ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ತಮಿಳುನಾಡು: ಮಹಿಳೆಯರು ನಡೆಸುತ್ತಿರುವ ಚಾಕೋಲೆಟ್‌ ಫ್ಯಾಕ್ಟರಿಗೆ ರಾಹುಲ್‌ ಭೇಟಿ

Published 27 ಆಗಸ್ಟ್ 2023, 10:17 IST
Last Updated 27 ಆಗಸ್ಟ್ 2023, 10:17 IST
ಅಕ್ಷರ ಗಾತ್ರ

ಊಟಿ: ತಮಿಳುನಾಡಿನಲ್ಲಿ ಸುಮಾರು 70 ಮಹಿಳೆಯರು ನಡೆಸುತ್ತಿರುವ ಮಾಡೀಸ್‌ ಚಾಕೋಲೆಟ್‌ ಫ್ಯಾಕ್ಟರಿಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭೇಟಿ ನೀಡಿದ್ದು, ಚಾಕೋಲೆಟ್‌ ಮಾಡುವ ವಿಧಾನವನ್ನು ಕಲಿತುಕೊಂಡಿದ್ದಾರೆ.

ತಮಿಳುನಾಡಿನ ಜನಪ್ರಿಯ ಚಾಕೋಲೆಟ್‌ ಬ್ರಾಂಡ್‌ ‘ಮಾಡೀಸ್‌’ (moddy's) ಚಾಕೋಲೆಟ್‌ ಅನ್ನು ಹೇಗೆ ತಯಾರಿಸಲಾಗುತ್ತದೆ ಎಂಬುವುದರ ಬಗ್ಗೆ ರಾಹುಲ್‌ ಗಾಂಧಿ ವಿವರವಾದ ಮಾಹಿತಿ ಪಡೆದಿದ್ದಾರೆ. ಜೊತೆಯಲ್ಲಿ ತಮಿಳು ಭಾಷೆ ಕಲಿಯಲು ಪ್ರಯತ್ನಿಸಿದ್ದಾರೆ.

ಸಾಮಾಜಿಕ ಮಾಧ್ಯಮ ‘ಎಕ್ಸ್‌‘ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ರಾಹುಲ್‌ ಗಾಂಧಿ, ಮಹಿಳೆಯರೆಲ್ಲ ಸೇರಿ ಉದ್ಯಮವೊಂದನ್ನು ನಡೆಸುತ್ತಿರುವುದರ ಬಗ್ಗೆ ಪ‍್ರಶಂಸೆ ವ್ಯಕ್ತಪಡಿಸಿದ್ದಾರೆ.

‘70 ಮಹಿಳೆಯರು ಒಟ್ಟಾಗಿ ಊಟಿಯ ಪ್ರಸಿದ್ಧ ಚಾಕೋಲೆಟ್‌ ಫ್ಯಾಕ್ಟರಿಯೊಂದನ್ನು ನಡೆಸಿಕೊಂಡು ಬರುತ್ತಿದ್ದಾರೆ! ಮಾಡೀಸ್‌ ಚಾಕೋಲೆಟ್‌ ನಡೆದು ಬಂದ ಹಾದಿ ಇತರ ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ನಡೆಸುತ್ತಿವವರಿಗೆ ಸ್ಪೂರ್ತಿಯಾಗಲಿದೆ’ ಎಂದು ಹೇಳಿದರು.

‘ಈ ಸಾಧನೆಯ ಹಿಂದಿನ ಶಕ್ತಿಗಳಾದ ಮುರಳೀಧರ್ ರಾವ್ ಮತ್ತು ಸ್ವಾತಿ ಅವರ ಉದ್ಯಮಶೀಲತಾ ಮನೋಭಾವವು ಸ್ಪೂರ್ತಿದಾಯಕವಾಗಿದೆ. 70 ಮಹಿಳೆಯರು ಕೂಡ ಅಷ್ಟೇ ಸ್ಪೂರ್ತಿದಾಯಕರಾಗಿದ್ದಾರೆ. ನಾನು ರುಚಿ ಕಂಡ ಹಲವು ಚಾಕೋಲೆಟ್‌ಗಳಲ್ಲಿ ಈ ಚಾಕೋಲೆಟ್‌ ಅತ್ಯದ್ಭುತವಾಗಿದೆ’ ಎಂದರು.

ಜಿಎಸ್‌ಟಿಯಿಂದ ಸಣ್ಣ ಉದ್ಯಮಗಳಿಗೆ ಪೆಟ್ಟು

ಜಿಎಸ್‌ಟಿಯನ್ನು ‘ಗಬ್ಬರ್ ಸಿಂಗ್ ಟ್ಯಾಕ್ಸ್’ ಎಂದು ಕರೆದ ರಾಹುಲ್‌ ಗಾಂಧಿ, ಕೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು. ದೇಶದ ಅಸಂಖ್ಯಾತ ಇತರ ಸಣ್ಣ ಮತ್ತು ಮಧ್ಯಮ ಉದ್ಯಮಗಳಂತೆಯೇ ಮಾಡೀಸ್‌ ಚಾಕೋಲೆಟ್‌ಗೂ ಜಿಎಸ್‌ಟಿಯ ಬಿಸಿ ಮುಟ್ಟಿದೆ. ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗಿಂತ ಕೇಂದ್ರಕ್ಕೆ ದೊಡ್ಡ ಉದ್ಯಮಗಳೇ ಹೆಚ್ಚು ಆಸಕ್ತಿದಾಯಕವಾಗಿವೆ’ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಚಾಕಲೇಟ್‌ ಮಾಡುವುದನ್ನು ಕಲಿತ ರಾಹುಲ್‌

ಹಲವು ವಿಷಯಗಳನ್ನು ಚರ್ಚಿಸಿದ ನಂತರ ರಾಹುಲ್‌ಗೆ ಮಹಿಳೆಯರು ಮಾಡೀಸ್‌ ಚಾಕೋಲೆಟ್‌ ತಯಾರಿಸುವ ವಿಧಾನವನ್ನು ಹೇಳಿಕೊಟ್ಟರು. ಆ್ಯಪ್ರಾನ್‌ ತೊಟ್ಟು ರೆಡಿಯಾದ ರಾಹುಲ್‌ ಚಾಕೋಲೆಟ್‌ ಮೋಲ್ಡ್‌ಗೆ ಕ್ರೀಮ್‌ನ್ನು ಸುರಿದು ಚಾಕೋಲೆಟ್‌ ಮಾಡುವುದನ್ನು ಕಲಿತರು. ಈ ವೇಳೆ ತಮಿಳು ಭಾಷೆಯಲ್ಲಿ ಮಾತನಾಡಲು ಪ್ರಯತ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT