ ಪ್ರಸ್ತಾಪಿಸಿದ್ದಾರೆ. ‘ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳುವುದರಲ್ಲಿ ತಪ್ಪೇನಿದೆ’ ಎಂದು ಹೇಳುವ ಮೂಲಕ ವೇಣುಗೋಪಾಲ್ ಅವರನ್ನು ಎನ್‌ಸಿಪಿ (ಎಸ್‌ಪಿ)ಯ ಸಂಸದೆ ಸುಪ್ರಿಯಾ ಸುಳೆ ಬೆಂಬಲಿಸಿದ್ದಾರೆ.

‘ಪ್ರಿಯಾಂಕಾ ಗಾಂಧಿ ಅವರು ಅಂಬಾನಿ ಕುಟುಂಬದ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ ಎಂದು ಬಿಜೆಪಿ ಮುಖಂಡ ನಿಶಿಕಾಂತ್ ದುಬೆ ಅವರು ಲೋಕಸಭೆಯಲ್ಲಿ ಹಸಿ ಸುಳ್ಳು ಹೇಳಿದ್ದಾರೆ. ಪ್ರಿಯಾಂಕಾ ಅವರು ಆ ಸಮಯದಲ್ಲಿ ದೇಶದಲ್ಲೇ ಇರಲಿಲ್ಲ. ಹೀಗಾಗಿ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೇಗೆ ಸಾಧ್ಯ’ ಎಂದು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನೇತ್ ಪ್ರಶ್ನಿಸಿದ್ದಾರೆ.

‘ನಕಲಿ ಪದವಿ ಪತ್ರ ಹೊಂದಿರುವವರಿಗೆ ಸುಳ್ಳು ಹೇಳುವ ಕೊಳಕು ಕಾಯಿಲೆ ಇದೆ. ಪ್ರಿಯಾಂಕಾ ಗಾಂಧಿ ಅವರು ಸದ್ಯ ಲೋಕಸಭಾ ಸದಸ್ಯೆ ಅಲ್ಲ. ಆದರೂ ಅವರ ವಿಷಯ ಇಲ್ಲಿ ಚರ್ಚೆಗೊಳ್ಳುತ್ತಿರುವುದು ವಿಶೇಷವೇ ಸರಿ’ ಎಂದಿದ್ದಾರೆ.

‘ಲೋಕಸಭೆಯಲ್ಲಿ ಬಿಜೆಪಿಯ ಈ ಸಂಸದ ಹಸಿ ಸುಳ್ಳನ್ನು ಹೇಳಿದ್ದಾರೆ. ಇದಕ್ಕಾಗಿ ಅವರು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಹೆಸರನ್ನು ನಿಶಿಕಾಂತ್ ದೂಬೇ ಎಂಬುದರ ಬದಲು ನಿಶಿಕಾಂತ್ ಜೂಟೆ (ಸುಳ್ಳು ಹೇಳುವವ) ಎಂದು ಬದಲಿಸಿಕೊಳ್ಳಬೇಕು’ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಬಿಜೆಪಿ ಸಂಸದ ದುಬೇ ಹೇಳಿಕೆಗೆ ಪ್ರತಿಕ್ರಿಯಿಸಿದ ವೇಣುಗೋಪಾಲ್, ‘ಲೋಕಸಭೆಯ ಪ್ರಶ್ನೋತ್ತರ ಸಂದರ್ಭದಲ್ಲಿ ಇಂಥದ್ದೊಂದು ಹೇಳಿಕೆಗೆ ಪೀಠ ಅನುವು ಮಾಡಿಕೊಟ್ಟಿದ್ದು ಸರಿಯಲ್ಲ. ಸುಪ್ರಿಯಾ ಸುಳೆ ಹೇಳಿದಂತೆ ಯಾವುದೇ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರೂ ಈ ವಿವಾಹದಲ್ಲಿ ಪಾಲ್ಗೊಂಡಿದ್ದಾರೆ. ಆದರೆ ಅದಕ್ಕೆ ಸಂಬಂಧಿಸಿದಂತೆ ಸುಳ್ಳು ಕಥೆ ಕಟ್ಟುವುದು ಸರಿಯಲ್ಲ’ ಎಂದರು.

‘ಸುಳ್ಳು ಹೇಳುವುದು, ಒಬ್ಬರ ವಿರುದ್ಧ ಕಟ್ಟು ಕಥೆ ಕಟ್ಟುವುದು ಬಿಜೆಪಿಗಿರುವ ಸಮಸ್ಯೆ. ಇಂಥ ಚಾಳಿಯಿಂದ ಇವರು ಹಲವು ಕುಟುಂಬಗಳನ್ನೇ ನಾಶ ಮಾಡಿದ್ದಾರೆ. ನನ್ನ ಕುಟುಂಬದ ವಿರುದ್ಧವೂ ಇವರು ಕಟ್ಟು ಕಥೆಗಳನ್ನು ಕಟ್ಟಿದ್ದಾರೆ. ಇದು ಆ ವ್ಯಕ್ತಿಯ ಕುಟುಂಬದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂದು ಯೋಚಿಸಿದ್ದೀರಾ’ ಎಂದು ಬಿಜೆಪಿ ನಾಯಕರನ್ನು ವೇಣುಗೋಪಾಲ್ ಪ್ರಶ್ನಿಸಿದರು.

‘ಇಂಥದ್ದೇ ಸುಳ್ಳು ಹೇಳಿಕೆ, ಆರೋಪಗಳ ಮೂಲಕ ಹಲವರ ವಿರುದ್ಧ ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಆರೋಪ ಎದುರಿಸುವ ವ್ಯಕ್ತಿಯ ಪತ್ನಿ ಹಾಗೂ ಮಕ್ಕಳ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನ ಒಮ್ಮೆ ಯೋಚಿಸಿ. ಗೃಹ ಸಚಿವ ಅಮಿತ್ ಶಾ ಹೇಳುವಂತೆ, ಒಬ್ಬರ ವಿರುದ್ಧ ಬೊಟ್ಟು ಮಾಡಿ ಆರೋಪ ಮಾಡುವಾಗ, ಮೂರು ಬೆರಳುಗಳು ನಮ್ಮ ಕಡೆಯೇ ಬೊಟ್ಟು ಮಾಡಿರುತ್ತವೆ ಎಂಬ ಅವರ ಮಾತು ಈ ಘಟನೆಗೆ ಹೆಚ್ಚು ಸೂಕ್ತ’ ಎಂದಿದ್ದಾರೆ.

ಅಂಬಾನಿ ಕುಟುಂಬದ ವಿವಾಹ ಸಮಾರಂಭದಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರೂ ಪಾಲ್ಗೊಂಡಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT