ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪಕ್ಷಭೇದ ಮರೆತು ನಾಯಕರಿಂದ ಅಂತಿಮ ದರ್ಶನ: ಶರದ್ ಯಾದವ್ ಅಂತ್ಯಕ್ರಿಯೆ ಇಂದು

Last Updated 13 ಜನವರಿ 2023, 19:32 IST
ಅಕ್ಷರ ಗಾತ್ರ

ನವದೆಹಲಿ: ಅನಾರೋಗ್ಯ ದಿಂದ ಗುರುವಾರ ರಾತ್ರಿ ನಿಧನರಾದ ಸಮಾಜವಾದಿ ನಾಯಕ ಶರದ್ ಯಾದವ್ ಅವರ ಅಂತ್ಯಕ್ರಿಯೆಯು ಮಧ್ಯಪ್ರದೇಶದಲ್ಲಿನ ಅವರ ಸ್ವಗ್ರಾಮದಲ್ಲಿ ಶನಿವಾರ ನಡೆಯಲಿದೆ.

ದೆಹಲಿಯ ಛತರ್‌ಪುರದಲ್ಲಿನ ನಿವಾಸದಲ್ಲಿ ಅವರ ಅಂತಿಮದರ್ಶನಕ್ಕೆ ಶುಕ್ರವಾರ ವ್ಯವಸ್ಥೆ ಮಾಡಲಾಗಿತ್ತು. ಪಕ್ಷಭೇದ ಮರೆತು ಎಲ್ಲ ಪಕ್ಷಗಳ ನಾಯಕರು ಶರದ್ ಅವರಿಗೆ ಅಂತಿಮ ನಮನ ಸಲ್ಲಿಸಿದರು.

ಬಿಹಾರ ಸರ್ಕಾರವು ಒಂದು ದಿನದ ಶೋಕಾಚರಣೆಯನ್ನು ಶುಕ್ರವಾರ ಘೋಷಿಸಿತ್ತು.

ಪಂಜಾಬ್‌ನಿಂದ ದೆಹಲಿಗೆ ಹಿಂತಿರುಗಿದ್ದ ಕಾಂಗ್ರೆಸ್‌ನ ರಾಹುಲ್ ಗಾಂಧಿ ಅವರು, ಬೆಳಿಗ್ಗೆ 8.30ಕ್ಕೆ ಶರದ್ ಅವರ ನಿವಾಸಕ್ಕೆ ಭೇಟಿ ನೀಡಿದರು. ಶರದ್ ಅವರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ‘ಶರದ್ ಯಾದವ್ ಅವರಂತಹ ದೊಡ್ಡ ನಾಯಕರಿಂದ ನಾನು ಬಹಳಷ್ಟು ಕಲಿತಿದ್ದೇನೆ’ ಎಂದು ಅವರು ಹೇಳಿದರು.

ಆನಂತರ ಕೇಂದ್ರ ಗೃಹಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್‌, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ಡಿ ದೇವಿ ಅವರು ಭೇಟಿ ನೀಡಿ, ಅಂತಿಮ ನಮನ ಸಲ್ಲಿಸಿದರು. ಹರಿಯಾಣ ಮುಖ್ಯಮಂತ್ರಿ ಮನೋಹರ ಲಾಲ್ ಖಟ್ಟರ್, ಸಮಾಜವಾದಿ ಪಕ್ಷದ ನಾಯಕ ರಾಮ್‌ ಗೋಪಾಲ್ ಯಾದವ್, ಆರ್‌ಜೆಡಿಯ ಮನೀಜ್‌ ಝಾ ಅವರೂ ಅಗಲಿದ ನಾಯಕನಿಗೆ ಅಂತಿಮ ನಮನ ಸಲ್ಲಿಸಿದರು.

ಮಧ್ಯಪ್ರದೇಶದ ಹೋಶಂಗಾಬಾದ್‌ ಜಿಲ್ಲೆಯ ಅನ್‌ಖ್ಮಾವು ಗ್ರಾಮದಲ್ಲಿ ಶನಿವಾರ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ.

ದೊಡ್ಡಣ್ಣನಂತಿದ್ದರು: ಲಾಲು ಪ್ರಸಾದ್‌
‘ನಾನು, ಶರದ್ ಯಾದವ್, ನಿತೀಶ್ ಕುಮಾರ್ ಮತ್ತು ಮುಲಾಯಂ ಸಿಂಗ್ ಯಾದವ್ ಅವರು ರಾಜಕೀಯ ಹಾಗೂ ಸಮಾಜವಾದವನ್ನು ರಾಮ ಮನೋಹರ್ ಲೋಹಿಯಾ ಮತ್ತು ಕರ್ಪೂರಿ ಠಾಕೂರ್‌ ಅವರಿಂದ ಕಲಿತೆವು. ನಾನು ಮತ್ತು ಶರದ್ ಚುನಾವಣೆಗಳಲ್ಲಿ ಪರಸ್ಪರ ಎದುರಾಳಿಗಳಾಗಿದ್ದೆವು. ಆದರೆ ಆ ಸ್ಪರ್ಧೆ ಮತ್ತು ನಮ್ಮ ನಡುವಣ ಭಿನ್ನಾಭಿಪ್ರಾಯಗಳು ಯಾವತ್ತಿಗೂ ದ್ವೇಷದ ರೂಪ ಪಡೆಯಲಿಲ್ಲ. ಅವರು ಸದಾ ನನಗೆ ದೊಡ್ಡಣ್ಣನಂತಿದ್ದರು’ ಎಂದು ಆರ್‌ಜೆಡಿ ನಾಯಕ ಲಾಲು ಪ್ರಸಾದ್‌ ಹೇಳಿದ್ದಾರೆ.

ಅನಾರೋಗ್ಯದ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲಾಲು ಅವರು, ಅಲ್ಲಿಂದಲೇ ಸಂತಾಪದ ವಿಡಿಯೊ ಬಿಡುಗಡೆ ಮಾಡಿದ್ದಾರೆ.

‘ಎಲ್ಲರೂ ಒಟ್ಟಾದರೆ ನಿರ್ವಾತ ತುಂಬಬಹುದು’: ‘ನಮ್ಮ ತಂದೆ ತೋರಿಸಿಕೊಟ್ಟ ಧ್ಯೇಯಗಳನ್ನು ಉಳಿಸಿಕೊಳ್ಳುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ. ಅವರ ನಿಧನದಿಂದ ದೊಡ್ಡ ನಿರ್ವಾತ ನಿರ್ಮಾಣವಾಗಿದೆ. ಅವರ ಚಿಂತನೆಗಳು ಮತ್ತು ಸಿದ್ಧಾಂತಗಳೊಂದಿಗೆ ಸಹಮತ ಹೊಂದಿರುವವರೆಲ್ಲರೂ ಒಟ್ಟಾಗುವುದರ ಮೂಲಕ ಮಾತ್ರ ಆ ನಿರ್ವಾತವನ್ನು ತುಂಬಬಹುದಾಗಿದೆ’ ಎಂದು ಶರದ್ ಯಾದವ್ ಅವರ ಮಗಳು ಸುಭಾಷಿಣಿ ಹೇಳಿದ್ದಾರೆ.

*
ಇದು ದೇಶಕ್ಕೆ ತುಂಬಲಾರದ ನಷ್ಟ. ಐದು ದಶಕಗಳಲ್ಲಿ ಶರದ್ ಯಾದವ್ ಅವರು ಜನರ ಸಮಸ್ಯೆಗಳ ಬಗ್ಗೆ ದನಿ ಎತ್ತಿದ್ದರು ಮತ್ತು ಕೊನೆಯ ಉಸಿರಿನವರೆಗೂ ಸಮಾಜವಾದಿ ಚಿಂತನೆ ಉತ್ತೇಜಿಸಿದ್ದರು.
–ಅಮಿತ್ ಶಾ, ಕೇಂದ್ರ ಗೃಹ ಸಚಿವ

*
ನನ್ನ ಅಜ್ಜಿ ಇಂದಿರಾ ಗಾಂಧಿ ಮತ್ತು ಶರದ್ ಯಾದವ್ ಅವರು ಪರಸ್ಪರ ರಾಜಕೀಯ ಎದುರಾಳಿಗಳಾಗಿದ್ದರು. ಆದರೆ, ಇಬ್ಬರ ಮಧ್ಯೆಯೂ ಪರಸ್ಪರ ಗೌರವವಿತ್ತು
–ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT