ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ಥಾನ: ಸಚಿವ ಶೆಖಾವತ್‌ಗೆ ರಾಜಸ್ಥಾನ ಪೊಲೀಸರ ನೋಟಿಸ್‌

Published 12 ಅಕ್ಟೋಬರ್ 2023, 16:20 IST
Last Updated 12 ಅಕ್ಟೋಬರ್ 2023, 16:20 IST
ಅಕ್ಷರ ಗಾತ್ರ

ಜೈಪುರ (ಪಿಟಿಐ): ರಾಜಸ್ಥಾನ ಪೊಲೀಸರು ತಮಗೆ ನೋಟಿಸ್‌ ನೋಡಿದ್ದು ಬ್ಯಾಂಕ್‌ ಖಾತೆಗಳ ವಿವರ ಮತ್ತು ಹಣಕಾಸು ವಹಿವಾಟು ವಿವರ ಒದಗಿಸುವಂತೆ ಸೂಚಿಸಿದ್ದಾರೆ ಎಂದು ಕೇಂದ್ರ  ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೆಖಾವತ್‌ ಗುರುವಾರ ಹೇಳಿದರು.

ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ ಅವರು ತಮ್ಮ ವಿರುದ್ಧ ರಾಜಕೀಯ ದ್ವೇಷ ಸಾಧಿಸುತ್ತಿದ್ದಾರೆಂದು ಆರೋಪಿಸಿದ್ದರಿಂದಲೇ ತಮಗೆ ಈ ನೋಟಿಸ್‌ ನೀಡಲಾಗಿದೆ ಎಂದೂ ಅವರು ಆರೋಪಿಸಿದರು.

‘ಜೋಧ್‌ಪುರದ ತಮ್ಮ ನಿವಾಸಕ್ಕೆ ಈ ನೋಟಿಸ್‌ ಕಳುಹಿಸಲಾಗಿದೆ. ಇದೇ ಮೊದಲ ಬಾರಿಗೆ ನನಗೆ ನೋಟಿಸ್‌ ನೀಡಲಾಗಿದೆ. ಇದಕ್ಕೂ ಮೊದಲು ಯಾವುದೇ ತನಿಖೆಗೆ ಕರೆದಿರಲಿಲ್ಲ ಅಥವಾ ನೋಟಿಸ್‌ ನೀಡಿರಲಿಲ್ಲ’ ಎಂದು ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ನೋಟಿಸ್‌ನಲ್ಲಿ ಕೇಳಿರುವ ವಿವರಗಳು ಈಗಾಗಲೇ ವಿಶೇಷ ಕಾರ್ಯಾಚರಣೆ ತಂಡದ ಬಳಿ ಇವೆ ಎಂದ ಅವರು, ‘ಎರಡು ವರ್ಷಗಳ ಹಿಂದೆ ನನ್ನ ವಿರುದ್ಧ ಮಾಧ್ಯಮಗಳಲ್ಲಿ ಆರೋಪ ಕೇಳಿ ಬಂದಾಗಲೇ ವಿಶೇಷ ಕಾರ್ಯಾಚರಣೆ ತಂಡಕ್ಕೆ ನಾನು ನನ್ನ ಪ್ರತಿನಿಧಿ ಮೂಲಕ ವಿವರಗಳನ್ನು ನೀಡಿದ್ದೇನೆ. ಆರೋಪಗಳು ಸುಳ್ಳು ಮತ್ತು ಇದು ರಾಜಕೀಯ ಪಿತೂರಿ ಎಂದು ತಿಳಿಸಿದ್ದೇನೆ’ ಎಂದು ಹೇಳಿದರು.

ಈಗ ಮತ್ತೆ ವಿವರಗಳನ್ನು ನೀಡುವುದಾಗಿಯೂ ಹೇಳಿದರು.

‘ನೋಟಿಸ್‌ನಲ್ಲಿ ಕೇಳಿರುವ ವಿವರಗಳೆಲ್ಲ ಅವರ ಬಳಿ ಇದೆ. ನನ್ನಿಂದ ಸಣ್ಣ ತಪ್ಪಾಗಿದ್ದರೂ ಕ್ರಮ ತೆಗೆದುಕೊಳ್ಳುವ ಅವಕಾಶವನ್ನು ಗೆಹಲೋತ್‌ ಅವರು ತಪ್ಪಿಸಿಕೊಳ್ಳುತ್ತಿರಲಿಲ್ಲ. ಇದು ರಾಜಕೀಯ ಪಿತೂರಿಯಷ್ಟೆ. ನನ್ನನ್ನು ಕ್ರಿಮಿನಲ್‌ ಎಂದು ಬಿಂಬಿಸಲು ಗೆಹಲೋತ್‌ ಯತ್ನಿಸುತ್ತಿದ್ದಾರೆ’ ಎಂದು ಆಪಾದಿಸಿದರು.

ಸಂಜೀವಿನಿ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿಯ ಹಗರಣದಲ್ಲಿ ಶೆಖಾವತ್‌ ಅವರು ಭಾಗಿಯಾಗಿರುವುದಾಗಿ ಮುಖ್ಯಮಂತ್ರಿ ಗೆಹಲೋತ್‌ ಆರೋಪಿಸುತ್ತಲೇ ಬಂದಿದ್ದಾರೆ.  ರಾಜಸ್ಥಾನ ಪೊಲೀಸರ ವಿಶೇಷ ಕಾರ್ಯಾಚರಣೆ ತಂಡ ಇದರ ತನಿಖೆ ನಡೆಸುತ್ತಿದೆ.

ಆದರೆ ಕೇಂದ್ರ ಸಚಿವರು ತಮ್ಮ ವಿರುದ್ಧದ ಆರೋಪಗಳು ಆಧಾರರಹಿತ ಮತ್ತು ತಮ್ಮ ವರ್ಚಸ್ಸಿಗೆ ಧಕ್ಕೆ ತರಲು ನಡೆಸಿರುವ ರಾಜಕೀಯ ಪಿತೂರಿ ಎಂದಿದ್ದಾರೆ. ಗೆಹಲೋತ್‌ ವಿರುದ್ಧ ದೆಹಲಿಯಲ್ಲಿ ಮಾನನಷ್ಟ ಮೊಕದ್ಧಮೆ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT