ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸುಡು ಬಿಸಿಲಿನಲ್ಲಿ 350 ಪುಷ್ ಅಪ್ ಮಾಡಿಸಿ ರ್‍ಯಾಗಿಂಗ್:ವಿದ್ಯಾರ್ಥಿಗೆ ಡಯಾಲಿಸಿಸ್

Published 26 ಜೂನ್ 2024, 10:09 IST
Last Updated 26 ಜೂನ್ 2024, 10:09 IST
ಅಕ್ಷರ ಗಾತ್ರ

ಜೈಪುರ: ವೈದ್ಯಕೀಯ ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿಗಳಿಂದ ನಡೆದ ರ್‍ಯಾಗಿಂಗ್‌ನಲ್ಲಿ ವಿದ್ಯಾರ್ಥಿಯೊಬ್ಬನಿಂದ ಬಲವಂತವಾಗಿ 350 ಪುಷ್ ಅಪ್ ಮಾಡಿಸಿರುವ ಪ್ರಕರಣ ರಾಜಸ್ಥಾನದ ದುಂಗಾರ್ಪುರ್‌ನಲ್ಲಿ ನಡೆದಿದೆ.

ಸುಡು ಬಿಸಿಲಿನಲ್ಲಿ ಪುಷ್ ಅಪ್ ಮಾಡಿದ ವಿದ್ಯಾರ್ಥಿ ತೀವ್ರ ಅಸ್ವಸ್ಥನಾಗಿದ್ದು, ಕಿಡ್ನಿ ಮತ್ತು ಲಿವರ್‌ಗೆ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಡಯಾಲಿಸಿಸ್‌ಗೆ ಒಳಗಾಗಿದ್ದಾನೆ.

ದೂರಿನ ಬಗ್ಗೆ ರ್‍ಯಾಗಿಂಗ್ ನಿಗ್ರಹ ಸಮಿತಿಯು ತನಿಖೆ ನಡೆಸಿದ್ದು, ರ್‍ಯಾಗಿಂಗ್ ನಡೆದಿರುವುದು ನಿಜ ಎಂದು ಪೊಲೀಸರು ಹೇಳಿದ್ದಾರೆ.

ಮೊದಲ ವರ್ಷದ ವೈದ್ಯಕೀಯ ವಿದ್ಯಾರ್ಥಿ ಪ್ರಥಮ್ ವ್ಯಾಸ್ ಮತ್ತು ಇತರ ವಿದ್ಯಾರ್ಥಿಗಳಿಂದ ಹಿರಿಯ ವಿದ್ಯಾರ್ಥಿಗಳು ಪುಷ್ ಅಪ್ ಮಾಡಿಸಿದ್ದಾರೆ. ಈ ಸಂದರ್ಭ ನಿತ್ರಾಣಗೊಂಡ ಪ್ರಥಮ್ ಅವರ ಕಿಡ್ನಿ ಮತ್ತು ಲಿವರ್‌ನಲ್ಲಿ ಗಂಭೀರ ಸೋಂಕು ಕಾಣಿಸಿಕೊಂಡಿದೆ. ಮೂರು ಬಾರಿ ಡಯಾಲಿಸಿಸ್ ಬಳಿಕ ಪ್ರಥಮ್, ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದಾರೆ. ಕಳೆದ ವರ್ಷ ಕಾಲೇಜಿಗೆ ಪ್ರವೇಶ ಪಡೆದಾಗಿನಿಂದ ಹಿರಿಯ ವಿದ್ಯಾರ್ಥಿಗಳು ರ್‍ಯಾಗಿಂಗ್ ಮತ್ತು ಟಾರ್ಚರ್ ಮಾಡುತ್ತಿದ್ದಾರೆ. ಹಲವು ಬಾರಿ ಹಲ್ಲೆ ಮಾಡಿದ್ದಾರೆ. ಇದರಿಂದಾಗಿ ಕಿರಿಯ ವಿದ್ಯಾರ್ಥಿಗಳು ಒತ್ತಡದಲ್ಲೇ ವ್ಯಾಸಂಗ ಮಾಡುವಂತಾಗಿದೆ ಎಂದು ಪ್ರಥಮ್ ತಂದೆ ಹೇಳಿದ್ದಾರೆ.

ಈ ಸಂಬಂಧ ಹಿರಿಯ ವಿದ್ಯಾರ್ಥಿಗಳಾದ ದೇವೇಂದ್ರ ಮೀನಾ, ಅಂಕಿತ್ ಯಾದವ್, ರವೀಂದ್ರ ಕುಲಾರಿಯಾ, ಸುರಜಿತ್ ದಾಬ್ರಿಯಾ, ವಿಶ್ವವೇಂದ್ರ ದಯಾಳ್, ಸಿದ್ಧಾರ್ಥ ಪರಿಹಾರ್, ಅಮನ್ ರಗೇರಾ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಕಾಲೇಜಿನಿಂದ ಅಮಾನತು ಮಾಡಲಾಗಿದೆ.

ರಾಜಸ್ಥಾನದ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ರ್‍ಯಾಗಿಂಗ್ ಪ್ರಕರಣಗಳು ಆಗಾಗ್ಗೆ ವರದಿಯಾಗುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT