ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಸಭೆ: ದೀಪೇಂದರ್ ಹೂಡಾ ಬಳಿ ‘ಗುರುದಕ್ಷಿಣೆ’ ಕೇಳಿದ ಧನಕರ್!

ಸಂಸದರಿಗೆ ಜನ್ಮದಿನದ ಶುಭಾಶಯ ಕೋರಿದ ಸಭಾಪತಿ
Published 4 ಆಗಸ್ಟ್ 2023, 13:15 IST
Last Updated 4 ಆಗಸ್ಟ್ 2023, 13:15 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪ್ರಸಕ್ತ ಮುಂಗಾರು ಅಧಿವೇಶನದಲ್ಲಿ ನಿರಂತರ ಅಡಚಣೆಗಳಿಗೆ ಸಾಕ್ಷಿಯಾದ ರಾಜ್ಯಸಭೆಯು ಶುಕ್ರವಾರ ಬೆಳಿಗ್ಗೆ ಸಭಾಪತಿ ಜಗದೀಪ್ ಧನಕರ್ ಅವರು ಕಾಂಗ್ರೆಸ್‌ನ ಸಂಸದ ದೀಪೇಂದರ್ ಸಿಂಗ್ ಹೂಡಾ ಅವರಿಂದ ‘ಗುರುದಕ್ಷಿಣೆ’ ಕೋರಿದಾಗ ಕೆಲ ಲಘು ಕ್ಷಣಗಳಿಗೆ ಸಾಕ್ಷಿಯಾಯಿತು. 

ಮೆಯೊ ಕಾಲೇಜಿನಲ್ಲಿ ಹೂಡಾ ಅವರಿಗೆ ಸೀನಿಯರ್ ಆಗಿದ್ದ ಧನಕರ್ ಅವರು, ಆರ್‌ಜೆಡಿ ಸಂಸದ ಮನೋಜ್ ಝಾ ಅವರ ಹುಟ್ಟುಹಬ್ಬಕ್ಕೆ ಉಡುಗೊರೆ ಖರೀದಿಸಿ ಕೊಡುವಂತೆ ಕೇಳಿದರು. ನಂತರ ಧನಕರ್ ಸಂಸದರಾದ ವೈಎಸ್‌ಆರ್‌ಸಿಪಿಯ ವೆಂಕಟರಮಣ ರಾವ್ ಮೋಪಿದೇವಿ ಮತ್ತು ಕಾಂಗ್ರೆಸ್‌ನ ಇಮ್ರಾನ್ ಪ್ರತಾಪ್‌ಗಢಿ ಅವರಿಗೂ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದರು. 

ಮೆಯೊ ಕಾಲೇಜಿನಲ್ಲಿ ಹೂಡಾ ಅವರ ‘ಸೀನಿಯರ್’ ಆಗಿದ್ದರಿಂದ, ಉಡುಗೊರೆ ಕೊಡುವಂತೆ ಸೂಚಿಸಲು ನನಗೆ ವಿಶೇಷ ಅಧಿಕಾರ ಇದೆ ಎಂದು ಸದನಕ್ಕೆ ಧನಕರ್ ಮಾಹಿತಿ ನೀಡಿದರು. ಹೂಡಾ ದಿನದ ಅಂತ್ಯದ ವೇಳೆಗೆ ಮನೋಜ್ ಝಾ ಅವರಿಗೆ ತಮ್ಮ ಜೇಬಿನಿಂದ ನನ್ನ ಪರವಾಗಿ ಉಡುಗೊರೆಯನ್ನು  ‘ಗುರುದಕ್ಷಿಣೆ’ಯಾಗಿ ನೀಡಲಿದ್ದಾರೆ. ಇದನ್ನು ಎಎಪಿಯ ಸುಶೀಲ್‌ಕುಮಾರ್ ಗುಪ್ತಾ ಖಾತರಿಪಡಿಸುತ್ತಾರೆ’ ಎಂದು ಧನಕರ್‌ ಹೇಳಿದಾಗ ಸದನದಲ್ಲಿ ನಗುವಿನ ಅಲೆಯ ಜತೆಗೆ ಸಂಸದರು ಮೇಜು ಕುಟ್ಟಿ ಸಹಮತ ವ್ಯಕ್ತಪಡಿಸಿದರು. 

‘ಝಾ ಅವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ನನಗೂ ಮಗಳಿದ್ದಾಳೆ. ನಾನೂ ಕೂಡಾ ಝಾ ಅವರ ‘ಮಗಳ ಕ್ಲಬ್’ಗೆ ಸೇರಿದ್ದೇನೆ ಎಂದರು. 

ಇದಕ್ಕೂ ಮುನ್ನ ಧನಕರ್ ಮೋಪಿದೇವಿ ಅವರಿಗೆ ಜನ್ಮದಿನದ ಶುಭಾಶಯ ತಿಳಿಸಿದರು. ಈ ವೇಳೆ ರಾಜಸ್ಥಾನ ಮತ್ತು ಮಣಿಪುರ ವಿಷಯಗಳಿಗೆ ಸಂಬಂಧಿಸಿದಂತೆ ಆಡಳಿತ ಪಕ್ಷದ ವಿರುದ್ಧ ವಿರೋಧ ಪಕ್ಷಗಳ ಸಂಸದರು ಘೋಷಣೆಗಳನ್ನು ಕೂಗಿದರು. ಆಗ ಮಧ್ಯಪ್ರವೇಶಿಸಿದ ಧನಕರ್ ಅವರು, ‘ನಾವು ನಮ್ಮ ಸದಸ್ಯರಿಗೆ ಕನಿಷ್ಠ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಲು ಸಾಧ್ಯವಾಗದಿದ್ದರೆ ಅಂತಹ ವಾತಾವರಣ ಸದನದ ಆರೋಗ್ಯಕ್ಕೆ ತಕ್ಕುದಾದುದಲ್ಲ’ ಎಂದರು. 

ಆಗ ಪರಸ್ಪರ ಆರೋಪ, ಪ್ರತ್ಯಾರೋಪ ಮತ್ತು ಘೋಷಣೆಗಳನ್ನು ನಿಲ್ಲಿಸಿದ ಆಡಳಿತ ಮತ್ತು ವಿಪಕ್ಷಗಳು, ರಾಜ್ಯಭೆಯಲ್ಲಿನ ಮೂವರು ಸಂಸದರಿಗೆ ಜನ್ಮದಿನದ ಶುಭಾಶಯಗಳನ್ನು ಕೋರಿ, ಬಿಸಿಯಾಗಿದ್ದ ವಾತಾವರಣವನ್ನು ಕೆಲಕ್ಷಣಗಳ ಮಟ್ಟಿಗೆ ತಣ್ಣಗಾಗಿಸಿದವು. 

ಆದರೆ, ಇದಾದ ಕೆಲವೇ ಕ್ಷಣಗಳಲ್ಲಿ ಪ್ರತಿಪಕ್ಷಗಳು ಪುನಃ ಮಣಿಪುರದ ಹಿಂಸಾಚಾರದ ಕುರಿತು ಚರ್ಚಿಸಲು ಒತ್ತಾಯಿಸಿದರೆ, ಆಡಳಿತ ಪಕ್ಷವು ರಾಜಸ್ಥಾನದಲ್ಲಿನ ಆಡಳಿತ ಮತ್ತು ಸುವ್ಯವಸ್ಥೆಯ ಕುರಿತು ಪ್ರಸ್ತಾಪಿಸಿತು. ಎರಡೂ ಬದಿಯ ಗದ್ದಲವನ್ನು ಗಮನಿಸಿದ ಸಭಾಪತಿ ಅವರು, 30 ನಿಮಿಷಗಳ ಕಾಲ ವಿರಾಮ ನೀಡಿ, ಸದನವನ್ನು ಮಧ್ಯಾಹ್ನ 12ಗಂಟೆಗೆ ಮುಂದೂಡಿದರು. ಸದನವು ಮತ್ತೆ ಆರಂಭವಾದಾಗ ಹಿಂದಿನ ಗದ್ದಲದ ದೃಶ್ಯಗಳೇ ಪುನರಾವರ್ತನೆಯಾದವು. ಬಳಿಕ, ಸಭಾಪತಿ ಧನಕರ್ ಕಲಾಪವನ್ನು ಆಗಸ್ಟ್ 7ರ ಬೆಳಿಗ್ಗೆ 11ಗಂಟೆಗೆ ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT