ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯುಷ್ಮಾನ್‌ಗೆ ಕ್ಯಾನ್ಸರ್‌ ಸೇರಿಸಿ: ಕೇಂದ್ರಕ್ಕೆ ಶಿಫಾರಸು

ಸಂಸದೀಯ ಸ್ಥಾಯಿ ಸಮಿತಿಯಿಂದ ಕೇಂದ್ರ ಸರ್ಕಾರಕ್ಕೆ ಶಿಫಾರಸು
Last Updated 11 ಡಿಸೆಂಬರ್ 2022, 19:30 IST
ಅಕ್ಷರ ಗಾತ್ರ

ನವದೆಹಲಿ: ಭಾರತದಲ್ಲಿ ಕ್ಯಾನ್ಸರ್‌ ಪೀಡಿತರ ಸಂಖ್ಯೆ ನಿಧಾನವಾಗಿ ಏರಿಕೆಯಾಗುತ್ತಿದ್ದು, ಸರ್ಕಾರದ ಆಯುಷ್ಮಾನ್ ಭಾರತ್–ಪಿಎಂಜೆಎವೈ ಯೋಜನೆಯ ವ್ಯಾಪ್ತಿಯಲ್ಲಿ ಕ್ಯಾನ್ಸರ್‌ ಚಿಕಿತ್ಸೆಯನ್ನು ಸೇರಿಸುವಂತೆ ಆರೋಗ್ಯ ಕುರಿತ ಸಂಸದೀಯ ಸ್ಥಾಯಿಸಮಿತಿ ಸದಸ್ಯರು ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಸಲಹೆ ನೀಡಿದ್ದಾರೆ. ಬಡವರು ಹಾಗೂ ಮಧ್ಯಮವರ್ಗದವರಿಗೆ ಕ್ಯಾನ್ಸರ್‌ ಚಿಕಿತ್ಸೆಗೆ ತಗಲುವ ಆರ್ಥಿಕ ಹೊರೆಯನ್ನು ತಗ್ಗಿಸಲು ಸಮಗ್ರ ಕ್ಯಾನ್ಸರ್ ಚಿಕಿತ್ಸೆ ಯೋಜನೆ ರೂಪಿಸುವಂತೆ ಮನವಿ ಮಾಡಿದ್ದಾರೆ.

ಬಹುತೇಕ ಕ್ಯಾನ್ಸರ್‌ಪೀಡಿತರಿಗೆ ರೇಡಿಯೊಥೆರಪಿ ಅಗತ್ಯವಿದ್ದು, ದೇಶದಾದ್ಯಂತ ಆಸ್ಪತ್ರೆಗಳಲ್ಲಿ ರೇಡಿಯೊಥೆರಪಿ ಯಂತ್ರಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ಶಿಫಾರಸು ಮಾಡಿದ್ದಾರೆ. ಯಂತ್ರಗಳ ಸಂಖ್ಯೆ ಹೆಚ್ಚಿಸುವುದರಿಂದ ರೇಡಿಯೊ ಥೆರಪಿ ಚಿಕಿತ್ಸೆಗೆ ಒಳಗಾಗಲು ರೋಗಿಗಳು ಕಾಯುವ ಸಮಯ ಕಡಿಮೆಯಾಗುತ್ತದೆ. ಇದು ಕ್ಯಾನ್ಸರ್‌ನಿಂದ ಮೃತಪಡುವ ಪ್ರಮಾಣವನ್ನು ತಗ್ಗಿಸುತ್ತದೆ.

‘ಕ್ಯಾನ್ಸರ್‌ ಆಸ್ಪತ್ರೆಗಳ ಸಮೀಪ ರೋಗಿಗಳ ಅನುಕೂಲಕ್ಕಾಗಿ ಅತಿಥಿಗೃಹಗಳನ್ನು ನಿರ್ಮಿಸಬೇಕು. ಹೀಗೆ ಮಾಡುವುದರಿಂದ, ರೇಡಿಯೊಥೆರಪಿ ಚಿಕಿತ್ಸೆಗಾಗಿ ನಗರಗಳಿಗೆ ಬರುವ ರೋಗಿಗಳು ಹೋಟೆಲ್‌ಗಳಲ್ಲಿ ಉಳಿದುಕೊಂಡು ಹೆಚ್ಚು ಹಣ ತೆರುವುದನ್ನು ತಪ್ಪಿಸಬಹುದು. ಉಳಿತಾಯವಾದ ಈ ಹಣವು ಅವರ ಚಿಕಿತ್ಸೆಗೆ ನೆರವಿಗೆ ಬರುತ್ತದೆ’ ಎಂದು ಶಿಫಾರಸು ಮಾಡಿದ್ದಾರೆ.

ಈ ವರದಿಯು ಸಂಸತ್ತಿನ ಎರಡೂ ಸದನಗಳಲ್ಲಿ ಕಳೆದವಾರ ಮಂಡನೆಯಾಗಿದೆ.ಕ್ಯಾನ್ಸರ್‌ ಚಿಕಿತ್ಸೆಗೆ ಅಗತ್ಯ ಎಂದು ನ್ಯಾಷನಲ್ ಕ್ಯಾನ್ಸರ್ ಗ್ರಿಡ್ ಶಿಫಾರಸು ಮಾಡಿರುವ ಕ್ಯಾನ್ಸರ್ ಸಂಬಂಧಿ ಔಷಧಿಗಳನ್ನು ಆಯುಷ್ಮಾನ್‌ ಅಡಿಯಲ್ಲಿ ಸೇರ್ಪಡೆ ಮಾಡಬೇಕು ಎಂದು ಸ್ಥಾಯಿ ಸಮಿತಿ ಒತ್ತಾಯಿಸಿದೆ. ಈ ಯೋಜನೆಯಲ್ಲಿ ಈಗಾಗಲೇ ಇರುವ ಕ್ಯಾನ್ಸರ್ ಚಿಕಿತ್ಸಾ ವ್ಯವಸ್ಥೆಯನ್ನು ಪರಿಶೀಲನೆಗೆ ಒಳಪಡಿಸಬೇಕು ಎಂದೂ ಸಲಹೆ ನೀಡಿದೆ.

ಆಯುಷ್ಮಾನ್ ಯೋಜನೆಯಡಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ಚಿಕಿತ್ಸೆ ದೊರೆಯಬೇಕು. ಕ್ಯಾನ್ಸರ್‌ ಪತ್ತೆ ಪರೀಕ್ಷೆಗಳನ್ನು ಸರ್ಕಾರದ ಯೋಜನೆಯಡಿ ಸೇರ್ಪಡೆ ಮಾಡುವುದರಿಂದ, ಆರಂಭದಲ್ಲೇ ರೋಗಕ್ಕೆ ಚಿಕಿತ್ಸೆ ದೊರೆತು ಮರಣ ಪ್ರಮಾಣವನ್ನು ತಗ್ಗಿಸಬಹುದು ಎಂದು ವರದಿ ಅಭಿಪ್ರಾಯಪಟ್ಟಿದೆ.

ವರದಿಯ ಮುಖ್ಯಾಂಶಗಳು

l2008ರಲ್ಲಿ ದೇಶದಲ್ಲಿ ಕ್ಯಾನ್ಸರ್‌ನಿಂದ ಎಂಟು ಲಕ್ಷ ಜನರು ಮೃತಪಟ್ಟಿದ್ದರು. 2035ರ ವೇಳೆಗೆ ಈ ಸಂಖ್ಯೆ 13 ಲಕ್ಷಕ್ಕೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ

lಬಿಹಾರದಲ್ಲಿ ‘ನೈಪರ್’ ಸ್ವಯಂಸೇವಾ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಭಾಗಿಯಾಗಿದ್ದ ಕ್ಯಾನ್ಸರ್‌ ರೋಗಿ/ರೋಗಿಯ ಕುಟುಂಬದವರು ತಾವು ಹಣಕಾಸಿನ ತೀವ್ರ ಮುಗ್ಗಟ್ಟಿನಿಂದ ಬಳಲುತ್ತಿದ್ದೇವೆ ಎಂದು ಹೇಳಿದ್ದಾರೆ

lಕ್ಯಾನ್ಸರ್‌ ಚಿಕಿತ್ಸೆಗೆ ತಗಲುವ ಒಟ್ಟು ವೆಚ್ಚದಲ್ಲಿ ಶೇ 70ಕ್ಕಿಂತಲೂ ಹೆಚ್ಚನ್ನು ರೋಗಿಗಳು/ರೋಗಿಗಳ ಕುಟುಂಬದವರು ತಮ್ಮ ಸ್ವಂತ ಹಣದಿಂದಲೇ ಭರಿಸಬೇಕಾಗುತ್ತದೆ (ವಿಮೆ ಹೊರತುಪಡಿಸಿ)

lಕ್ಯಾನ್ಸರ್‌ ಚಿಕಿತ್ಸೆಗೆ ತಗಲುವ ಒಟ್ಟು ವೆಚ್ಚದಲ್ಲಿ ಶೇ 40ರಷ್ಟನ್ನು ಸಾಲ ಅಥವಾ ಆಸ್ತಿ ಮಾರಾಟದಿಂದ ಹೊಂದಿಸಿಕೊಳ್ಳುವ ಸ್ಥಿತಿ ಇದೆ ಎಂದು ಶೇ 76.5ರಷ್ಟು ರೋಗಿಗಳು/ರೋಗಿಗಳ ಕುಟುಂಬದವರು ಹೇಳಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT