ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕರಾಳ ದಿನ’: ಪಂಜಾಬ್‌ನ ಹಲವೆಡೆ ಕಪ್ಪು ಧ್ವಜ ಹಾರಿಸಿ ರೈತರ ಪ್ರತಿಭಟನೆ

Last Updated 26 ಮೇ 2021, 8:40 IST
ಅಕ್ಷರ ಗಾತ್ರ

ಚಂಡೀಗಡ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಆರು ತಿಂಗಳು ಪೂರ್ಣಗೊಂಡಿದ್ದು, ಇದರ ಅಂಗವಾಗಿ ಬುಧವಾರ ‘ಕರಾಳ ದಿನ’ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪಂಜಾಬ್‌ನ ಹಲವೆಡೆ ರೈತರು ತಮ್ಮ ಮನೆಗಳ ಮೇಲೆ ‘ಕಪ್ಪು ಧ್ವಜ’ಗಳನ್ನು ಹಾರಿಸಿದ್ದಾರೆ.

ಶಿರೋಮಣಿ ಅಕಾಲಿದಳದ ಮುಖ್ಯಸ್ಥ ಸುಖ್‌ಬಿರ್‌ ಸಿಂಗ್ ಬಾದಲ್‌ ಅವರು ಮುಕ್ತಸರ್‌ ಜಿಲ್ಲೆಯ ಬಾದಲ್‌ ಗ್ರಾಮದಲ್ಲಿರುವ ತಮ್ಮ ಮನೆಯ ಮೇಲೆ ಕಪ್ಪು ಧ್ವಜ ಹಾರಿಸುವ ಮೂಲಕ ರೈತರಿಗೆ ಬೆಂಬಲ ಸೂಚಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು,‘ರೈತರ ಆಂದೋಲನವು ಇವತ್ತಿಗೆ ಆರು ತಿಂಗಳು ಪೂರೈಸಿದೆ. ರೈತರ ಬೇಡಿಕೆಗಳಂತೆ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆನಾನು ಮತ್ತೊಮ್ಮೆ ಮನವಿ ಮಾಡುತ್ತಿದ್ದೇನೆ. ನನ್ನ ಮನೆಯ ಮೇಲೆ ಕಪ್ಪು ಧ್ವಜ ಹಾರಿಸಿದ್ದೇನೆ. ಅಕಾಲಿದಳದ ಇತರ ನಾಯಕರು ಕೂಡ ಕಪ್ಪು ಧ್ವಜ ಹಾರಿಸಿದ್ದಾರೆ’ ಎಂದರು.

ಈ ಕರಾಳ ದಿನಾಚರಣೆಗೆ ಕಾಂಗ್ರೆಸ್‌, ಶಿರೋಮಣಿ ಅಕಾಲಿದಳ, ಆಮ್‌ ಆದ್ಮಿ ಪಾರ್ಟಿ ಸೇರಿದಂತೆ ಹಲವು ಪಕ್ಷಗಳು ಬೆಂಬಲ ಸೂಚಿಸಿವೆ.

ಪಂಜಾಬ್‌ನ ಹಲವೆಡೆ ರೈತರು ಕಪ್ಪು ಧ್ವಜವನ್ನು ಹಿಡಿದು, ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ವೇಳೆ ಕೇಂದ್ರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಹರಿಯಾಣದಲ್ಲೂ ಇದೇ ರೀತಿಯ ಪ್ರತಿಭಟನೆಯನ್ನು ನಡೆಸಲಾಯಿತು.

‘ಕೇಂದ್ರ ಸರ್ಕಾರವು ರೈತರೊಂದಿಗಿನ ಮಾತುಕತೆಯನ್ನು ಮತ್ತೆ ಆರಂಭಿಸಬೇಕು’ ಎಂದು ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರು ಮಂಗಳವಾರ ಮನವಿ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT