ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡು: ಬಿಜೆಪಿ ಅಭ್ಯರ್ಥಿ ಸಂಬಂಧಿಕನ ಬಳಿ ₹4 ಕೋಟಿ ಜಪ್ತಿ

Published 7 ಏಪ್ರಿಲ್ 2024, 14:33 IST
Last Updated 7 ಏಪ್ರಿಲ್ 2024, 14:33 IST
ಅಕ್ಷರ ಗಾತ್ರ

ಚೆನ್ನೈ : ತಮಿಳುನಾಡಿನ ಬಿಜೆಪಿ ಅಭ್ಯರ್ಥಿಯೊಬ್ಬರ ಸಂಬಂಧಿಕರು ಮತ್ತು ಆಪ್ತರು ಎನ್ನಲಾಗಿರುವ ಮೂವರನ್ನು ಬಂಧಿಸಿ, ₹ 4 ಕೋಟಿ ಮೊತ್ತವನ್ನು ಜಪ್ತಿ ಮಾಡಲಾಗಿದೆ.

ಚೆನ್ನೈನ ಎಗ್ಮೊರ್‌ನಿಂದ ತಿರುನೆಲ್ವೆಲಿಗೆ ತೆರಳುತ್ತಿದ್ದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ತಂಬರಂ ರೈಲ್ವೆ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದರಿಂದ ಅಧಿಕಾರಿಗಳು ತಪಾಸಣೆ ನಡೆಸಿ ಬಂಧಿಸಿದ್ದಾರೆ. ಅವರ ಬಳಿ ಇದ್ದ ಹಣಕ್ಕೆ ಯಾವುದೇ ದಾಖಲೆಗಳು ಇರಲಿಲ್ಲ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಬಂಧಿತರಲ್ಲಿ ಒಬ್ಬರಾದ ಸತೀಶ್‌ ಎಂಬುವವರು ತಿರುನೆಲ್ವೆಲಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನೈನಾರ್‌ ನಾಗೇಂದ್ರನ್‌ ಸಂಬಂಧಿಕ ಮತ್ತು ಬಿಜೆಪಿ ಕಾರ್ಯಕರ್ತ. ಇನ್ನಿಬ್ಬರು ಆರೋಪಿಗಳಾದ ನವೀನ್ ಮತ್ತು ಪೆರುಮಾಳ್‌ ಸಹ ನಾಗೇಂದ್ರನ್‌ ಬೆಂಬಲಿಗರಾಗಿದ್ದಾರೆ. ಈ ಮೂವರು ಚೆನ್ನೈನಲ್ಲಿರುವ ನಾಗೇಂದ್ರನ್‌ ಒಡೆತನದ ಹೋಟೆಲ್ ಬ್ಲೂ ಡೈಮಂಡ್‌ನಲ್ಲಿ ತಂಗಿದ್ದರು.

‘ಈ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಎಲ್ಲ ಮಾಹಿತಿ ನೀಡಲಾಗಿದ್ದು, ಸಮಗ್ರ ತನಿಖೆ ಕೈಗೊಳ್ಳಲಿದೆ’ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ತಿಳಿಸಿದೆ.

ನಾಗೇಂದ್ರನ್‌ ವಿರುದ್ಧ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿರುವ ಆಡಳಿತರೂಢ ಡಿಎಂಕೆ, ‘ಮತದಾರರಿಗೆ ಹಣ ಹಂಚುವ ಯೋಜನೆ ರೂಪಿಸಿದ್ದ ನಾಗೇಂದ್ರನ್ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು  ಆಗ್ರಹಿಸಿದೆ.

‘ನಾಗೇಂದ್ರನ್‌ ಅವರು ಮತದಾರರಿಗೆ ಹಂಚಲು ಕೋಟ್ಯಂತರ ರೂಪಾಯಿ ಹಣವನ್ನು ಗುಪ್ತ ಸ್ಥಳಗಳಲ್ಲಿ ಸಂಗ್ರಹಿಸಿಟ್ಟಿದ್ದಾರೆ’ ಎಂದು  ಡಿಎಂಕೆ ಸಂಘಟನಾ ಕಾರ್ಯದರ್ಶಿ ಆರ್‌.ಎಸ್‌ ಭಾರತಿ ದೂರಿನಲ್ಲಿ ಆರೋಪಿಸಿದ್ದಾರೆ.

ಆರೋಪದ ಬಗ್ಗೆ ತಮಿಳು ಸುದ್ದಿ ವಾಹಿನಿಯೊಂದಕ್ಕೆ ಪ್ರತಿಕ್ರಿಯೆ ನೀಡಿದ ನಾಗೇಂದ್ರನ್‌ ಅವರು, ‘ಜಪ್ತಿಯಾಗಿರುವ ಹಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT