ಕೋಲ್ಕತ್ತ: ತಾವು ಹಾಗೂ ತಮ್ಮ ಕುಟುಂಬ ದೇಶದ ಕಾನೂನಿಗಿಂತ ಮಿಗಿಲು ಎನ್ನುವ ಹಾಗೆ ರಾಹುಲ್ ಗಾಂಧಿ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಅವರು ಕಿಡಿ ಕಾರಿದ್ದಾರೆ.
ಇಲ್ಲಿನ ಬಿಜೆಪಿ ಮುಖ್ಯ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭಾರತ ಎಂದರೆ ರಾಹುಲ್ ಅಲ್ಲ, ರಾಹುಲ್ ಎಂದರೆ ಭಾರತವಲ್ಲ‘ ಎನ್ನುವುದನ್ನು ಅವರು ತಿಳಿದುಕೊಳ್ಳಬೇಕು ಎಂದರು.
‘ಹಿಂದುಳಿದ ವರ್ಗದ ವಿರುದ್ಧ ಮಾಡಿದ ಜಾತಿ ನಿಂದನೆಗಾಗಿ ನಿಮ್ಮನ್ನು ಕೋರ್ಟ್ ದೋಷಿ ಎಂದು ತೀರ್ಪು ನೀಡಿದೆ. ನೀವು ಹಿಂದುಳಿದ ವರ್ಗಗಳನ್ನು ಲಘುವಾಗಿ ತೆಗೆದುಕೊಳ್ಳುವಂತಿಲ್ಲ. ಅವರನ್ನು ನೀವು ಅವಮಾನ ಮಾಡುವಂತಿಲ್ಲ. ಬುಡಕಟ್ಟು ಮಹಿಳೆಯೊಬ್ಬರು ಇದೇ ಮೊದಲ ಬಾರಿಗೆ ದೇಶದ ರಾಷ್ಟ್ರಪತಿಯಾಗಿದ್ದಾರೆ ಎನ್ನುವುದನ್ನು ಮರೆಯಬೇಡಿ. ಭಾರತಕ್ಕೆ ಹಿಂದುಳಿದ ವರ್ಗದಿಂದ ಬಂದಿರುವ ವ್ಯಕ್ತಿ ಪ್ರಧಾನ ಮಂತ್ರಿಯಾಗಿದ್ದಾರೆ. ನಮ್ಮಲ್ಲಿ ಹಲವು ಸಚಿವರು ಆ ವರ್ಗದಿಂದ ಬಂದವರು ಇದ್ದಾರೆ‘ ಎಂದು ಪಾತ್ರ ಹೇಳಿದ್ದಾರೆ.
ರಾಹುಲ್ ಗಾಂಧಿ ಅವರಿಗೆ ದೇಶದ ನ್ಯಾಯಾಲಯದ ಬಗ್ಗೆ ಗೌರವ ಇಲ್ಲ ಎಂದು ಹೇಳಿರುವ ಅವರು, ತಮ್ಮ ಹೇಳಿಕೆ ಬಗ್ಗೆ ಕ್ಷಮೆ ಕೋರಲು ರಾಹುಲ್ ಗಾಂಧಿ ಅವರಿಗೆ ಅವಕಾಶ ನೀಡಲಾಗಿತ್ತು. ಆದರೆ ತಾವು ಕ್ಷಮೆ ಕೇಳುವುದಿಲ್ಲ ಎಂದು ದುರಹಂಕಾರ ಪ್ರದರ್ಶನ ಮಾಡಿದರು ಎಂದು ಪಾತ್ರ ಹೇಳಿದ್ದಾರೆ.
‘ನಿಮ್ಮವರು ನ್ಯಾಯಾಂಗದ ವಿರುದ್ಧ ಮಾಡುತ್ತಿರುವ ದಾಳಿ ನೋಡಿದರೆ, ನಿಮಗೆ ಭಾರತದ ಪ್ರಜಾಪ್ರಭುತ್ವದ ಮೇಲೆ ಯಾಕಿಷ್ಟು ದ್ವೇಷ ಇದೆ ಎಂದನಿಸುತ್ತದೆ‘ ಎಂದು ಪಾತ್ರ ಕಿಡಿಕಾರಿದ್ದಾರೆ.