ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Odisha Train Tragedy: ಸಂತ್ರಸ್ತರಿಗೆ ಪ್ರಧಾನಿ, ರೈಲ್ವೆಯಿಂದ ಪ್ರತ್ಯೇಕ ಪರಿಹಾರ

Published 3 ಜೂನ್ 2023, 2:18 IST
Last Updated 3 ಜೂನ್ 2023, 2:18 IST
ಅಕ್ಷರ ಗಾತ್ರ

ಬಾಲಸೋರ್‌: ಶುಕ್ರವಾರ ಸಂಜೆ ಬಾಲಸೋರ್‌ನಲ್ಲಿ ಸಂಭವಿಸಿದ ಸರಣಿ ರೈಲು ದುರಂತದ ಸಂತ್ರಸ್ತ ಕುಟುಂಬಗಳಿಗೆ ರೈಲ್ವೆ ಇಲಾಖೆ ಮತ್ತು ಪ್ರಧಾನಿ ನರೇಂದ್ರ ಮೋದಿ ಪ್ರತ್ಯೇಕ ಪರಿಹಾರ ಘೋಷಣೆ ಮಾಡಿದ್ದಾರೆ.

ಮೃತರಿಗೆ ₹10 ಲಕ್ಷ , ಗಂಭೀರವಾಗಿ ಗಾಯಗೊಂಡವರಿಗೆ ₹2 ಲಕ್ಷ ಮತ್ತು ಸಣ್ಣಪುಟ್ಟ ಗಾಯಗೊಂಡವರಿಗೆ ₹50,000 ಪರಿಹಾರ ನೀಡುವುದಾಗಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಮೊದಲಿಗೆ ಘೋಷಿಸಿದರು.

ಇದಾದ ಬಳಿಕ ಟ್ವೀಟ್‌ ಮಾಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಹೆಚ್ಚುವರಿ ಪರಿಹಾರ ನೀಡುವುದಾಗಿ ಹೇಳಿದ್ದಾರೆ. ‘ಒಡಿಶಾದಲ್ಲಿ ಸಂಭವಿಸಿದ ರೈಲು ಅವಘಡದಲ್ಲಿ ಮೃತಪಟ್ಟ ಕುಟುಂಬಕ್ಕೆ ‘ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿ(ಪಿಎಂಎನ್‌ಆರ್‌ಎಫ್‌)’ಯಿಂದ ₹2 ಲಕ್ಷ ಪರಿಹಾರವನ್ನು ನೀಡಲಾಗುವುದು. ಗಾಯಗೊಂಡವರಿಗೆ ₹50,000 ನೀಡಲಾಗುವುದು’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ರೈಲ್ವೆ ಇಲಾಖೆ ನೀಡುವ ನೆರವನ್ನು ಹೊರತುಪಡಿಸಿ ಈ ಹೆಚ್ಚುವರಿ ಪರಿಹಾರ ಒದಗಿಸುತ್ತಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

ರೈಲು ಅಪಘಾತದ ಸುದ್ದಿ ಕೇಳಿ ಆಘಾತಗೊಂಡಿದ್ದೇನೆ. ದುರಂತದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಸಂತ್ರಸ್ತರಿಗೆ ಎಲ್ಲ ರೀತಿಯ ಅಗತ್ಯ ನೆರವು ನೀಡಲಾಗುವುದು.
ನರೇಂದ್ರ ಮೋದಿ, ಪ್ರಧಾನಿ

ಬೆಂಗಳೂರು–ಹೌರಾ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌, ಕೋರಮಂಡಲ್‌ ಎಕ್ಸ್‌ಪ್ರೆಸ್‌ ಮತ್ತು ಸರಕು ಸಾಗಣೆ ರೈಲುಗಳ ಮಧ್ಯೆ ಒಡಿಶಾದ ಬಾಲಸೋರ್‌ನಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಅವಘಡದಲ್ಲಿ ಕನಿಷ್ಠ 233 ಮಂದಿ ಮೃತಪಟ್ಟು, 900ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

‘ಬೆಂಗಳೂರು– ಹೌರಾ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲಿನ ಹಲವು ಬೋಗಿಗಳು ಹಳಿ ತಪ್ಪಿ ಪಕ್ಕದ ಹಳಿಯ ಮೇಲೆ ಬಿದ್ದಿದ್ದವು. ಈ ಬೋಗಿಗಳಿಗೆ ಕೋಲ್ಕತ್ತದಿಂದ ಚೆನ್ನೈ ಕಡೆಗೆ ಸಾಗುತ್ತಿದ್ದ ಕೋರಮಂಡಲ್‌ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ ಹೊಡೆದಿದೆ. ಪರಿಣಾಮ ಈ ರೈಲಿನ ಬೋಗಿಗಳೂ ಹಳಿ ತಪ್ಪಿ ಮಗುಚಿ ಬಿದ್ದವು. ಇದರಿಂದಾಗಿ ಪಕ್ಕದ ಹಳಿಯಲ್ಲಿ ಸಾಗುತ್ತಿದ್ದ ಸರಕು ಸಾಗಣೆ ರೈಲು ಸಹ ಅಪಘಾತಕ್ಕೆ ಒಳಗಾಯಿತು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT