ಚಂಡೀಗಢ (ಪಿಟಿಐ): ‘ದೆಹಲಿ ಚಲೋ’ ಹೆಸರಿನಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಮೇಲೆ ಪೊಲೀಸರು ಕ್ರಮ ಕೈಗೊಂಡ ಸಂದರ್ಭದಲ್ಲಿ ಗಾಯಗೊಂಡಿರುವ ರೈತ ಗುರ್ಮೀತ್ ಸಿಂಗ್ ಜೊತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ದೂರವಾಣಿ ಮೂಲಕ ಮಾತುಕತೆ ನಡೆಸಿದರು. ಅಲ್ಲದೆ, ನರೇಂದ್ರ ಮೋದಿ ನೇತೃತ್ವದ ಸರ್ಕಾರವು ದೇಶಕ್ಕೆ ಅನ್ನ ಕೊಡುವವರ ವಿಚಾರದಲ್ಲಿ ‘ಸರ್ವಾಧಿಕಾರಿ ಧೋರಣೆ’ ತಳೆದಿದೆ ಎಂದು ದೂರಿದರು.
ರೈತರು ಮತ್ತು ಹರಿಯಾಣ ಪೊಲೀಸರ ನಡುವೆ ಉಂಟಾದ ಘರ್ಷಣೆಯಲ್ಲಿ ಗುರ್ಮೀತ್ ಸಿಂಗ್ ಅವರಿಗೆ ಗಾಯಗಳಾಗಿವೆ. ‘ಮಾಜಿ ಯೋಧ ಗುರ್ಮೀತ್ ಸಿಂಗ್ ಅವರ ಜೊತೆ ಮಾತನಾಡಿದ್ದೇನೆ. ಪೊಲೀಸರು ದೌರ್ಜನ್ಯ ನಡೆಸಿದ ಪರಿಣಾಮವಾಗಿ ಅವರಿಗೆ ಗಂಭೀರ ಗಾಯಗಳಾಗಿವೆ’ ಎಂದು ರಾಹುಲ್ ಅವರು ತಮ್ಮ ವಾಟ್ಸ್‌ಆ್ಯಪ್ ಚಾನೆಲ್ ಮೂಲಕ ತಿಳಿಸಿದ್ದಾರೆ.
‘ಸಿಂಗ್ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದೇನೆ. ತಮ್ಮ ಹಕ್ಕುಗಳಿಗಾಗಿ ಆಗ್ರಹಿಸಿ ನಡೆಸುತ್ತಿರುವ ಶಾಂತಿಯುತ ಚಳವಳಿಗೆ ಅವರಿಗೆ ಬೆಂಬಲ ಸೂಚಿಸಿದ್ದೇನೆ. ಸಿಂಗ್ ಅವರು ಯುವಕರು, ರೈತರು... ದೇಶದ ರಕ್ಷಕರು ಹಾಗೂ ಅನ್ನದಾತರ ವಿಚಾರವಾಗಿ ಮೋದಿ ಸರ್ಕಾರ ತೋರುತ್ತಿರುವ ಈ ಸರ್ವಾಧಿಕಾರಿ ಧೋರಣೆಯು ಪ್ರಜಾತಂತ್ರದ ಬಗ್ಗೆ ನಾಚಿಕೆ ಮೂಡಿಸುವಂತೆ ಇದೆ’ ಎಂದು ರಾಹುಲ್ ಹೇಳಿದ್ದಾರೆ.
ಎಲ್ಲೆಲ್ಲಿ ಗಾಯಗಳಾಗಿವೆ ಎಂದು ರಾಹುಲ್ ಅವರು ಗುರ್ಮೀತ್ ಸಿಂಗ್ ಅವರಲ್ಲಿ ವಿಚಾರಿಸಿದ್ದಾರೆ. ತಮ್ಮ ಕೈ ಹಾಗೂ ಕಣ್ಣಿನ ಬಳಿ ಗಾಯವಾಗಿರುವುದಾಗಿ ಅವರು ತಿಳಿಸಿದ್ದಾರೆ. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಎಷ್ಟು ಜನರಿಗೆ ಗಾಯಗಳಾಗಿವೆ ಎಂದು ರಾಹುಲ್ ಕೇಳಿದ್ದಾರೆ. ಪೊಲೀಸರ ಕ್ರಮದ ಬಗ್ಗೆ ಗುರ್ಮೀತ್ ಅವರು ತಿಳಿಸಿದಾಗ, ‘ಇದು ಸ್ವಲ್ಪವೂ ಸರಿಯಲ್ಲ. ನಾವು ನಿಮ್ಮ ಜೊತೆ ಇದ್ದೇವೆ. ಚಿಂತೆ ಮಾಡಬೇಡಿ’ ಎಂದು ಭರವಸೆ ನೀಡಿದ್ದಾರೆ.
‘ದೇಶಕ್ಕೆ ಮುಖ್ಯವಾಗಿರುವ ಸಂಗತಿಯ ಬಗ್ಗೆ ನೀವು ಹೋರಾಡುತ್ತಿದ್ದೀರಿ. ನೀವು ಹಿಂದೆಯೂ ದೇಶಕ್ಕಾಗಿ ಕೆಲಸ ಮಾಡಿದ್ದೀರಿ, ಈಗಲೂ ಅದನ್ನೇ ಮಾಡುತ್ತಿದ್ದೀರಿ. ಶಹಭಾಸ್. ಒಳ್ಳೆಯದಾಗಲಿ’ ಎಂದು ರಾಹುಲ್ ಅವರು ಗುರ್ಮೀತ್ ಅವರಿಗೆ ಹೇಳಿದ್ದಾರೆ.
ದೆಹಲಿಯ ಕಡೆ ಸಾಗುತ್ತಿದ್ದ ರೈತರ ಮೇಲೆ ಪಂಜಾಬ್–ಹರಿಯಾಣ ಗಡಿಯಲ್ಲಿ ಅಶ್ರುವಾಯು ಶೆಲ್ ಸಿಡಿಸಲಾಗಿದೆ. ಇದರಲ್ಲಿ 60 ಮಂದಿಗೆ ಗಾಯಗಳಾಗಿವೆ, ಇದಕ್ಕೆ ಕೇಂದ್ರ ಸರ್ಕಾರ ಕಾರಣ ಎಂದು ರೈತ ಮುಖಂಡರು ಆರೋಪಿಸಿದ್ದಾರೆ. ಪ್ರತಿಭಟನಕಾರರು ಕಲ್ಲು ತೂರಿದ ಪರಿಣಾಮವಾಗಿ 24 ಮಂದಿ ಪೊಲೀಸರಿಗೆ ಗಾಯಗಳಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.