ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮಿಷನ್‌ ನಿರಾಕರಣೆ: ಹೊಸ ರಸ್ತೆ ಅಗೆದ ಬಿಜೆಪಿ ಶಾಸಕರ ಬೆಂಬಲಿಗ

Published 5 ಅಕ್ಟೋಬರ್ 2023, 15:57 IST
Last Updated 5 ಅಕ್ಟೋಬರ್ 2023, 15:57 IST
ಅಕ್ಷರ ಗಾತ್ರ

ಷಹಜಹಾನ್‌ಪುರ: ಗುತ್ತಿಗೆದಾರ ಶೇ 5ರಷ್ಟು ಕಮಿಷನ್‌ ಪಾವತಿಸಲು ನಿರಾಕರಿಸಿದ್ದಕ್ಕೆ ಆಕ್ರೋಶಗೊಂಡ ಬಿಜೆಪಿ ಶಾಸಕರ ಬೆಂಬಲಿಗರೊಬ್ಬರು, ಹೊಸದಾಗಿ ಡಾಂಬರ್ ಹಾಕಿ ಅಭಿವೃದ್ಧಿಪಡಿಸಿದ್ದ ರಸ್ತೆಯನ್ನು ಬುಲ್ಡೋಜರ್‌ ಬಳಸಿ ಸುಮಾರು ಅರ್ಧ ಕಿ.ಮೀ. ದೂರದಷ್ಟು ಕಿತ್ತು ಹಾಕಿರುವ ಘಟನೆ ಉತ್ತರ ಪ್ರದೇಶದ ಷಹಜಹಾನ್‌ಪುರದಲ್ಲಿ ನಡೆದಿದೆ.

ಷಹಜಹಾನ್‌ಪುರದಿಂದ ನಾವಡಾ ಮತ್ತು ಜೈತಿಪುರ ಮಾರ್ಗವಾಗಿ ಬುಡೌನ್‌ ಜಿಲ್ಲೆಗೆ ಸಂಪರ್ಕ ಬೆಸೆಯುವ ಈ ರಸ್ತೆಯು ಲೋಕೋಪಯೋಗಿ ಇಲಾಖೆಗೆ ಸೇರಿದೆ.

ಘಟನೆ ಬಗ್ಗೆ ಮಾಹಿತಿ ಪಡೆದಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಈ ಕೃತ್ಯ ಎಸಗಿದವರಿಂದಲೇ ಹಾನಿಯ ಸಂಪೂರ್ಣ ವೆಚ್ಚವನ್ನು ವಸೂಲಿ ಮಾಡುವಂತೆ ಸೂಚಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಸಂಜಯ್‌ ಕುಮಾರ್‌ ಪಾಂಡೆ ಅವರು, ಈ ಕುರಿತು ಪಿಡಬ್ಲ್ಯುಡಿ ಕಾರ್ಯ ನಿರ್ವಾಹಕ ಎಂಜಿನಿಯರ್ ಅವರಿಂದ ಮಾಹಿತಿ ಪಡೆದಿದ್ದು, ತಿಲ್ಹರ್ ಉಪ ವಿಭಾಗದ ಮ್ಯಾಜಿಸ್ಟೇಟ್‌ ನೇತೃತ್ವದಡಿ ತನಿಖೆಗೆ ಆದೇಶಿಸಿದ್ದಾರೆ.

ತಂಡವು ವರದಿ ಸಲ್ಲಿಸಿದ ಬಳಿಕ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.

ಬಿಜೆಪಿ ಶಾಸಕ ಯಾರು?:

ಕತ್ರಾ ಕ್ಷೇತ್ರದ ಶಾಸಕ ವೀರ ವಿಕ್ರಮ್ ಸಿಂಗ್ ಅವರ ಬೆಂಬಲಿಗ ಎನ್ನಲಾದ ಜಗವೀರ್ ಸಿಂಗ್ ಸೇರಿದಂತೆ 15ರಿಂದ 20 ಅಪರಿಚಿತರ ವಿರುದ್ಧ ರಸ್ತೆ ನಿರ್ಮಾಣ ಕಂಪನಿಯ ಮ್ಯಾನೇಜರ್‌ ನೀಡಿದ ದೂರಿನ ಅನ್ವಯ ಎಫ್‌ಐಆರ್‌ ದಾಖಲಾಗಿದೆ.

‘ಜಗವೀರ್ ಹಲವು ಬಾರಿ ಕಂಪನಿಯ ನೌಕರರನ್ನು ಬೆದರಿಸಿದ್ದಾರೆ. ಕಮಿಷನ್‌ ಕೊಡುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ನಿರಾಕರಿಸಿದ್ದಕ್ಕೆ ಅಕ್ಟೋಬರ್‌ 2ರಂದು ಅಪರಿಚಿತರ ತಂಡದೊಟ್ಟಿಗೆ ತೆರಳಿ ಕೆಲಸಗಾರರನ್ನು ಥಳಿಸಿದ್ದಾರೆ. ಬಳಿಕ ರಸ್ತೆಯನ್ನು ಅಗೆದು ಹಾಕಿದ್ದಾರೆ’ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಸದ್ಯ ರಸ್ತೆ ಅಭಿವೃದ್ಧಿ ಕಾರ್ಯ ಮತ್ತೆ ಆರಂಭಗೊಂಡಿದ್ದು, ಕಾಮಗಾರಿಯಲ್ಲಿ ತೊಡಗಿರುವವರಿಗೆ ಪೊಲೀಸ್‌ ಭದ್ರತೆ ಒದಗಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ವೀರ್ ವಿಕ್ರಮ್ ಸಿಂಗ್, ‘ಜಗವೀರ್ ಬಿಜೆಪಿ ಕಾರ್ಯಕರ್ತನಾಗಿರುವುದು ನಿಜ. ಆದರೆ, ಆತ ನನ್ನ ಬೆಂಬಲಿಗನಲ್ಲ. ಆತನಿಗೂ, ನನಗೂ ಯಾವುದೇ ಸಂಬಂಧ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT