ನವದೆಹಲಿ: ಕುಸ್ತಿಪಟುಗಳಾದ ಬಜರಂಗ ಪೂನಿಯಾ ಹಾಗೂ ವಿನೇಶ್ ಫೋಗಟ್ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಬುಧವಾರ ಭೇಟಿ ಮಾಡಿದ್ದಾರೆ. ಈ ಇಬ್ಬರು ಕುಸ್ತಿಪಟುಗಳನ್ನು ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವು ಕಣಕ್ಕಿಳಿಸಲಿದೆ ಎನ್ನಲಾಗುತ್ತಿದೆ. ಹೀಗಾಗಿ, ರಾಹುಲ್ ಗಾಂಧಿ ಅವರೊಂದಿಗಿನ ಇವರ ಭೇಟಿಗೆ ಮಹತ್ವ ಬಂದಿದೆ.
ಪೂನಿಯಾ ಅವರನ್ನು ಬಾದ್ಲಿ ವಿಧಾನಸಭಾ ಕ್ಷೇತ್ರದಿಂದ ಹಾಗೂ ಫೋಗಟ್ ಅವರನ್ನು ಜುಲಾನಾ ಕ್ಷೇತ್ರದಿಂದ ಕಣಕ್ಕಿಳಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
ಪೂನಿಯಾ ಮತ್ತು ಫೋಗಟ್ ಅವರನ್ನು ಚುನಾವಣಾ ಕಣಕ್ಕಿಳಿಸುವ ಕುರಿತು ಕಾಂಗ್ರೆಸ್ ಈ ವರೆಗೆ ಯಾವುದೇ ಹೇಳಿಕೆ ನೀಡಿಲ್ಲ. ಈ ಕುರಿತು ಗುರುವಾರ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದೂ ಮೂಲಗಳು ಹೇಳಿವೆ.
ಅಲ್ಲದೇ, ಕಾಂಗ್ರೆಸ್ ಇಬ್ಬರನ್ನೂ ಕಣಕ್ಕಿಳಿಸುವುದೇ ಅಥವಾ ಒಬ್ಬರಿಗೆ ಮಾತ್ರ ಟಿಕೆಟ್ ನೀಡುವುದೇ ಎಂಬುದು ಸಹ ಸ್ಪಷ್ಟವಾಗಿಲ್ಲ.
ಇನ್ನೊಂದೆಡೆ, ಈ ಇಬ್ಬರು ಕುಸ್ತಿಪಟುಗಳು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿರುವುದಕ್ಕೆ ಸಂಬಂಧಿಸಿದ ಚಿತ್ರಗಳನ್ನು ಕಾಂಗ್ರೆಸ್ ಪಕ್ಷವೇ ತನ್ನ ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿದೆ. ಇದು, ಅವರಿಬ್ಬರನ್ನು ಪಕ್ಷದ ಉಮೇದುವಾರರನ್ನಾಗಿ ಮಾಡುವ ಕುರಿತು ನಿರ್ಧರಿಸಲಾಗಿದೆ ಎಂಬುದನ್ನು ಪಕ್ಷವೇ ಸೂಚ್ಯವಾಗಿ ಹೇಳುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಭಾರತೀಯ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮಾಜಿ ಸಂಸದ ಬ್ರಿಜ್‌ಭೂಷಣ್ ಸಿಂಗ್ ವಿರುದ್ಧ ಕಳೆದ ವರ್ಷ ಕೆಲ ಮಹಿಳಾ ಕುಸ್ತಿಪಟುಗಳು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಆಗ, ಸಿಂಗ್ ವಿರುದ್ಧ ನಡೆದಿದ್ದ ಪ್ರತಿಭಟನೆಗಳಲ್ಲಿ ಪೂನಿಯಾ ಹಾಗೂ ಫೋಗಟ್ ಪಾಲ್ಗೊಂಡಿದ್ದರು.
ಫೋಗಟ್ ಅವರು ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಮರಳಿದಾಗ, ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಅವರಿಗೆ ಭವ್ಯ ಸ್ವಾಗತ ಹಮ್ಮಿಕೊಳ್ಳಲಾಗಿತ್ತು. ನಂತರ, ಅವರ ಗ್ರಾಮಕ್ಕೆ ಕರೆದುಕೊಂಡು ಹೋಗಲಾಗಿತ್ತು. ಕಾಂಗ್ರೆಸ್‌ನ ಹಿರಿಯ ಸಂಸದ ದೀಪೇಂದರ್ ಹೂಡಾ ಈ ಸ್ವಾಗತ ಕಾರ್ಯಕ್ರಮ ಆಯೋಜಿಸಿದ್ದರು.
ಕಳೆದ ವಾರ, ಹರಿಯಾಣದಲ್ಲಿ ನಡೆದ ರೈತರ ಪ್ರತಿಭಟನೆಯಲ್ಲಿಯೂ ಫೋಗಟ್ ಪಾಲ್ಗೊಂಡಿದ್ದರು.
नेता विपक्ष श्री @RahulGandhi से विनेश फोगाट जी और बजरंग पुनिया जी ने मुलाकात की। pic.twitter.com/UK7HW6kLEL
— Congress (@INCIndia) September 4, 2024
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.