ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ ಅಕ್ರಮ ವರ್ಗಾವಣೆ: ದೋಷಾರೋಪಪಟ್ಟಿಯಲ್ಲಿ ಪ್ರಿಯಾಂಕಾ ಗಾಂಧಿ ಹೆಸರು ಉಲ್ಲೇಖ

Published 28 ಡಿಸೆಂಬರ್ 2023, 14:51 IST
Last Updated 28 ಡಿಸೆಂಬರ್ 2023, 14:51 IST
ಅಕ್ಷರ ಗಾತ್ರ

ನವದೆಹಲಿ: ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ (ಇ.ಡಿ) ಸಲ್ಲಿಸಿರುವ ದೋಷಾರೋಪಪಟ್ಟಿಯಲ್ಲಿ ಇದೇ ಮೊದಲ ಬಾರಿಗೆ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಹೆಸರನ್ನು ಉಲ್ಲೇಖಿಸಲಾಗಿದೆ.

ಹರಿಯಾಣದಲ್ಲಿ 2005–06ರಲ್ಲಿ ರಿಯಲ್‌ ಎಸ್ಟೇಟ್‌ ಏಜೆಂಟರಿಂದ ಮೂರು ಜಮೀನು ಖರೀದಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಉದ್ಯಮಿ ರಾಬರ್ಟ್‌ ವಾದ್ರಾ ಮತ್ತು ಅವರ ಪತ್ನಿ ಪ್ರಿಯಾಂಕಾ ಗಾಂಧಿ ಅವರ ವಿರುದ್ಧ ತನಿಖೆ ಮುಂದುವರಿದಿದೆ ಎಂದು ಇ.ಡಿ ದೋಷಾರೋಪ ಪಟ್ಟಿಯಲ್ಲಿ ತಿಳಿಸಿದೆ.

ಆದರೆ, ರಾಬರ್ಟ್‌ ವಾದ್ರಾ ಮತ್ತು ಪ್ರಿಯಾಂಕಾ ಅವರನ್ನು ಆರೋಪಿಗಳೆಂದು ಹೆಸರಿಸಿಲ್ಲ ಎಂದು ಮೂಲಗಳು ತಿಳಿಸಿವೆ.

ರಾಬರ್ಟ್ ವಾದ್ರಾ ಮತ್ತು ಮಧ್ಯವರ್ತಿ ಸಂಜಯ್‌ ಭಂಡಾರಿ ಅವರ ಸಂಬಂಧಿ ಸುಮಿತ್‌ ಚಡ್ಡಾ ಅವರ ನಿಕಟವರ್ತಿಯಾಗಿರುವ ಯುಎಇ ಮೂಲದ ಅನಿವಾಸಿ ಭಾರತೀಯ ಉದ್ಯಮಿ ಸಿ.ಸಿ. ತಂಬಿ ವಿರುದ್ಧ ಇ.ಡಿ ನವೆಂಬರ್‌ನಲ್ಲಿ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿತ್ತು. ಇದರಲ್ಲಿ ವಾದ್ರಾ ಮತ್ತು ಪ್ರಿಯಾಂಕಾ ಅವರ ಹೆಸರು ಉಲ್ಲೇಖಿಸಲಾಗಿದೆ.

ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯ ವಿಶೇಷ ನ್ಯಾಯಾಲಯವು ಡಿಸೆಂಬರ್‌ 22ರಂದು ದೋಷಾರೋಪ ಪಟ್ಟಿಯನ್ನು ಪರಿಶೀಲಿಸಿದ್ದು, ಮುಂದಿನ ವಿಚಾರಣೆಯನ್ನು ಜನವರಿ 29ರಂದು ನಡೆಸಲು ನಿಗದಿ ಮಾಡಿದೆ.

ಈ ಪ್ರಕರಣಕ್ಕೆ ಸಂಬಂಧಿಸಿ ರಾಬರ್ಟ್‌ ವಾದ್ರಾ ಅವರನ್ನು ಇ.ಡಿ. ಈ ಹಿಂದೆ ವಿಚಾರಣೆಗೆ ಒಳಪಡಿಸಿತ್ತು. ಅವರು ತಮ್ಮ ಮೇಲಿನ ಆರೋಪಗಳನ್ನು ಅಲ್ಲಗಳೆದಿದ್ದರು.

2005–2008ರ ನಡುವೆ ತಂಬಿ ಅವರು ದೆಹಲಿ–ಎನ್‌ಸಿಆರ್‌ ಮೂಲದ ರಿಯಲ್‌ ಎಸ್ಟೇಟ್‌ ಏಜೆಂಟ್‌ ಎಚ್‌.ಎಲ್‌. ಪಹ್ವಾ ಎಂಬವರ ಮೂಲಕ ಹರಿಯಾಣದ ಫರೀದಾಬಾದ್‌ನ ಅಮಿರ್‌ಪುರ ಗ್ರಾಮದಲ್ಲಿ 486 ಎಕರೆ ಜಮೀನು ಖರೀದಿಸಿದ್ದರು ಎಂದು ಇ.ಡಿ ಹೇಳಿದೆ.‌

ರಾಬರ್ಟ್‌ ವಾದ್ರಾ ಅವರು ಇದರಲ್ಲಿ ಮೂರು ಭಾಗಗಳಾಗಿ 40.08 ಎಕರೆ ಜಾಗವನ್ನು ಖರೀದಿಸಿರುವುದರಿಂದ ಅವರ ಹೆಸರನ್ನು ಉಲ್ಲೇಖಿಸಲಾಗಿದೆ ಎಂದು ಇ.ಡಿ ತಿಳಿಸಿದೆ.

ಎಚ್‌.ಎಲ್‌. ಪಹ್ವಾ ಅವರಿಂದ 2006ರಲ್ಲಿ ಅಮಿರ್‌ಪುರ ಗ್ರಾಮದಲ್ಲಿ ಪ್ರಿಯಾಂಕಾ ಗಾಂಧಿ ಅವರು ಕೂಡ 5 ಎಕರೆ ಕೃಷಿ ಭೂಮಿ ಖರೀದಿಸಿದ್ದರು ಎಂದೂ ಹೇಳಿದೆ.

ಜಮೀನು ಖರೀದಿ ವ್ಯವಹಾರದಲ್ಲಿ ರಾಬರ್ಟ್‌ ವಾದ್ರಾ ಅವರು ಪಹ್ವಾ ಅವರಿಗೆ ಪೂರ್ತಿ ಹಣ ಪಾವತಿಸಿರುವುದರ ಲೆಕ್ಕ ಪತ್ರ ಸಿಕ್ಕಿಲ್ಲ.  ಈ ಕುರಿತು ತನಿಖೆ ನಡೆಯುತ್ತಿದೆ ಎಂದು ವಿವರಿಸಿದೆ. ತಂಬಿ ಅವರನ್ನು 2020ರಲ್ಲಿ ಇ.ಡಿ. ಬಂಧಿಸಿತ್ತು.

ಸಂಜಯ್ ಭಂಡಾರಿ 2016ರಲ್ಲಿ ಬ್ರಿಟನ್‌ಗೆ ಪಲಾಯನ ಮಾಡಿದ್ದು, ಇ.ಡಿ ಹಾಗೂ ಸಿಬಿಐ ಮಾಡಿರುವ ವಿನಂತಿಯ ಮೇರೆಗೆ ಅವರನ್ನು ಜನವರಿಯಲ್ಲಿ ಭಾರತಕ್ಕೆ ಹಸ್ತಾಂತರಿಸಲು ಬ್ರಿಟನ್‌ ಸರ್ಕಾರ ಒಪ್ಪಿಗೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT