ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಫ್ಐಆರ್‌ ದಾಖಲು ವಿಳಂಬ: ಕೋಲ್ಕತ್ತ ಪೊಲೀಸರಿಗೆ ಸುಪ್ರೀಂ ಕೋರ್ಟ್‌ ಛೀಮಾರಿ

Published : 22 ಆಗಸ್ಟ್ 2024, 16:10 IST
Last Updated : 22 ಆಗಸ್ಟ್ 2024, 21:54 IST
ಫಾಲೋ ಮಾಡಿ
Comments

ನವದೆಹಲಿ: ಕೋಲ್ಕತ್ತದ ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿಯ ಮೇಲಿನ ಅತ್ಯಾಚಾರ ಹಾಗೂ ಹತ್ಯೆಯ ವಿಚಾರ ತಿಳಿದ ನಂತರ ಎಫ್‌ಐಆರ್ ದಾಖಲಿಸಿಕೊಳ್ಳುವಲ್ಲಿ ವಿಳಂಬ ಮಾಡಿದ್ದಕ್ಕಾಗಿ ಕೋಲ್ಕತ್ತ ಪೊಲೀಸರಿಗೆ ಸುಪ್ರೀಂ ಕೋರ್ಟ್‌ ಗುರುವಾರ ಛೀಮಾರಿ ಹಾಕಿದೆ.

ಈ ಘಟನೆಯು ತೀರಾ ತಲ್ಲಣಗೊಳಿಸುವಂಥದ್ದು ಎಂದು ಕೋರ್ಟ್ ಹೇಳಿದೆ. ಪೊಲೀಸರು ನಡೆಸಿದ ತನಿಖೆಯಲ್ಲಿ ಲೋಪಗಳು ಇದ್ದವು ಎಂಬ ಮಾತನ್ನು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠವು ಹೇಳಿದೆ. ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಮನೋಜ್ ಮಿಶ್ರಾ ಅವರೂ ಈ ಪೀಠದಲ್ಲಿದ್ದಾರೆ.

ಈ ಅತ್ಯಾಚಾರ ಮತ್ತು ಹತ್ಯೆ ಕುರಿತು ಸ್ವಯಂಪ್ರೇರಿತವಾಗಿ ದಾಖಲು ಮಾಡಿಕೊಂಡಿರುವ ಪ್ರಕರಣದ ವಿಚಾರಣೆ ನಡೆಸಿದ ಪೀಠವು, ಎಫ್‌ಐಆರ್‌ ದಾಖಲು ಮಾಡಿಕೊಳ್ಳುವಲ್ಲಿ 14 ತಾಸುಗಳ ವಿಳಂಬ ಆಗಿದ್ದಕ್ಕೆ, ಆ ವಿಳಂಬಕ್ಕೆ ವಿವರಣೆ ನೀಡದಿರುವುದಕ್ಕೆ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿತು.

ಅಲ್ಲದೆ, ಅಸಹಜ ಸಾವು ಎಂಬ ಪ್ರಕರಣ ದಾಖಲಿಸಿಕೊಳ್ಳುವ ಮೊದಲೇ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಆಗಸ್ಟ್‌ 9ರಂದು ಸಂಜೆ 6.10ರಿಂದ 7.10ರ ನಡುವೆ ನಡೆಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿತು.

‘ಮರಣೋತ್ತರ ಪರೀಕ್ಷೆಯನ್ನು ಆಗಸ್ಟ್ 9ರ ಸಂಜೆ 6.10ಕ್ಕೆ ನಡೆಸಿದ್ದರೂ, ತಾಲಾ ಪೊಲೀಸ್ ಠಾಣೆಗೆ ರಾತ್ರಿ 11.30ಕ್ಕೆ ಅಸಹಜ ಸಾವು ಕುರಿತ ಮಾಹಿತಿ ರವಾನಿಸಿದ್ದು ಹೇಗೆ? ಇದು ಮನಸ್ಸನ್ನು ಬಹಳವಾಗಿ ಕಲಕುವಂಥದ್ದು’ ಎಂದು ಪೀಠವು ‍ಹೇಳಿತು.

ತನಿಖೆಯ ಸಂದರ್ಭದಲ್ಲಿ ಅಸಡ್ಡೆ ತೋರಲಾಗಿದೆ ಎಂಬುದರತ್ತ ಬೊಟ್ಟು ಮಾಡಿದ ನ್ಯಾಯಮೂರ್ತಿ ಪಾರ್ದೀವಾಲಾ ಅವರು, ‘ನೀವು ಮರಣೋತ್ತರ ಪರೀಕ್ಷೆ ಆರಂಭಿಸುತ್ತೀರಿ ಎಂದಾದರೆ ಅದು ಅಸಹಜ ಸಾವು ಎಂದೇ ಅರ್ಥ. ಹೀಗಿದ್ದರೂ, ಅಸಹಜ ಸಾವು ಪ್ರಕರಣವನ್ನು ಮರಣೋತ್ತರ ಪರೀಕ್ಷೆ ನಡೆಸಿದ ನಂತರದಲ್ಲಿ ರಾತ್ರಿ 11.30ಕ್ಕೆ ದಾಖಲಿಸಿಕೊಳ್ಳಲಾಗಿದೆ, ನಂತರ 11.45ಕ್ಕೆ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದರು.

‘ನಿಮ್ಮ ರಾಜ್ಯವು ಅನುಸರಿಸಿರುವ ಇಡೀ ಪ್ರಕ್ರಿಯೆಯನ್ನು ನಾನು ನನ್ನ 30 ವರ್ಷಗಳ ವೃತ್ತಿ ಜೀವನದಲ್ಲಿ ಎಲ್ಲಿಯೂ ಕಂಡಿಲ್ಲ’ ಎಂದು ಪಾರ್ದೀವಾಲಾ ಹೇಳಿದರು.

‘ಮೃತದೇಹ ಕಂಡ ಸರಿಸುಮಾರು 14 ಗಂಟೆಗಳ ನಂತರದಲ್ಲಿ ಎಫ್‌ಐಆರ್ ದಾಖಲು ಮಾಡಿಕೊಂಡಿದ್ದಕ್ಕೆ ಕಾರಣ ಏನು? ಇಲ್ಲಿ ಬಹುಮುಖ್ಯವಾದ ಸಂಗತಿಯೆಂದರೆ ಕಾಲೇಜಿನ ಪ್ರಾಂಶುಪಾಲರು ಕಾಲೇಜಿಗೆ ನೇರವಾಗಿ ಬರಬೇಕಿತ್ತು, ಎಫ್‌ಐಆರ್ ದಾಖಲಿಸಲು ನಿರ್ದೇಶನ ನೀಡಬೇಕಿತ್ತು. ಅವರು ಯಾರ ಜೊತೆ ಸಂಪರ್ಕದಲ್ಲಿದ್ದರು? ಅದರ ಉದ್ದೇಶ ಏನು?’ ಎಂದು ನ್ಯಾಯಪೀಠವು ಪಶ್ಚಿಮ ಬಂಗಾಳ ಸರ್ಕಾರದ ಪರ ವಕೀಲ ಕಪಿಲ್ ಸಿಬಲ್ ಅವರನ್ನು ಪ್ರಶ್ನಿಸಿತು.

ಪ್ರಾಂಶುಪಾಲರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ತಕ್ಷಣವೇ ಅವರನ್ನು ಇನ್ನೊಂದು ಕಾಲೇಜಿನ ಪ್ರಾಂಶುಪಾಲರನ್ನಾಗಿ ನೇಮಕ ಮಾಡಲಾಯಿತು ಎಂದೂ ಪೀಠ ಹೇಳಿತು.

ಸುರಕ್ಷತೆಗೆ ನಿರ್ದೇಶನ:

ವೈದ್ಯರ ಸುರಕ್ಷತೆಗೆ, ಪ್ರತಿಭಟನೆಯ ವೇಳೆ ಪಾಲಿಸಬೇಕಿರುವ ನಿಯಮಗಳ ಕುರಿತು, ಪ್ರತಿಭಟನಕಾರರ ಹಕ್ಕುಗಳ ಬಗ್ಗೆ ಹಾಗೂ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಹಲವು ನಿರ್ದೇಶನಗಳನ್ನು ಪೀಠವು ನೀಡಿದೆ.

  • ಆರೋಗ್ಯಸೇವೆ ಒದಗಿಸುವ ವೃತ್ತಿನಿರತರ ಸುರಕ್ಷತೆ ಖಾತರಿಪಡಿಸಲು ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿಯು ರಾಜ್ಯಗಳ ಮುಖ್ಯ ಕಾರ್ಯದರ್ಶಿ ಹಾಗೂ ಡಿಜಿಪಿ ಜೊತೆ ಮಾತುಕತೆ ನಡೆಸಬೇಕು. ಈ ಪ್ರಕ್ರಿಯೆಯು ಒಂದು ವಾರದಲ್ಲಿ ಪೂರ್ಣಗೊಳ್ಳಬೇಕು.

  • ಅಪರಾಧ ನಡೆದ ಬಗ್ಗೆ ಮೊದಲ ಮಾಹಿತಿ ಪಡೆದ ಪೊಲೀಸ್ ಅಧಿಕಾರಿಯು ಸೆಪ್ಟೆಂಬರ್ 5ರಂದು ಕೋರ್ಟ್‌ನಲ್ಲಿ ಹಾಜರಿರಬೇಕು ಹಾಗೂ ಮಾಹಿತಿ ದೊರೆತ ಸಮಯದ ಬಗ್ಗೆ ತಿಳಿಸಬೇಕು.

  • ಕೋಲ್ಕತ್ತದಲ್ಲಿ ನಡೆದ ಘಟನೆ ಕುರಿತಾಗಿ ನಡೆಯುತ್ತಿರುವ ಶಾಂತಿಯುತ ಪ್ರತಿಭಟನೆಗಳಿಗೆ ಪಶ್ಚಿಮ ಬಂಗಾಳ ಸರ್ಕಾರವು ಅಡ್ಡಿ ಉಂಟುಮಾಡಬಾರದು.

  • ರಾಷ್ಟ್ರೀಯ ಕಾರ್ಯಪಡೆಗೆ ಅಗತ್ಯ ಸಲಹೆಗಳನ್ನು ನೀಡಲು ಸಾಧ್ಯವಾಗುವಂತೆ ಪೋರ್ಟಲ್ ಒಂದನ್ನು ಕೇಂದ್ರ ಆರೋಗ್ಯ ಸಚಿವಾಲಯವು ರೂಪಿಸಬೇಕು.

ಮುಷ್ಕರ ಹಿಂಪಡೆದ ವೈದ್ಯರು

ನವದೆಹಲಿ: ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಹಾಗೂ ಆಕೆಯ ಹತ್ಯೆಯನ್ನು ಖಂಡಿಸಿ 11 ದಿನಗಳಿಂದ ನಡೆಸುತ್ತಿದ್ದ ಮುಷ್ಕರವನ್ನು ಕೈಬಿಟ್ಟಿರುವುದಾಗಿ ದೆಹಲಿಯ ಏಮ್ಸ್ ಮತ್ತು ಆರ್‌ಎಂಎಲ್ ಆಸ್ಪತ್ರೆಯ ಸ್ಥಾನಿಕ ವೈದ್ಯರು ಗುರುವಾರ ಹೇಳಿದ್ದಾರೆ.

ಮುಷ್ಕರ ಕೈಬಿಡುವಂತೆ ಸುಪ್ರೀಂ ಕೋರ್ಟ್ ಮನವಿ ಮಾಡಿದ ಪರಿಣಾಮವಾಗಿ ವೈದ್ಯರು ಈ ತೀರ್ಮಾನ ಪ್ರಕಟಿಸಿದ್ದಾರೆ. ಮುಷ್ಕರವನ್ನು ಕೈಬಿಡಬೇಕು, ಕರ್ತವ್ಯಕ್ಕೆ ಮರಳಬೇಕು, ಕೆಲಸಕ್ಕೆ ಹಾಜರಾದ ನಂತರದಲ್ಲಿ ಯಾವುದೇ ಶಿಸ್ತುಕ್ರಮ ಜರುಗಿಸುವುದಿಲ್ಲ ಎಂದು ಕೋರ್ಟ್‌ ಹೇಳಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT