ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನವ್ಯ, ಭವ್ಯ, ದಿವ್ಯ ಅಯೋಧ್ಯೆ.. ಸಂಭ್ರಮದಲ್ಲಿ ‘ಧಾರ್ಮಿಕ ನಗರ’ದ ನಿವಾಸಿಗಳು

Published 22 ಜನವರಿ 2024, 16:04 IST
Last Updated 22 ಜನವರಿ 2024, 16:04 IST
ಅಕ್ಷರ ಗಾತ್ರ

ಅಯೋಧ್ಯೆ: ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಸಮಾರಂಭವು ‘ಧಾರ್ಮಿಕ ನಗರ’ ಅಯೋಧ್ಯೆಯ ನಿವಾಸಿಗಳಲ್ಲಿ ಪುಳಕ ಉಂಟುಮಾಡಿದೆ. ಇಡೀ ನಗರವು ಭಕ್ತಿಯ ಸಂಭ್ರಮದಲ್ಲಿ ಮಿಂದೆದ್ದಿದೆ. ನಿವಾಸಿಗಳು ಭಾವಪರವಶರಾಗಿದ್ದಾರೆ.

‘ನಾವೀಗ ದಿವ್ಯ ಅಯೋಧ್ಯೆ, ನವ್ಯ ಅಯೋಧ್ಯೆ, ಭವ್ಯ ಅಯೋಧ್ಯೆಯ ನಿವಾಸಿಗಳು. ಭಕ್ತಿಯ ಅನುಭವ, ಸಂಭ್ರಮ ನಮ್ಮನ್ನು ಆವರಿಸಿಕೊಂಡಿದೆ’ ಎಂದು ಸ್ಥಳೀಯ ನಿವಾಸಿಗಳು ತಮ್ಮ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.

ಶಾಲಾ ಶಿಕ್ಷಕ, ರಾಮಮಂದಿರ ಆವರಣದಲ್ಲಿಯೇ ನಿತ್ಯ ಬೆಳಗಿನ ವಾಯುವಿಹಾರ ನಡೆಸುತ್ತಿದ್ದ ಕೃಷ್ಣನಾಥ ಸಿಂಗ್ ಅವರು, ‘ನಮ್ಮ ಅಯೋಧ್ಯೆ ಈಗ ನವ್ಯ ಮತ್ತು ಭವ್ಯ ಅಯೋಧ್ಯೆಯಾಗಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

ಭಕ್ತಿಯ ಭಾವನೆಗಳನ್ನು ನಿಯಂತ್ರಿಸುತ್ತಲೇ, ‘ಈ ನಗರದ ಪ್ರತಿ ನಿವಾಸಿಗೂ ಇಂದು ಚರಿತ್ರಾರ್ಹ ದಿನ. ಬಾಲರಾಮ ತನ್ನ ಹಕ್ಕಿನ ಸ್ಥಾನದಲ್ಲಿ ಪ್ರತಿಷ್ಠಾಪನೆಗೊಂಡಿದ್ದಾನೆ. ಕರಸೇವಕರ ಸಂಘರ್ಷವನ್ನು ಹತ್ತಿರದಿಂದ ಕಂಡಿದ್ದ ನನಗೆ ಇದು ವಿಶೇಷವಾದ ದಿನ’ ಎಂದು ಹೇಳಿದರು. 

‘ಆಂಧ್ರಪ್ರದೇಶ ಮತ್ತು ನಾಗ್ಪುರದ ಕರಸೇವಕರು ಅಯೋಧ್ಯೆಯಿಂದ ಮಿರ್ಜಾಪುರ್‌ಗೆ ನಮ್ಮ ಗ್ರಾಮದ ಮೂಲಕವೇ ಹೋಗುತ್ತಿದ್ದರು. ಯಾವ ಕರಸೇವಕನೂ ಹಸಿವಿನಿಂದ ಹೋಗಬಾರದು ಎಂದು ನೋಡಿಕೊಳ್ಳುವುದು ನಮ್ಮ ಕರ್ತವ್ಯವಾಗಿತ್ತು. ನನಗೆ 1990ರ ದಶಕದ ದಿನಗಳು ನೆನಪಿವೆ. ಈ ದಿನಕ್ಕೆ ಸಾಕ್ಷಿಯಾಗಿದ್ದೇನೆ. ಎಲ್ಲ ಶ್ರಮ, ಸಂಘರ್ಷ ಇಂದು ಫಲಿತಾಂಶ ನೀಡಿದಂತಿದೆ’ ಎಂದೂ ಸ್ಮರಿಸಿದರು.

ಅಯೋಧ್ಯೆಯ ಖಜುರ‍್ಹಾಟ್‌ನ ನಿವಾಸಿ ಯಶವೇಂದ್ರ ಪ್ರತಾಪ್‌ ಸಿಂಗ್ ಅವರು, ‘ನಗರದ ಎಲ್ಲ ನಿವಾಸಿಗಳಲ್ಲಿ ಅಮಿತಾನಂದ ಕಾಣಿಸುತ್ತಿದೆ. ಇದು, ಒಂದು ರೀತಿಯಲ್ಲಿ ತಪಸ್ಸು ಈಡೇರಿದ ದಿನ’ ಎಂದು ಅಭಿಪ್ರಾಯಪಟ್ಟರು.

ಬಾಲಪಕೌಲಿಯ ನಿವಾಸಿ ಶೈಲೇಶ್‌ ಸಿಂಗ್ ಅವರು, ‘ಇಂದು ನಮ್ಮೆಲ್ಲರಿಗೂ ಹೆಮ್ಮೆಯ ದಿನ. ರಾಮಮಂದಿರ ನಿರ್ಮಾಣವಾಗಬೇಕು ಎಂದು ಸುದೀರ್ಘ ಕಾಲದಿಂದ ಬಯಸಿದ್ದೆವು. ನಾವು ಈಗ ಅದರ ಭಾಗವೂ ಆಗಿದ್ದೇವೆ. ನಗರದ ನಿವಾಸಿಯಾಗಿ, ಅತಿಥಿಗಳನ್ನು ಬರಮಾಡಿಕೊಳ್ಳಲು ಖುಷಿಯಾಗಲಿದೆ. ನಮ್ಮ ನಗರ ಈಗ ಹೊಸ ರೂಪದಲ್ಲಿ ವಿಶ್ವಮಾನ್ಯವಾಗಿದೆ’ ಎಂದು ಹೇಳಿದರು.

ಇಂತಹದೇ ಭಾವನೆಯನ್ನು ವ್ಯಕ್ತಪಡಿಸಿದ ಕೌಶಲಪುರಿ ಕಾಲೊನಿಯ ನಿವಾಸಿ ಲವಕುಶ ಶ್ರೀವಾತ್ಸವ ಅವರು, ‘ನಾವೀಗ ಭಕ್ತಿಭಾವದ, ನೂತನ ಮತ್ತು ಅದ್ಭುತವಾದ ಅಯೋಧ್ಯೆಯನ್ನು ಕಾಣುತ್ತಿದ್ದೇವೆ’ ಎಂದರು. ‘ಇದು, ಬೆಲೆ ಕಟ್ಟಲಾಗದಂತ ಕ್ಷಣ’ ಎಂದು ಅನಿಲ್‌ಸಿಂಗ್ ಪ್ರತಿಕ್ರಿಯಿಸಿದರು.

ಟ್ರಸ್ಟ್‌ನಿಂದ ಆಹ್ವಾನಿತ ಅತಿಥಿಗಳು ಮತ್ತು ಗಣ್ಯರಿಗೆ ಮಾತ್ರ ಸೋಮವಾರ ರಾಮ ಮಂದಿರದ ಆವರಣ ಪ್ರವೇಶಿಸಲು ಅನುಮತಿಯಿತ್ತು. ಇದರಿಂದ ಅಯೋಧ್ಯೆಯ ನಿವಾಸಿಗಳು ತಮ್ಮ ತಮ್ಮ ಮನೆ ಹಾಗೂ ವಿವಿಧೆಡೆ ಸ್ಥಾಪಿಸಿದ್ದ ಬೃಹತ್‌ ಎಲ್‌ಇಡಿ ಪರದೆಗಳಲ್ಲಿ ಕಾರ್ಯಕ್ರಮ ವೀಕ್ಷಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾಣ ಪ್ರತಿಷ್ಠಾಪನಾ ಪ್ರಕ್ರಿಯೆ ಕೊನೆಗೊಳಿಸುತ್ತಿದ್ದಂತೆಯೇ ಎಲ್ಲೆಡೆ ಜೈ ಶ್ರೀರಾಮ್‌ ಘೋಷಣೆ ಮೊಳಗಿದವು.

ತಮ್ಮ ಮನೆಗಳ ಮುಂದೆ ದೀಪ ಬೆಳಗಿದ ಸ್ಥಳೀಯ ನಿವಾಸಿಗಳು ಪರಸ್ಪರರಿಗೆ ಶುಭಾಶಯ ಕೋರಿದರು. ಸಂಜೆಯಾಗುತ್ತಿದ್ದಂತೆಯೇ ಸರಯೂ ನದಿ ದಡದ ಬಳಿಗೆ ಬಂದು ದೀಪ ಬೆಳಗಿದರು. 

ಮಂದಿರ ಲೋಕಾರ್ಪಣೆಯಲ್ಲಿ ಕಂಡಿದ್ದು...

  • ನಟರಾದ ಅಮಿತಾಭ್ ಬಚ್ಚನ್, ರಜನಿಕಾಂತ್, ಹೇಮಾ ಮಾಲಿನಿ, ಪವನ್ ಕಲ್ಯಾಣ್, ರಣದೀಪ್ ಹೂಡ, ಕಂಗನಾ ರನೌತ್, ರಿಷಬ್ ಶೆಟ್ಟಿ, ಉದ್ಯಮಿಗಳಾದ ಮುಕೇಶ್ ಅಂಬಾನಿ, ಲಕ್ಷ್ಮೀನಿವಾಸ್ ಮಿತ್ತಲ್, ಸುನಿಲ್ ಭಾರ್ತಿ ಮಿತ್ತಲ್, ಅನಿಲ್ ಅಂಬಾನಿ, ಕುಮಾರಮಂಗಲಂ ಬಿರ್ಲಾ, ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ವೆಂಕಟೇಶ ಪ್ರಸಾದ್, ಯೋಗ ಗುರು ಬಾಬಾ ರಾಮದೇವ, ಆರ್ಟ್‌ ಆಫ್‌ ಲಿವಿಂಗ್‌ನ ಶ್ರೀ ಶ್ರೀ ರವಿಶಂಕರ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಭಾಗಿ

  • ಕಾಶ್ಮೀರದಾದ್ಯಂತ ದೇವಾಲಯಗಳಲ್ಲಿ ವಿಶೇಷ ಪೂಜೆ

  • ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಠಾಣೆಯ ಕೋಪಿನೇಶ್ವರ ದೇಗುಲದ ಸಮೀಪದಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ‘ಡೋಲು’ ಬಾರಿಸಿ ಸಂಭ್ರಮಿಸಿದರು

  • ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಲೋಕಸಭಾ ಕ್ಷೇತ್ರವಾದ ವಯನಾಡುವಿನಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಸಂಭ್ರಮಿಸಿತು.

  • ‘ಬಾಲ ರಾಮನ ಪ್ರತಿಷ್ಠಾಪನೆ ಯು ಸರ್ವರಲ್ಲಿಯೂ ಶಾಂತಿ ಹಾಗೂ ಸೌಹಾರ್ದ ಮೂಡಿಸಲಿ’ ಎಂದು ದಕ್ಷಿಣ ಆಫ್ರಿಕಾದ ಕ್ರಿಕೆಟಿಗ, ಉತ್ತರ ಪ್ರದೇಶ ಮೂಲದವರಾದ ಕೇಶವ್ ಮಹಾರಾಜ್‌ ಆಶಿಸಿ, ಜಾಲತಾಣದಲ್ಲಿ ವಿಡಿಯೊ ಹಂಚಿಕೊಂಡಿದ್ದಾರೆ.

  • ‘ಪ್ರತಿಷ್ಠಾಪನೆ ಮುಹೂರ್ತದಲ್ಲಿ ದೇಶದಲ್ಲಿ ಜನಿಸಿದ ಹಲವಾರು ನವಜಾತ ಶಿಶುಗಳಿಗೆ ‘ರಾಮ’ ಅಥವಾ ‘ಸೀತಾ’ ಎಂದು ನಾಮ ಕರಣ. ಉತ್ತರ ಪ್ರದೇಶದ ಫಿರೋಜಾಬಾದ್‌ನ ಜಿಲ್ಲಾ ಆಸ್ಪತ್ರೆ ಯಲ್ಲಿ ಮುಸ್ಲಿಂ ಕುಟುಂಬದಲ್ಲಿ ಜನಸಿದ ಗಂಡು ಮಗುವಿಗೆ ‘ರಾಮ್‌ ರಹೀಮ್‌’ ಎಂದು ನಾಮಕರಣ

  • ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಭಕ್ತರೊಬ್ಬರಿಗೆ ಹೃದಯಾಘಾತವಾಗಿದ್ದು, ಭಾರತೀಯ ವಾಯು ಪಡೆಯ ತಂಡವು ತಕ್ಷಣವೇ ಸ್ಪಂದಿಸಿ ಅವರ ಪ್ರಾಣ ಉಳಿಸಿದೆ ಎಂದು ಮೂಲಗಳು ತಿಳಿಸಿವೆ.

  • ಗುಜರಾತ್‌ನ ವಡೋದರದಲ್ಲಿ ಹಮ್ಮಿಕೊಂಡಿದ್ದ ‘ಶೋಭಾಯಾತ್ರೆ’ ವೇಳೆ ಕಲ್ಲು ಎಸೆತ, ವ್ಯಕ್ತಿಗೆ ಗಾಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT