ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಕಿಯೊಂದಿಗೆ ಆಟವಾಡುತ್ತಿದ್ದೀರಿ: ರಾಜ್ಯಪಾಲರಿಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ

Published 10 ನವೆಂಬರ್ 2023, 12:27 IST
Last Updated 10 ನವೆಂಬರ್ 2023, 12:28 IST
ಅಕ್ಷರ ಗಾತ್ರ
ADVERTISEMENT

ನವದೆಹಲಿ: ‘ವಿಧಾನಸಭೆ ಅಧಿವೇಶನದ ಸಿಂಧುತ್ವವನ್ನೇ ಅನುಮಾನಿಸುವ ಯಾವುದೇ ನಡೆಯು ಪ್ರಜಾಪ್ರಭುತ್ವ ವ್ಯವಸ್ಥೆಗೆ ಗಂಭೀರ ಅಪಾಯವನ್ನು ಉಂಟುಮಾಡಲಿದೆ. ನೀವು ಬೆಂಕಿಯೊಂದಿಗೆ ಆಟವಾಡುತ್ತಿದ್ದೀರಿ’ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಪಂಜಾಬ್‌ ರಾಜ್ಯಪಾಲರಿಗೆ ಕಟುಮಾತುಗಳಲ್ಲಿ ತರಾಟೆಗೆ ತೆಗೆದುಕೊಂಡಿತು.

‘ಪಂಜಾಬ್‌ ವಿಧಾನಸಭೆಯು ಜೂನ್‌ 19, 20ರಂದು ನಡೆದಿದ್ದ ಅಧಿವೇಶನದಲ್ಲಿ ಅಂಗೀಕರಿಸಿ, ಅನುಮೋದನೆಗಾಗಿ ಕಳುಹಿಸಿರುವ ಮಸೂದೆಗಳ ಕುರಿತು ತೀರ್ಮಾನಿಸಬೇಕು’ ಎಂದು ರಾಜ್ಯಪಾಲ ಬನ್ವಾರಿಲಾಲ್‌ ಪುರೋಹಿತ್ ಅವರಿಗೆ ತಾಕೀತು ಮಾಡಿತು.

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ ತ್ರಿಸದಸ್ಯರ ನ್ಯಾಯಪೀಠವು, ‘ಜೂನ್‌ 19 ಮತ್ತು 20ರಂದು ನಡೆದಿದ್ದ ಪಂಜಾಬ್‌ ವಿಧಾನಸಭೆಯ ಅಧಿವೇಶನವು ಸಾಂವಿಧಾನಿಕವಾಗಿ ಕ್ರಮಬದ್ಧವಾಗಿದೆ’ ಎಂದು ಘೋಷಿಸಿತು. ಮಸೂದೆಗಳಿಗೆ ಸಂಬಂಧಿಸಿದಂತೆ ಕಡ್ಡಾಯವಾಗಿ ತೀರ್ಮಾನ ತೆಗೆದುಕೊಳ್ಳಬೇಕು ಎಂದೂ ರಾಜ್ಯಪಾಲರಿಗೆ ಸ್ಪಷ್ಟನಿರ್ದೇಶನ ನೀಡಿತು.

ರಾಜ್ಯಪಾಲರ ಧೋರಣೆಯನ್ನು ಪ್ರಶ್ನಿಸಿ ಪಂಜಾಬ್‌ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಮುಂದುವರಿಸಿದ ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದಿವಾಲಾ ಮತ್ತು ಮನೋಜ್‌ ಮಿಶ್ರಾ ಅವರಿದ್ದ ಪೀಠವು, ಈ ಕುರಿತು ಕಠಿಣ ಅಭಿಪ್ರಾಯಗಳನ್ನು ದಾಖಲಿಸಿತು.

ರಾಜ್ಯಪಾಲರನ್ನು ಪ್ರತಿನಿಧಿಸಿದ್ದ ವಕೀಲ ಸತ್ಯಪಾಲ್ ಜೈನ್‌ ಅವರಿಗೆ, ‘ನಿಮಗೆ ಪರಿಸ್ಥಿತಿಯ ಗಂಭೀರತೆ ಅರಿವಿದೆಯೇ? ನೀವು ಬೆಂಕಿಯೊಂದಿಗೆ ಆಟವಾಡುತ್ತಿದ್ದೀರಿ’ ಎಂದು ನೇರವಾಗಿ ತರಾಟೆಗೆ ತೆಗೆದುಕೊಂಡಿತು. 

ಪಂಜಾಬ್‌ ಸರ್ಕಾರವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲರಾದ ಎ.ಎಂ.ಸಿಂಘ್ವಿ ಅವರು ಈ ಹಂತದಲ್ಲಿ, ‘ಜೂನ್‌ ತಿಂಗಳಲ್ಲಿ ಅಧಿವೇಶನ ನಡೆಸುವ ಸ್ಪೀಕರ್‌ ಅವರ ಅಧಿಕಾರವನ್ನೇ ರಾಜ್ಯಪಾಲರು ಶಂಕಿಸುತ್ತಿದ್ದಾರೆ’ ಎಂದು ಪೀಠದ ಗಮನಕ್ಕೆ ತಂದರು.

ಇದಕ್ಕೆ ಪೀಠವು, ‘ರಾಜ್ಯಪಾಲರು ಇದನ್ನು ಹೇಗೆ ಹೇಳುತ್ತಾರೆ? ಪಂಜಾಬ್‌ನಲ್ಲಿ ಆಗುತ್ತಿರುವ ಬೆಳವಣಿಗೆಗಳು ತೃಪ್ತಿಕರವಾಗಿಲ್ಲ. ನಾವು ಸಂಸದೀಯ ಪ್ರಜಾಪ್ರಭುತ್ವದಲ್ಲಿ ಮುಂದುವರಿಯುತ್ತಿದ್ದೇವೆಯೇ ಎಂದು ಪ್ರಶ್ನಿಸಿತು.

‘ಜೂನ್‌ 19, 20ರಂದು ನಡೆದಿದ್ದ ಅಧಿವೇಶನದ ಸಿಂಧುತ್ವವನ್ನು ಪ್ರಶ್ನಿಸುವ, ಶಂಕಿಸುವ ಯಾವುದೇ ಸಾಂವಿಧಾನಿಕ ಆಧಾರಗಳು ಇಲ್ಲ ಎಂಬುದು ನಮ್ಮ ಅಭಿಪ್ರಾಯ. ಅಧಿವೇಶನದ ಕ್ರಮಬದ್ಧತೆಯನ್ನೇ ಅನುಮಾನಿಸುವ ಯಾವುದೇ ಪ್ರಯತ್ನಗಳು ಪ್ರಜಾಪ್ರಭುತ್ವ ವ್ಯವಸ್ಥೆಗೇ ಗಂಭೀರವಾದ ಅಪಾಯವನ್ನು ತರುವಂತಹದ್ದಾಗಿದೆ’ ಎಂದು ಪೀಠ ಅಭಿಪ್ರಾಯಪಟ್ಟಿತು. 

ಆದೇಶವನ್ನು ಸವಿವರವಾಗಿ ಉಕ್ತಗೊಳಿಸಿದ ಪೀಠವು, ‘ಸ್ಪೀಕರ್‌ರನ್ನು ಸದನದ ಹಕ್ಕುಬಾಧ್ಯತೆಗಳ ರಕ್ಷಕ ಎಂದು ಗುರುತಿಸಲಾಗುತ್ತದೆ. ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿ ಅವರು ಅಧಿಕಾರವನ್ನು ಸರಿಯಾಗಿ ನಿರ್ವಹಿಸಿದ್ದಾರೆ. ಪಂಜಾಬ್‌ ವಿಧಾನಸಭೆ ನಡಾವಳಿಯ ನಿಯಮ 16ರ ಪರಿಮಿತಿಯಲ್ಲೇ ಜೂನ್‌ನಲ್ಲಿ ಅಧಿವೇಶನವನ್ನು ಕರೆದಿದ್ದರು ಎಂದು ಹೇಳಿತು. 

‘ಅಧಿವೇಶನದ ಸಿಂಧುತ್ವವನ್ನು ಶಂಕಿಸುವ ಸಾಂವಿಧಾನಿಕ ಆಯ್ಕೆಯು ರಾಜ್ಯಪಾಲರಿಗೆ ಇಲ್ಲ. ಶಾಸನಸಭೆಯು ಪೂರ್ಣವಾಗಿ ಶಾಸನಸಭೆಗೆ ಚುನಾಯಿತರಾದ ಸದಸ್ಯರನ್ನು ಒಳಗೊಂಡಿದೆ’ ಎಂದು ಹೇಳಿತು.

ಈ ಕುರಿತ ಅದೇಶದಲ್ಲಿ, ‘ವಿಧಾನಸಭೆಯ ಅವಧಿಯಲ್ಲಿ ಸದನದ ಮುಂದೂಡಿಕೆ ಸ್ಪೀಕರ್‌ರ ನಿರ್ಧಾರಕ್ಕೆ ಒಳಪಟ್ಟಿದೆ. ಅಧಿವೇಶನವು ಸಾಂವಿಧಾನಿಕವಾಗಿ ಕ್ರಮಬದ್ಧವಾಗಿದ್ದು, ರಾಜ್ಯಪಾಲರು ಕಡ್ಡಾಯವಾಗಿ ಮಸೂದೆ ಕುರಿತು ನಿರ್ಧರಿಸಬೇಕು’ ಎಂದು ತಿಳಿಸಿತು.

‘ನಾವು ರಾಜ್ಯಪಾಲರ ಅಧಿಕಾರ ಅಥವಾ ಸಂವಿಧಾನದ ವಿಧಿ 200ರ ಪರಿಮಿತಿಯಲ್ಲಿ ಯಾವ ರೀತಿಯಾಗಿ ಕಾರ್ಯ ನಿರ್ವಹಿಸಬೇಕು ಎಂಬುದರ ಕುರಿತು ಯಾವುದೇ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿಲ್ಲ’ ಎಂದೂ ಪೀಠ ಸ್ಪಷ್ಟಪಡಿಸಿತು.

‘ಪ್ರಜಾಪ್ರಭುತ್ವದ ಸಂಸದೀಯ ವ್ಯವಸ್ಥೆಯಲ್ಲಿ ನಿಜವಾದ ಅಧಿಕಾರ ಚುನಾಯಿತ ಜನಪ್ರತಿನಿಧಿಗಳಿಗಿದೆ ಎಂಬುದನ್ನಷ್ಟೇ ನಾವು ಗಮನಿಸಿದ್ದೇವೆ. ರಾಷ್ಟ್ರಪತಿಯವರು ನೇಮಿಸುವ ರಾಜ್ಯಪಾಲರು ರಾಜ್ಯದಲ್ಲಿ ಸಂವಿಧಾನಿಕ ಮುಖ್ಯಸ್ಥರಾಗಿದ್ದಾರೆ’ ಎಂದಿತು.

ರಾಜ್ಯಪಾಲರ ಪರ ವಕೀಲ ಜೈನ್‌ ಅವರು, ಸಂವಿಧಾನದ ವಿಧಿ 174ರ ಅನ್ವಯ ಮಾರ್ಚ್‌ನಲ್ಲಿ ಸೇರಿದ್ದ ಬಜೆಟ್ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು. ಜೂನ್‌ನಲ್ಲಿ ನಡೆದಿದ್ದ ಅಧಿವೇಶನ ಕ್ರಮಬದ್ಧ ಎಂದು ಕೋರ್ಟ್‌ ಪರಿಗಣಿಸಿದರೆ ರಾಜ್ಯಪಾಲರು ಮಸೂದೆಗಳಿಗೆ ಸಂಬಂಧಿಸಿದ ಮುಂದಿನ ಕ್ರಮಕೈಗೊಳ್ಳಲು ಸಿದ್ಧರಿದ್ದಾರೆ ಎಂದು ತಿಳಿಸಿದರು.

ಅಧಿವೇಶನ ಮುಂದೂಡುವ ಸ್ಪೀಕರ್ ಅವರ ಅಧಿಕಾರವನ್ನು, ಸದನವನ್ನು ಶಾಶ್ವತವಾಗಿ ಯಥಾಸ್ಥಿತಿಯಲ್ಲಿ ಇಡಲು ದುರ್ಬಳಕೆ ಮಾಡಿಕೊಳ್ಳಲಾಗದು. ವಾರ್ಷಿಕವಾಗಿ ಮೂರು ಅಧಿವೇಶನಗಳು ಸೇರಲಿವೆ. ಒಂದು ಅಧಿವೇಶನವನ್ನು ಅನಿರ್ದಿಷ್ಟವಾಗಿ ಮುಂದೂಡಲು ಅವಕಾಶ ನೀಡಲಾಗದು ಎಂದು ಪೀಠವು ಇದಕ್ಕೆ ಪ್ರತಿಕ್ರಿಯಿಸಿತು.

ರಾಜ್ಯಪಾಲರ ನಡೆ: ಗಂಭೀರ ಪರಿಗಣನೆ ಅಗತ್ಯ ಎಂದು ಅಭಿಪ್ರಾಯ ಅಧಿವೇಶನ ಅಸಾಂವಿಧಾನಿಕ ಎನ್ನಲು ನಿಮಗಿರುವ ಅಧಿಕಾರವೇನು ಎಂದು ಪ್ರಶ್ನೆ ಸ್ಥಾಪಿತ ಸಂಪ್ರದಾಯ, ನಡಾವಳಿ ಪಾಲಿಸಿ ಎಂದು ಕಿವಿಮಾತು.

ನಾವು ಯಾರೊಬ್ಬರ ವಿರುದ್ಧವಾಗಿಲ್ಲ. ನಾವು ಆಟ ಆಡುತ್ತಿಲ್ಲ. ಇದು ಯಾರ ಗೆಲುವು ಅಲ್ಲ ಸೋಲೂ ಅಲ್ಲ. ಕಾಯ್ದೆಯ ಪ್ರಕಾರ ನಾನು ಕಾರ್ಯನಿರ್ವಹಿಸುತ್ತಿದ್ದೇನೆ. ಅದೇ ರೀತಿ ರಾಜ್ಯಪಾಲರೂ ಅವರ ಕರ್ತವ್ಯವನ್ನು ನಿರ್ವಹಿಸಲಿ
ಭಗವಂತ್ ಮಾನ್ ಮುಖ್ಯಮಂತ್ರಿ ಪಂಜಾಬ್‌

12 ಮಸೂದೆ ಹಲವು ಪ್ರಸ್ತಾವಗಳಿಗೆ ತಡೆ: ತಮಿಳುನಾಡು ರಾಜ್ಯಪಾಲರ ನಡೆಗೆ ಅತೃಪ್ತಿ

ನವದೆಹಲಿ: ‘12 ಮಸೂದೆಗಳು ಸೇರಿದಂತೆ ವಿವಿಧ ಪ್ರಸ್ತಾವಗಳ ಕುರಿತು ತೀರ್ಮಾನ ಕೈಗೊಳ್ಳದೇ ತಡೆಹಿಡಿದಿರುವ ತಮಿಳುನಾಡು ರಾಜ್ಯಪಾಲರ ನಡೆಯು ಗಂಭೀರವಾಗಿ ಪರಿಗಣಿಸಬೇಕಾದ ವಿಷಯ’ ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಹೇಳಿತು.

12 ಮಸೂದೆಗಳು ಬಂಧಿತರ ಅವಧಿಪೂರ್ಣ ಬಿಡುಗಡೆಗೆ ಸಂಬಂಧಿಸಿದ 54 ಪ್ರಸ್ತಾವಗಳು ಲೋಕಸೇವಾ ಆಯೋಗಕ್ಕೆ 10 ಜನರ ನೇಮಕ ಕುರಿತ ಪ್ರಸ್ತಾವ ಸರ್ಕಾರಿ ನೌಕರರನ್ನು ಶಿಕ್ಷೆಗೊಳಪಡಿಸುವ ವಿವಿಧ ಪ್ರಸ್ತಾವಗಳನ್ನು ರಾಜ್ಯಪಾಲರು ನಿರ್ಧಾರ ಕೈಗೊಳ್ಳದೆ ತಡೆಹಿಡಿದಿದ್ದಾರೆ ಎಂಬದನ್ನು ಕೋರ್ಟ್‌ ಗಮನಿಸಿತು. ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ ತ್ರಿಸದಸ್ಯರ ಪೀಠ ಈ ಕುರಿತು ಕೇಂದ್ರ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿತು.

ರಾಜ್ಯಪಾಲರ ನಡೆ ಪ್ರಶ್ನಿಸಿ ತಮಿಳುನಾಡು ಸರ್ಕಾರ ಅರ್ಜಿ ಸಲ್ಲಿಸಿತ್ತು. ತಮಿಳುನಾಡು ಸರ್ಕಾರವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲರಾದ ಎ.ಎಂ.ಸಿಂಘ್ವಿ ಮುಕುಲ್ ರೋಹಟಗಿ ಪಿ.ವಿಲ್ಸನ್ ವಾದವನ್ನು ಆಲಿಸಿದ ಪೀಠವು ‘ಇದು ಗಂಭೀರವಾಗಿ ಪರಿಗಣಿಸಬೇಕಾದ ವಿಷಯ’ ಎಂದಿತು. ಕೇಂದ್ರ ಸರ್ಕಾರ ಈ ಸಂಬಂಧ ಪ್ರತಿಕ್ರಿಯೆ ದಾಖಲಿಸಬೇಕು ಎಂದು ಸೂಚಿಸಿದ ಪೀಠವು ವಿಚಾರಣೆಯನ್ನು ನವೆಂಬರ್‌ 20ಕ್ಕೆ ಮುಂದೂಡಿತು. ಅಟಾರ್ನಿ ಜನರಲ್‌ ಆರ್.ವೆಂಕಟರಮಣಿ ಅಥವಾ ಸಾಲಿಸಿಟರ್‌ ಜನರಲ್‌ ತುಷಾರ್ ಮೆಹ್ತಾ ಅವರು ಇದಕ್ಕೆ ನೆರವಾಗಬೇಕು ಎಂದು ಪೀಠ ಬಯಸಿತು.

ಬಿಕ್ಕಟ್ಟು ಸೃಷ್ಟಿಸಿದ್ದೇನೆ ಎಂಬುದಕ್ಕೆ ಸಾಕ್ಷ್ಯ ಇದೆಯೇ –ಕೇರಳ ರಾಜ್ಯಪಾಲರ ಪ್ರಶ್ನೆ

ತಿರುವನಂತಪುರ: ‘ಸಂವಿಧಾನದ ಪ್ರಕಾರವೇ ಕಾರ್ಯನಿರ್ವಹಿಸುತ್ತಿದ್ದೇನೆ. ರಾಜ್ಯದಲ್ಲಿ ನಾನು ಬಿಕ್ಕಟ್ಟು ಸೃಷ್ಟಿಸಿದ್ದೇನೆ ಎಂಬುದಕ್ಕೆ ಸಾಕ್ಷ್ಯ ಇದೆಯೇ’ ಎಂದು ಕೇರಳದ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌ ಶುಕ್ರವಾರ ಪ್ರಶ್ನಿಸಿದರು. ನವದೆಹಲಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಆದರೆ ರಾಜ್ಯ ಸರ್ಕಾರ ಹಲವು ಸಂದರ್ಭಗಳಲ್ಲಿ ಗಡಿ ದಾಟಿದೆ’ ಎಂದರು.

ಮಸೂದೆಗಳಿಗೆ ಅನುಮೋದನೆ ಕುರಿತು ಸರ್ಕಾರ ಮತ್ತು ರಾಜಭವನದ ನಡುವಿನ ತಿಕ್ಕಾಟದ ಹಿನ್ನೆಲೆಯಲ್ಲಿ ಈ ಮಾತು ಹೇಳಿದರು. ‘ನಾನು ಬಿಕ್ಕಟ್ಟು ಸೃಷ್ಟಿಸಿದ್ದೇನೆ ಎಂಬುದಕ್ಕೆ ಅವರು (ಸರ್ಕಾರ) ಏನಾದರೂ ಸಾಕ್ಷ್ಯ ನೀಡಿದ್ದಾರೆಯೆ? ಸುಮ್ಮನೆ ಹೇಳಿಕೆ ನೀಡಿದರಾಗದು. ಬಿಕ್ಕಟ್ಟು ಎಂದರೆ ಸಂವಿಧಾನ ನೀಡಿರುವ ಅಧಿಕಾರವನ್ನು ಮೀರಿ ನಡೆಯುವುದು. ಈ ಕುರಿತ ಒಂದಾದರೂ ಸಾಕ್ಷ್ಯ ನೀಡಿ’ ಎಂದು ಹೇಳಿದರು. ‘ಆದರೆ ಸರ್ಕಾರ ತನ್ನ ಮಿತಿ ಮೀರಿ ನಡೆದಿದೆ ಎಂಬುದಕ್ಕೆ ದೊಡ್ಡ ಪಟ್ಟಿಯೇ ಇದೆ. ಬಿಕ್ಕಟ್ಟು ಸೃಷ್ಟಿಸುತ್ತಿರುವವರಾರು?’ ಎಂದು ಪ್ರಶ್ನಿಸಿದರು.

‘ರಾಜ್ಯದಲ್ಲಿ ಪಿಂಚಣಿ ವೇತನ ಪಾವತಿಯಾಗುತ್ತಿಲ್ಲ. ಆದರೆ ದೊಡ್ಡ ಸಂಭ್ರಮಾಚರಣೆಗಳು ನಡೆದಿವೆ’ ಎಂದು ಇತ್ತೀಚಿನ ‘ಕೇರಳೀಯಂ’ ಉತ್ಸವವನ್ನು ಉಲ್ಲೇಖಿಸಿ ಹೇಳಿದರು. ‘ನಾವು ಸಂಭ್ರಮಿಸುತ್ತಿದ್ದೇವೆ. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಈಜುಕೊಳ ನಿರ್ಮಿಸಿದ್ದೇವೆ‘ ಎಂದರು.

ಮಸೂದೆಗಳಿಗೆ ಅನುಮೋದನೆ ನೀಡುವಲ್ಲಿ ವಿಳಂಬವಾಗುತ್ತಿದೆ ಎಂದು ರಾಜ್ಯಪಾಲರ ವಿರುದ್ಧ ಕೇರಳ ಸರ್ಕಾರವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ರಾಜ್ಯಪಾಲರು ಸಂವಿಧಾನದ ಅನುಸಾರ ಕಾರ್ಯನಿರ್ವಹಿಸಬೇಕು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಗ್ರಹಿಸಿದ್ದರು. 

ಮಸೂದೆಗೆ ಅಂಗೀಕಾರ ನೀಡದಿರುವ ಕುರಿತ ಪ್ರಶ್ನೆಗೆ ಕಾನೂನು ಉಲ್ಲಂಘಿಸುವ ಕೆಲಸ ಮಾಡಬೇಡಿ ಎಂದು ಸಹಜವಾಗಿ ಯಾರೂ ಹೇಳುವುದಿಲ್ಲ. ನಾನು ಮತ್ತೆ ಮತ್ತೆ ಅದನ್ನೇ ಮಾಡುತ್ತಿದ್ದೇನೆ ಎಂದರು. ಲೋಕಾಯುಕ್ತ ತಿದ್ದುಪಡಿ ಮಸೂದೆ ಹಾಗೂ ವಿಶ್ವವಿದ್ಯಾಲಯಗಳ ಕಾಯ್ದೆ ತಿದ್ದುಪಡಿ ಎರಡು ಮಸೂದೆಗಳಿಗೆ ಅಂಗೀಕಾರ ನೀಡದೇ ರಾಜ್ಯಪಾಲರು ತಡೆಹಿಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT