ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಟಾ: ಅಪಹರಣವಾಗಿದ್ದ ನಾಲ್ಕು ವರ್ಷದ ಮಗುವಿನ ರಕ್ಷಣೆ

ಓರ್ವ ಮಹಿಳೆ ಸೇರಿ ಐವರ ಬಂಧನ
Published 14 ಮೇ 2024, 16:31 IST
Last Updated 14 ಮೇ 2024, 16:31 IST
ಅಕ್ಷರ ಗಾತ್ರ

ಜೈಪುರ: ಕೋಟಾ ರೈಲ್ವೆ ನಿಲ್ದಾಣದಿಂದ ಅಪಹರಣಕ್ಕೊಳಗಾಗಿದ್ದ ನಾಲ್ಕು ವರ್ಷದ ಮಗು ಸೇರಿದಂತೆ ಇಬ್ಬರು ಮಕ್ಕಳನ್ನು ಜೈಪುರದಲ್ಲಿ ರಕ್ಷಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರೂ ಸೇರಿ ಐವರನ್ನು ಬಂಧಿಸಲಾಗಿದೆ ಎಂದು ಶುಕ್ರವಾರ ಪೊಲೀಸರು ತಿಳಿಸಿದ್ದಾರೆ. 

ಪೊಲೀಸರು ತಿಳಿಸಿರುವಂತೆ ನಾಲ್ಕು ವರ್ಷದ ಬಾಲಕನನ್ನು ಮೇ 5ರ ರಾತ್ರಿ ಅಪಹರಿಸಿದ ಹರಿಯಾಣದ ಗುಂಪು ಭೋಪಾಲ್‌ಗೆ ಕರೆದೊಯ್ದಿತ್ತು. ಅಲ್ಲಿಂದ ಜೈಪುರಕ್ಕೆ ಕರೆತಂದ ನಂತರ ರೈಲ್ವೆ ಪೊಲೀಸರು ಮಗುವನ್ನು ವಶಪಡಿಸಿಕೊಂಡಿದ್ದಾರೆ. 

ಇದೇ ವೇಳೆ, 10 ವರ್ಷದ ಹಿಂದೆ ಅಪಹರಣಕ್ಕೊಳಗಾಗಿದ್ದ ಸುಮಾರು 15 ವರ್ಷ ವಯಸ್ಸಿನ ಬಾಲಕನನ್ನು ಕೂಡ ಇದೇ ಅಪಹರಣಕಾರರ ಗುಂಪಿನಿಂದ ವಶಪಡಿಸಿಕೊಳ್ಳಲಾಗಿದೆ. ಈ ಮಕ್ಕಳನ್ನು ಸಾಹಸ ಪ್ರದರ್ಶನ ಹಾಗೂ ಭಿಕ್ಷಾಟನೆಗೆ ಬಳಸಿಕೊಳ್ಳಲಾಗುತ್ತಿತ್ತು ಎಂದು ಪೊಲೀಸ್‌ ಹೆಚ್ಚುವರಿ ಮಹಾನಿರ್ದೇಶಕ ಅನಿಲ್‌ ಪಾಲಿವಾಲ್‌ ತಿಳಿಸಿದ್ದಾರೆ.  

ರೈಲ್ವೆ ನಿಲ್ದಾಣದಲ್ಲಿ ನಾಲ್ಕು ವರ್ಷದ ಮಗುವಿನ ತಂದೆ ಟಿಕೆಟ್‌ ಪಡೆಯಲು ಒಂಟಿಯಾಗಿ ಬಿಟ್ಟು ಹೋದಾಗ ಅಪರಿಚಿತ ವ್ಯಕ್ತಿಗಳು ಅಪಹರಿಸಿದ್ದರು. ಈ ತಂದೆ ಮತ್ತು ಮಗು ಉತ್ತರ ಪ್ರದೇಶಕ್ಕೆ ತೆರಳಬೇಕಿತ್ತು ಎಂದು ಪಾಲಿವಾಲ್‌ ತಿಳಿಸಿದ್ದಾರೆ.

ಮಗುವಿನ ತಂದೆ ಐದು ನಿಮಿಷಗಳ ಬಳಿಕ ಹಿಂದಿರುಗಿದ್ದಾರೆ. ಮಗು ಕಾಣದಿದ್ದಾಗ ತುರ್ತಾಗಿ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ. ನಂತರ ಅಲ್ಲಿ ಸಿ.ಸಿ.ಟಿ.ವಿ. ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದೆ. ಈ ಕುರಿತು ವಿಸ್ತೃತವಾದ ತನಿಖೆ ನಡೆಸಲಾಗಿದೆ ಮತ್ತು ಆರೋಪಿಗಳು ರಸ್ತೆ ಮೂಲಕ ಭೋಪಾಲ್‌ಗೆ ತೆರಳಿರುವುದು ಕಂಡುಬಂದಿದೆ. ಅದಕ್ಕಾಗಿ ಕೋಟಾ–ಭೋಪಾಲ್‌ ರಸ್ತೆಯ 470 ಸಿ.ಸಿ.ಟಿ.ವಿ. ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದೆ ಎಂದು ಪಾಲಿವಾಲ್‌ ತಿಳಿಸಿದ್ದಾರೆ.

ಪೊಲೀಸರು ಸುಳಿವುಗಳನ್ನು ಆಧರಿಸಿ ಜೈಪುರವನ್ನು ತಲುಪಿ, ಮಂಗಳವಾರ ರಾತ್ರಿ ಹಲವೆಡೆ ಹುಡುಕಾಟ ನಡೆಸಿದ್ದಾರೆ. ಈ ವೇಳೆ ನಾಲ್ಕು ವರ್ಷದ ಬಾಲಕ ಹಾಗೂ ಹತ್ತು ವರ್ಷದ ಹಿಂದೆ ಅಪಹರಣಕ್ಕೊಳಗಾಗಿದ್ದ ಬಾಲಕನನ್ನು ರಕ್ಷಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಬಂಧಿತ ವ್ಯಕ್ತಿಗಳನ್ನು ಮುಕೇಶ್‌ ಮದರಿ, ಕರಣ್‌, ಅರ್ಜುನ್‌, ರಜ್ಜೊ ಮತ್ತು ಪ್ರೇಮ್‌ ಎಂದು ಗುರುತಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT