ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜಸ್ಥಾನ ರಾಜಕೀಯ: ರಾಷ್ಟ್ರಪತಿ ಆಳ್ವಿಕೆಯ ಸುಳಿವು ನೀಡಿದ ವಿರೋಧ ಪಕ್ಷ ಬಿಜೆಪಿ

Published : 26 ಸೆಪ್ಟೆಂಬರ್ 2022, 3:10 IST
ಫಾಲೋ ಮಾಡಿ
Comments

ಜೈಪುರ: ರಾಜಸ್ಥಾನದಲ್ಲಿ ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ರಾಜಕೀಯ ಮೇಲಾಟಗಳು ನಡೆಯುತ್ತಿರುವ ಹೊತ್ತಿನಲ್ಲೇ, ಪ್ರತಿಪಕ್ಷ ಬಿಜೆಪಿ ರಾಷ್ಟ್ರಪತಿ ಆಳ್ವಿಕೆ ಹೇರುವ ಸುಳಿವನ್ನು ಭಾನುವಾರ ನೀಡಿದೆ.

‘ರಾಜಸ್ಥಾನದಲ್ಲಿ ಪ್ರಸ್ತುತ ರಾಜಕೀಯ ಬೆಳವಣಿಗೆಗಳು ರಾಷ್ಟ್ರಪತಿ ಆಳ್ವಿಕೆಯತ್ತ ಬೊಟ್ಟು ಮಾಡುತ್ತಿವೆ. ಅಶೋಕ್‌ ಗೆಹಲೋತ್‌ ನೀವೇಕೆ ನಾಟಕ ಮಾಡುತ್ತಿದ್ದೀರಿ? ಸಂಪುಟದ ಸಚಿವರು ರಾಜೀನಾಮೆ ನೀಡಿದ ಬಳಿಕ ನೀವೇಕೆ ವಿಳಂಬ ಮಾಡುತ್ತಿದ್ದೀರೀ? ನೀವೂ ರಾಜೀನಾಮೆ ನೀಡಿ’ ಎಂದು ವಿರೋಧ ಪಕ್ಷದ ಉಪನಾಯಕ ರಾಜೇಂದ್ರ ರಾಥೋಡ್ ಟ್ವಿಟರ್‌ನಲ್ಲಿ ಒತ್ತಾಯಿಸಿದ್ದಾರೆ.

‘ಇಂದಿನ ಭಾರತ-ಆಸ್ಟ್ರೇಲಿಯಾ ಕ್ರಿಕೆಟ್ ಪಂದ್ಯದಂತೇ ರಾಜಸ್ಥಾನದ ಕಾಂಗ್ರೆಸ್ ನಾಯಕತ್ವದಲ್ಲೂ ಅನಿಶ್ಚಿತತೆ ಉಂಟಾಗಿದೆ. ಶಾಸಕರ ಸಭೆಗಳು ಪ್ರತ್ಯೇಕವಾಗಿ ನಡೆಯುತ್ತಿವೆ. ಮತ್ತೊಂದೆಡೆ, ಬೂಟಾಟಿಕೆ ರಾಜೀನಾಮೆಯ ರಾಜಕೀಯ ಪ್ರಹಸನ ನಡೆಯುತ್ತಿದೆ. ಅವರು ಎಂಥ ಆಡಳಿತ ನಡೆಸುತ್ತಿದ್ದಾರೆ? ರಾಜಸ್ಥಾನವನ್ನು ಅವರು ಎಲ್ಲಿಗೆ ಕೊಂಡೊಯ್ಯುತ್ತಿದ್ದಾರೆ. ದೇವರೇ ರಾಜಸ್ಥಾನವನ್ನು ಉಳಿಸು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸತೀಶ್‌ ಪೂನಿಯಾ ಟ್ವೀಟ್‌ ಮಾಡಿದ್ದಾರೆ.

‘ಸರ್ಕಾರವು ಹೋಟೆಲ್‌ನಿಂದ ಕೆಲಸ ಮಾಡಲು ಅಣಿಯಾಗುತ್ತಿದೆ. ಶಿಬಿರ ಸರ್ಕಾರ ಮತ್ತೆ ಶಿಬಿರಕ್ಕೆ ಹೋಗಲು ಸಿದ್ಧವಾಗಿದೆ’ ಎಂದು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಟ್ವೀಟ್ ಮಾಡಿದ್ದಾರೆ.

ರಾಜಸ್ಥಾನ ಕಾಂಗ್ರೆಸ್‌ ನಲ್ಲಿನ ಬಿಕ್ಕಟ್ಟು ತಾರಕಕ್ಕೇರಿದೆ. ಭಾನುವಾರ ಸಂಜೆ ನಿಗದಿಯಾಗಿದ್ದ ಶಾಸಕಾಂಗ ಪಕ್ಷದ ಸಭೆಗೂ (ಸಿಎಲ್‌ಪಿ) ಮುನ್ನ, ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಶಾಸಕರ ಗುಂಪು ಸಾಮೂಹಿಕ ರಾಜೀನಾಮೆ ಬೆದರಿಕೆ ಹಾಕಿದೆ. ಸ್ಪೀಕರ್ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಲು ಸುಮಾರು 80 ಶಾಸಕರು ಮುಂದಾಗಿದ್ದಾರೆ. ಕೆಲ ಮಂದಿ ರಾಜೀನಾಮೆಯನ್ನೂ ನೀಡಿದ್ದಾರೆ.

ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಗೆಹಲೋತ್ ಆಯ್ಕೆಯಾ ದಲ್ಲಿ, ರಾಜಸ್ಥಾನದ ಮುಖ್ಯಮಂತ್ರಿ ಯಾಗಿ ಸಚಿನ್ ಪೈಲಟ್ ನೇಮಕವಾಗುವ ಸಾಧ್ಯತೆಯಿದೆ ಎಂಬ ಕಾರಣಕ್ಕೆ ಗೆಹಲೋತ್ ಬಣದ ಶಾಸಕರು ಈ ನಡೆ ಅನುಸರಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಈ ಮೂಲಕ, ಸರ್ಕಾರದ ಮೇಲೆ ಹಿಡಿತ ಸಾಧಿಸಲು ಗೆಹಲೋತ್–ಪೈಲಟ್ ಬಣಗಳು ಮತ್ತೆ ಸಂಘರ್ಷಕ್ಕೆ ಇಳಿದಿರುವುದು ಸ್ಪಷ್ಟವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT