ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಜೋಡೊ ನ್ಯಾಯ ಯಾತ್ರೆಗೆ ತಡೆ, ರಾಹುಲ್‌ ಧರಣಿ

Published 22 ಜನವರಿ 2024, 16:28 IST
Last Updated 22 ಜನವರಿ 2024, 16:28 IST
ಅಕ್ಷರ ಗಾತ್ರ

ಗುವಾಹಟಿ: ಅಯೋಧ್ಯೆಯಲ್ಲಿ ಬಾಲರಾಮ ಪ್ರಾಣ ಪ್ರತಿಷ್ಠಾಪನೆಗೂ ಮೊದಲು, ಅಸ್ಸಾಂ ನಾಗಾಂವ್ ಜಿಲ್ಲೆಯ ವೈಷ್ಣವ ವಿರಕ್ತ ಸ್ಥಳ ‘ಬಟದ್ರವ ತಾಣ’ವನ್ನು ಪ್ರವೇಶಿಸದಂತೆ ಸೋಮವಾರ ಕಾಂಗ್ರೆಸ್ ಮುಖಂಡ ರಾಹುಲ್‌ ಗಾಂಧಿ ಅವರನ್ನು ತಡೆಯಲಾಯಿತು. 

ಕಾನೂನು ಸುವ್ಯವಸ್ಥೆ ಹದಗೆಡಬಹುದು ಎಂದು ಅಧಿಕಾರಿಗಳು ಇದಕ್ಕೆ ಕಾರಣ ನೀಡಿದರು. ರಾಹುಲ್‌ ಗಾಂಧಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ‘ಭಾರತ್ ಜೋಡೊ ನ್ಯಾಯ ಯಾತ್ರೆ’ಯನ್ನು ಅಸ್ಸಾಂನ ಪೊಲೀಸರು ಸುಮಾರು ಎರಡು ಗಂಟೆ ತಡೆಹಿಡಿದಿದ್ದರು.

15ನೇ ಶತಮಾನದ ಸಂತ, ಸಮಾಜ ಸುಧಾರಕ ಶ್ರೀಮಂತ ಶಂಕರದೇವ ಅವರ ಜನ್ಮಸ್ಥಳವಾದ ಬರ್ದೋವಾದಿಂದ ಕೆಲವೇ ಕಿ.ಮೀ ದೂರದಲ್ಲಿ ಪೊಲೀಸರು ನ್ಯಾಯಯಾತ್ರೆಯನ್ನು ತಡೆಹಿಡಿದರು.

ಭಾನುವಾರವಷ್ಟೇ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಅವರು, ‘ಪ್ರಾಣ ಪ್ರತಿಷ್ಠಾಪನೆ ದಿನದಂದು ವೈಷ್ಣವ ವಿರಕ್ತ ಸ್ಥಳ ಬಟದ್ರವ ತಾಣ ಪ್ರವೇಶಿಸಬಾರದು. ಶಂಕರದೇವ ಮತ್ತು ಶ್ರೀರಾಮ ನಡುವೆ ಸ್ಪರ್ಧೆ ಇರುವಂತೆ ಬಿಂಬಿಸಬಾರದು’ ಎಂದು ಮನವಿ ಮಾಡಿದ್ದರು.

ಅಲ್ಲದೆ, ನಾಗಾಂವ್ ಜಿಲ್ಲೆಯ ಅಧಿಕಾರಿಗಳು ಭಾನುವಾರ ರಾಹುಲ್‌ ಗಾಂಧಿ ಅವರಿಗೆ ಪತ್ರವನ್ನು ಬರೆದಿದ್ದು, ಪ್ರಾಣ ಪ್ರತಿಷ್ಠಾಪನೆ ನಿಮಿತ್ತ ದೊಡ್ಡ ಸಮೂಹ ಸೇರಲಿದೆ. ಹೀಗಾಗಿ, ಮಧ್ಯಾಹ್ನ 3 ಗಂಟೆಗೆ ಮೊದಲು ತಾವು ಜಿಲ್ಲೆಗೆ ಪ್ರವೇಶಿಸಬಾರದು ಎಂದು ಕೋರಿದ್ದರು. 

‘ಬಾಲರಾಮ ಪ್ರತಿಷ್ಠಾಪನೆಯ ದಿನದಂದೇ ರಾಹುಲ್ ಗಾಂಧಿ ಅವರು ಕೋಮು ಸೂಕ್ಷ್ಮ ಸ್ಥಳವಾಗಿರುವ ನಾಗಾಂವ್‌ ಮತ್ತು ನೆರೆಯ ಮೊರಿಗಾಂವ್‌ ಜಿಲ್ಲೆಗೆ ಏಕೆ ಬರುತ್ತಿದ್ದಾರೆ?‘ ಎಂದು ಮುಖ್ಯಮಂತ್ರಿ ಪ್ರಶ್ನಿಸಿದ್ದರು.

ಮಣಿಪುರದಿಂದ ಜನವರಿ 14ರಂದು ಆರಂಭವಾಗಿದ್ದ, 67 ದಿನದ ಈ ನ್ಯಾಯ ಯಾತ್ರೆಯು ಎರಡು ದಿನದ ಅರುಣಾಚಲ ಪ್ರದೇಶದ ಭೇಟಿ ಬಳಿಕ ಭಾನುವಾರವಷ್ಟೇ ಅಸ್ಸಾಂ ರಾಜ್ಯವನ್ನು ಪ್ರವೇಶಿಸಿತ್ತು. 

ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ಅವರು, ಭಾನುವಾರ ನೀಡಿದ್ದ ಹೇಳಿಕೆಯಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಭೂಪೇನ್‌ ಕುಮಾರ್ ಬೊರ‍್ಹಾ ಅವರು ಇತರೆ ಕಾರ್ಯಕರ್ತರ ಮೇಲೆ ‘ಬಿಜೆಪಿ ಗೂಂಡಾಗಳು’ ಹಲ್ಲೆ ಮಾಡಿದ್ದಾರೆ ಎಂದು ಅರೋಪಿಸಿದ್ದರು.

ನಾಗಾಂವ್ ಜಿಲ್ಲೆಯ ರುಪೋಹಿಯಲ್ಲಿ ಭಾನುವಾರ ರಾತ್ರಿ ಮೊಕ್ಕಾಂ ಹೂಡಿದ್ದ ರಾಹುಲ್‌ಗಾಂಧಿ ಮತ್ತು ಬೆಂಬಲಿಗರು ಸೋಮವಾರ ಬೆಳಿಗ್ಗೆ,  ಶ್ರೀಮಂತ ಶಂಕರದೇವ ಅವರ ಜನ್ಮಸ್ಥಳವಾದ ಬರ್ದೋವಾ ಕಡೆಗೆ ಪ್ರಯಾಣ ಆರಂಭಿಸಿದ್ದರು. 

ದೇವಸ್ಥಾನಕ್ಕೆ ಯಾರು ಮತ್ತು ಯಾವಾಗ ಹೋಗಬೇಕು ಎಂಬುದನ್ನು ಈಗ ಪ್ರಧಾನಿ ಮೋದಿ ಅವರು ನಿರ್ಧರಿಸುತ್ತಾರೆಯೇ?
– ರಾಹುಲ್‌ ಗಾಂಧಿ ಕಾಂಗ್ರೆಸ್‌ ಮುಖಂಡ

ನಮ್ಮ ತಪ್ಪಾದರೂ ಏನು –ರಾಹುಲ್‌ ಪ್ರಶ್ನೆ

  ಗುವಾಹಟಿ: ‘ನಾವು ಮಾಡಿದ ತಪ್ಪಾದರೂ ಏನು? ಬಟದ್ರವ ತಾಣ ಭೇಟಿಗೆ ನೀಡಿದ್ದ ಅನುಮತಿಯನ್ನು ಅಧಿಕಾರಿಗಳು ಭಾನುವಾರ ರದ್ದುಪಡಿಸಿದ್ದಾರೆ. ಇದಕ್ಕೆ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಅವರ ಒತ್ತಡವೇ ಕಾರಣ’ ಎಂದು ರಾಹುಲ್‌ಗಾಂಧಿ ಅವರು ಆರೋಪಿಸಿದರು.

‘ನ್ಯಾಯ ಯಾತ್ರೆ’ಯನ್ನು ತಡೆಹಿಡಿದ ಕ್ರಮವನ್ನು ಖಂಡಿಸಿ ನಾಗಾಂವ್‌ ಜಿಲ್ಲೆಯ ಹೈಬೋರ್ಗಾಂವ್‌ ಬಳಿ ಬೆಂಬಲಿಗರೊಂದಿಗೆ ಅವರು ರಸ್ತೆ ತಡೆ ನಡೆಸಿದರು. ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದ ಬೆಂಬಲಿಗರು ಶಂಕರದೇವ ವಿರಚಿತ ನಾಮವನ್ನು ಪಠಿಸಿದರು. ಕೆಲವರು.. ರಘುಪತಿ ರಾಘವ ರಾಜಾ ರಾಂ... ಹಾಡಿದರು. ಬೆಳಿಗ್ಗೆ 9.30ಕ್ಕೆ ಬಟದ್ರವ ತಾಣಕ್ಕೆ ಭೇಟಿ ನೀಡಿದ್ದ ಕಾಂಗ್ರೆಸ್‌ ಸಂಸದ ಗೌರವ್ ಗೊಗೋಯಿ ಮತ್ತು ಸ್ಥಳೀಯ ಶಾಸಕ ಶಿವಮಣಿ ಬೋರಾ ಅವರು ರಾಹುಲ್‌ ಗಾಂಧಿ ಪರವಾಗಿ ನಮನ ಸಲ್ಲಿಸಿದರು.

ಯಾತ್ರೆಗೆ ಅಡ್ಡಿ ಮಾಡಿದ್ದನ್ನು ಖಂಡಿಸಿರುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ನಾವು ಪ್ರಜಾಪ್ರಭುತ್ವದ ಹೊಸ ಕಾಲಘಟ್ಟದಲ್ಲಿದ್ದೇವೆ. ಇಲ್ಲಿ ಯಾರು ಯಾವಾಗ ದೇಗುಲಕ್ಕೆ ಹೋಗಬೇಕು ಎಂದು ಬಿಜೆಪಿ ನಿರ್ಧರಿಸಲಿದೆ’ ಎಂದಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT