ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹತ್ಯೆಯಾದ ದಲಿತ ಯುವಕನ ಕುಟುಂಬಸ್ಥರ ಭೇಟಿಯಾದ ರಾಹುಲ್‌

Published 20 ಆಗಸ್ಟ್ 2024, 12:19 IST
Last Updated 20 ಆಗಸ್ಟ್ 2024, 12:19 IST
ಅಕ್ಷರ ಗಾತ್ರ

ರಾಯ್‌ಬರೇಲಿ (ಉತ್ತರಪ್ರದೇಶ): ಇಲ್ಲಿನ ಸಲೋನ್‌ ಪ್ರದೇಶದಲ್ಲಿ ಗುಂಡಿನ ದಾಳಿಯಲ್ಲಿ ಹತ್ಯೆಯಾದ 22 ವರ್ಷದ ದಲಿತ ಯುವಕನ ಮನೆಗೆ ಲೋಕಸಭೆಯ ವಿರೋಧ ಪಕ್ಷದ ನಾಯಕ  ರಾಹುಲ್‌ ಗಾಂಧಿ ಮಂಗಳವಾರ ಭೇಟಿ ನೀಡಿ, ಕುಟುಂಬಕ್ಕೆ ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿದರು.

ಈ ಹತ್ಯೆಯ ಹಿಂದಿರುವ ‘ಸೂತ್ರಧಾರ’ನ ವಿರುದ್ಧ ಯಾವುದೇ ಕ್ರಮಕೈಗೊಳ್ಳದ ಕಾರಣ ಆ ಪ್ರದೇಶದ ಜನರು ಆಕ್ರೋಶಗೊಂಡಿದ್ದಾರೆ ಎಂದು ಗಾಂಧಿ ಹೇಳಿದ್ದಾರೆ.

‘ದಲಿತ ವ್ಯಕ್ತಿಯನ್ನು ಕೊಂದಿರುವ ಕಾರಣ ಇಲ್ಲಿನ ಎಲ್ಲ ಜನರು ನ್ಯಾಯಕ್ಕಾಗಿ ಒತ್ತಾಯಿಸುತ್ತಿದ್ದಾರೆ. ಕೊಲೆಯಾಗಿರುವ ಯುವಕನ ಇಡೀ ಕುಟುಂಬಕ್ಕೆ ಬೆದರಿಕೆ ಹಾಕಲಾಗಿದೆ. ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ’ ಎಂದು ಭುವಲ್‌ಪುರ ಸಿಸ್ನಿ ಗ್ರಾಮದಲ್ಲಿ ರಾಹುಲ್‌ ಗಾಂಧಿ ಸುದ್ದಿಗಾರರಿಗೆ ತಿಳಿಸಿದರು.

‘ಇಲ್ಲಿನ ಪೊಲೀಸ್ ವರಿಷ್ಠಾಧಿಕಾರಿ, ಈ ಹತ್ಯೆಯ ಹಿಂದಿನ ‘ಸೂತ್ರಧಾರ’ನ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಿಲ್ಲ. ಅವರು ಸಣ್ಣ ಜನರನ್ನು ಬಂಧಿಸುತ್ತಿದ್ದಾರೆ. ರಾಜ್ಯದಲ್ಲಿ ಸಮಾಜದ ಪ್ರತಿ ವರ್ಗವನ್ನು ಗೌರವಿಸಬೇಕು. ಎಲ್ಲರಿಗೂ ನ್ಯಾಯ ಸಿಗಬೇಕು. ಈ ಕುಟುಂಬಕ್ಕೆ ನ್ಯಾಯ ಸಿಗುವವರೆಗೆ ನಾವು ಹೋರಾಡುತ್ತೇವೆ’ ಎಂದು ಹೇಳಿದರು.

ರಾಯ್‌ಬರೇಲಿ ಕ್ಷೇತ್ರದ ಸಂಸದರೂ ಆದ ರಾಹುಲ್‌ ಗಾಂಧಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ಪಕ್ಕದ ಅಮೇಠಿ ಜಿಲ್ಲೆಯ ಫುರ್ಸತ್‌ಗಂಜ್ ವಿಮಾನ ನಿಲ್ದಾಣಕ್ಕೆ ಬಂದಿಳಿದು, ಅಲ್ಲಿಂದ ನೇರವಾಗಿ ಭುವಲ್‌ಪುರ ಸಿಸ್ನಿ ಗ್ರಾಮಕ್ಕೆ ತೆರಳಿದರು. ರಾಹುಲ್‌ ಅವರ ಜತೆಯಲ್ಲಿ ಕಾಂಗ್ರೆಸ್‌ನ ಉತ್ತರ ಪ್ರದೇಶ ಘಟಕದ ಅಧ್ಯಕ್ಷ ಅಜಯ್ ರೈ, ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಉಸ್ತುವಾರಿ ಅವಿನಾಶ್ ಪಾಂಡೆ ಮತ್ತು ಪಕ್ಷದ ಹಿರಿಯ ನಾಯಕ ಪ್ರಮೋದ್ ತಿವಾರಿ ಸೇರಿದಂತೆ ಇತರರು ಇದ್ದರು.

ಆಗಸ್ಟ್ 11 ರಂದು ಕೆಲವು ಸ್ಥಳೀಯರೊಂದಿಗೆ ವಾಗ್ವಾದ ನಡೆದ ನಂತರ ಅರ್ಜುನ್ ಪಾಸಿ ಎಂಬ ವ್ಯಕ್ತಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಇದುವರೆಗೆ ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT