ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಧಿಕಾರಕ್ಕೆ ಬಂದರೆ ಜಾತಿ ಗಣತಿ, ನ್ಯಾಯ್‌ ಯೋಜನೆ ಜಾರಿ: ಕಾಂಗ್ರೆಸ್‌

Published 28 ಡಿಸೆಂಬರ್ 2023, 16:47 IST
Last Updated 28 ಡಿಸೆಂಬರ್ 2023, 16:47 IST
ಅಕ್ಷರ ಗಾತ್ರ

ನಾಗ್ಪುರ: 2024 ಲೋಕಸಭೆ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ, ಜಾತಿ ಗಣತಿ ನಡೆಸುವುದಾಗಿ ಮತ್ತು ನ್ಯಾಯ್‌ ಯೋಜನೆ ಜಾರಿಗೊಳಿಸುವುದಾಗಿ ಕಾಂಗ್ರೆಸ್‌ ಇಲ್ಲಿ ಗುರುವಾರ ಭರವಸೆ ನೀಡಿದೆ.

ಮುಂಬರುವ ಲೋಕಸಭೆ ಚುನಾವಣೆಗೆ ಪಕ್ಷದ ಪ್ರಚಾರ ಆರಂಭಕ್ಕಾಗಿ ಹಮ್ಮಿಕೊಂಡಿದ್ದ ‘ನಾವು ಸಿದ್ದರಾಗಿದ್ದೇವೆ’ (ಹೈ ತಯಾರ್‌ ಹಮ್‌) ಕಾರ್ಯಕ್ರಮ ಮತ್ತು ಕಾಂಗ್ರೆಸ್‌ನ 139ನೇ ಸಂಸ್ಥಾಪನಾ ದಿನದ ಅಂಗವಾಗಿ ಏರ್ಪಡಿಸಿದ್ದ ಬೃಹತ್‌ ರ್‍ಯಾಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ನಾಯಕ ರಾಹುಲ್‌ ಗಾಂಧಿ ಮಾತನಾಡಿದರು. 

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ  ರಾಹುಲ್‌ ಗಾಂಧಿ ಅವರು, ಆರ್‌ಎಸ್‌ಎಸ್‌– ಬಿಜೆಪಿ ಭಾರತವನ್ನು ರಾಜ– ಮಹಾರಾಜರ ಕಾಲದ ಹಿಂದಿನ ದಿನಗಳಿಗೆ ಕೊಂಡೊಯ್ಯುತ್ತಿವೆ ಎಂದು  ಟೀಕಿಸಿದರು.

‘ಸ್ವಾತಂತ್ರ್ಯಕ್ಕಾಗಿ ಹೋರಾಟವು ಕೇವಲ ಬ್ರಿಟಿಷರ ವಿರುದ್ಧ ನಡೆದ ಹೋರಾಟವಾಗಿರಲಿಲ್ಲ. ರಾಜ ಮತ್ತು ಮಹಾರಾಜರ ವಿರುದ್ಧವೂ ಆಗಿತ್ತು. ಇವರೂ ಬ್ರಿಟಿಷರೊಂದಿಗೆ ಪಾಲುದಾರರಾಗಿದ್ದರು. ದೇಶದ ಜನರಿಗಾಗಿ  ಇಂತಹ ಪಾಲುದಾರರ ವಿರುದ್ಧ ಕಾಂಗ್ರೆಸ್‌ ಹೋರಾಡಿತು. ಆರ್‌ಎಸ್‌ಎಸ್‌ ತತ್ವವು ದೇಶವನ್ನು ಸ್ವಾತಂತ್ರ್ಯಪೂರ್ವದ ಯುಗಕ್ಕೆ ಕೊಂಡೊಯ್ಯುತ್ತಿದೆ ಎಂದು ಆರೋಪಿಸಿದರು.

ಕಾಂಗ್ರೆಸ್‌ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಜಾತಿಗಣತಿಯನ್ನು ಕೈಗೆತ್ತಿಕೊಳ್ಳುತ್ತದೆ ಎಂದೂ ಹೇಳಿದರು.

‘ನಾಗರಿಕರಿಗೆ ಘನತೆ ಮತ್ತು ಹಕ್ಕುಗಳನ್ನು ನೀಡಿದ್ದು ಕಾಂಗ್ರೆಸ್‌. ಪ್ರತಿಯೊಬ್ಬರಿಗೂ ಮತ ಚಲಾಯಿಸುವ ಹಕ್ಕನ್ನು ಕಾಂಗ್ರೆಸ್‌ ನೀಡಿತು. ದಲಿತರು, ಬುಡಕಟ್ಟು ಜನರು ಅಥವಾ ಸಾಮಾನ್ಯ ವರ್ಗ ಅಥವಾ ವಿವಿಧ ರಾಜ್ಯಗಳ ಜನರು ಎಂಬ ತಾರತಮ್ಯವನ್ನು ಪಕ್ಷ ಮಾಡಲಿಲ್ಲ’ ಎಂದರು.

‘ಬಿಜೆಪಿಯಲ್ಲಿ ಆದೇಶಗಳು ವರಿಷ್ಠರಿಂದ ಬರುತ್ತವೆ ಆದರೆ ಕಾಂಗ್ರೆಸ್‌ನಲ್ಲಿ ಯಾವುದೇ ಕಾರ್ಯಕರ್ತ ಪ್ರಶ್ನೆ ಕೇಳಬಹುದು, ನಾಯಕರ ಅಭಿಪ್ರಾಯವನ್ನು ಒಪ್ಪದೆ ಇರಬಹುದು ಮತ್ತು ಅವರ ಅನಿಸಿಕೆಯನ್ನು ಪ್ರಶ್ನಿಸಬಹುದು’ ಎಂದರು.

ತಮ್ಮ ಹೇಳಿಕೆಗೆ ಬೆಂಬಲವಾಗಿ ಅವರು, ‘ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದ ಬಿಜೆಪಿ ಸಂಸದರೊಬ್ಬರು ಈಚೆಗೆ ನನ್ನನ್ನು  ಭೇಟಿಯಾಗಿದ್ದರು. ಬಿಜೆಪಿಯಲ್ಲಿ ಗುಲಾಮಗಿರಿ ನಡೆಯುತ್ತದೆ ಎಂದರು. ಉನ್ನತ ನಾಯಕರಿಂದ ಬಂದ ಆದೇಶವನ್ನು ಎಲ್ಲರೂ ಅನುಸರಿಸಬೇಕು. ಅವರಿಗೆ ಇಷ್ಟವಾಗಲಿ ಅಥವಾ ಬಿಡಲಿ. ಅಲ್ಲಿ ಆಯ್ಕೆಗಳಿಲ್ಲ. ಪಕ್ಷದ ಕಾರ್ಯಕರ್ತರನ್ನು ಯಾರೂ ಕೇಳುವುದಿಲ್ಲವೆಂದು ಅಲವತ್ತುಕೊಂಡರು’ ಎಂದು ವಿವರಿಸಿದರು.

ಸ್ವಲ್ಪ ಕಾಲದವರೆಗೆ ಬಿಜೆಪಿ ಸಂಸದರಾಗಿದ್ದ ಮಹಾರಾಷ್ಟ್ರದ ಕಾಂಗ್ರೆಸ್‌ ಅಧ್ಯಕ್ಷ ನಾನಾ ಪಟೋಲೆ ಅವರ ಬಗ್ಗೆಯೂ ರಾಹುಲ್‌ ಪ್ರಸ್ತಾಪಿಸಿದರು. ‘ರೈತರಿಗೆ ನೀಡುತ್ತಿದ್ದ ಜಿಎಸ್‌ಟಿ ಹಂಚಿಕೆಗೆ ಸಂಬಂಧಿಸಿದಂತೆ ಅವರು ಮೋದಿ ಅವರನ್ನು ಪ್ರಶ್ನಿಸಿದರು. ಇದು ಅವರಿಗೆ ಇಷ್ಟವಾಗಲಿಲ್ಲ. ಪಟೋಲೆ ಅವರನ್ನು ಬಿಜೆಪಿಯಿಂದ ಹೊರಹಾಕಿದರು’ ಎಂದು ಹೇಳಿದರು.

ಜಾರಿ ನಿರ್ದೇಶನಾಲಯ ಮತ್ತು ಸಿಬಿಐನಂತಹ ಕೇಂದ್ರೀಯ ತನಿಖಾ ಸಂಸ್ಥೆಗಳು ಸರ್ಕಾರದಿಂದ ಒತ್ತಡಕ್ಕೆ ಒಳಗಾಗಿವೆ ಎಂದರು. 

ಮಹಿಳಾ ಸಬಲೀಕರಣ

‘ಇಂಡಿಯಾ’ ಮೈತ್ರಿಕೂಟ ಒಗ್ಗಟ್ಟಿನಿಂದ ಇದ್ದರೆ ಬಿಜೆಪಿಯನ್ನು ಎಲ್ಲೂ ಕಾಣಲು ಸಾಧ್ಯವಿಲ್ಲ ಎಂದು  ಮಲ್ಲಿಕಾರ್ಜುನ  ಖರ್ಗೆ  ಹೇಳಿದರು.

ರ್‍ಯಾಲಿಯಲ್ಲಿ ಮಾತನಾಡಿದ ಅವರು ‘ಲೋಕಸಭೆ ಚುನಾವಣೆಯಲ್ಲಿ ಜನರು ಇಂಡಿಯಾ ಮೈತ್ರಿಕೂಟಕ್ಕೆ ಬಲ ನೀಡಿದರೆ, ನಾವು ‘ನ್ಯಾಯ್‌’ ಯೋಜನೆಯನ್ನು ಜಾರಿಗೊಳಿಸುತ್ತೇವೆ. ದೇಶದ ಮಹಿಳೆಯವರನ್ನು ಸಬಲಗೊಳಿಸುತ್ತೇವೆ. ಇದರಿಂದ ಅವರು ಇಡೀ ಕುಟುಂಬವನ್ನು ಸಶಕ್ತಗೊಳಿಸಬಹುದು’ ಎಂದು ಹೇಳಿದರು.

 ‘ಕಾಂಗ್ರೆಸ್‌ ಪಕ್ಷವು ಬ್ರಿಟಿಷರಿಗೇ ಹೆದರಿರಲಿಲ್ಲ. ಇನ್ನು ಮೋದಿ, ಬಿಜೆಪಿ ಮತ್ತು ಸಂಘಪರಿವಾರದಿಂದ ಹೆದರಿಕೆ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದು ಖರ್ಗೆ ಹೇಳಿದರು.

‘ನಾಗಪುರದಲ್ಲಿ ಎರಡು ಸಿದ್ಧಾಂತಗಳಿವೆ. ಒಂದು ಪ್ರಗತಿಪರವಾಗಿದ್ದು ಬಾಬಾಸಾಹೇಬ್ ಅಂಬೇಡ್ಕರ್‌ ಅವರಿಗೆ ಸೇರಿದ್ದಾಗಿದ್ದರೆ ಮತ್ತೊಂದು ದೇಶವನ್ನು ನಾಶಮಾಡಿದ ಆರ್‌ಎಸ್‌ಎಸ್‌ ಸಂಘಟನೆಯದ್ದು’ ಎಂದರು.

ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಅಪಾಯವಿದೆ. ಮೋದಿ ಅವರು ಸುಳ್ಳುಗಳನ್ನು ಹೇಳುತ್ತಾರೆ, ಸುಳ್ಳು ಭರವಸೆಗಳನ್ನು ನೀಡುತ್ತಾರೆ ಎಂದು ಆರೋಪಿಸಿದರು. ಅಲ್ಲದೆ ಪ್ರತಿ ಬ್ಯಾಂಕ್‌ ಖಾತೆಗೆ ₹ 15 ಲಕ್ಷ ಹಣ ನೀಡುವ ಭರವಸೆ ಏನಾಯಿತು ಎಂದು ಕೇಳಿದರು.

ಕಳೆದ 10 ವರ್ಷಗಳಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ದೇಶದ ನೆಮ್ಮದಿಗೆಡಿಸಿವೆ. ಈ ಸಂಘ– ಸರ್ಕಾರವನ್ನು ತಡೆಯದಿದ್ದರೆ ದೇಶ ನಾಶವಾಗುತ್ತದೆ
ಮಲ್ಲಿಕಾರ್ಜುನ ಖರ್ಗೆ,ಎಐಸಿಸಿ ಅಧ್ಯಕ್ಷ

ದಕ್ಷಿಣ ರಾಜ್ಯಗಳ ನಾಯಕರು ಹೇಳಿದ್ದೇನು?

  • ಬಿಜೆಪಿಗೆ ದಕ್ಷಿಣ ಭಾರತದ ಬಾಗಿಲುಗಳನ್ನು ಕಾಂಗ್ರೆಸ್‌ ಮುಚ್ಚಿದೆ ಎಂದು ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು. ‘ನಾವು ಶ್ರಮ ವಹಿಸಿ ಕೆಲಸ ಮಾಡಿದ್ದು ದಕ್ಷಿಣ ಭಾರತದಲ್ಲಿ ಬಿಜೆಪಿ ಬಾಗಿಲುಗಳು ಮುಚ್ಚುವಂತೆ ನೋಡಿಕೊಂಡಿದ್ದೇವೆ’ ಎಂದರು.

  • ದಬ್ಬಾಳಿಕೆ ನಡೆಸಿದ ಬ್ರಿಟಿಷರನ್ನು ಹಿಂದಕ್ಕೆ ಕಳುಹಿಸಿದಂತೆ, ಸರ್ವಾಧಿಕಾರಿ ಧೋರಣೆಯ ಬಿಜೆಪಿಯನ್ನು ಮನೆಗೆ ಕಳುಹಿಸುತ್ತೇವೆ ಎಂದು ಮಹಾರಾಷ್ಟ್ರ ಕಾಂಗ್ರೆಸ್‌ ಅಧ್ಯಕ್ಷ ನಾನಾ ಪಟೋಲೆ ಹೇಳಿದರು. ಐತಿಹಾಸಿಕ ಹಿನ್ನೆಲೆಯ ನಾಗ್ಪುರದಲ್ಲಿ ಸಂಸ್ಥಾಪನಾ ದಿನಾಚರಣೆ ನಡೆಯುತ್ತಿರುವುದು ಹೆಮ್ಮೆಯ ವಿಷಯ. ತುರ್ತುಪರಿಸ್ಥಿತಿ ಬಳಿಕ 1978ರಲ್ಲಿ ದಿ. ಇಂದಿರಾಗಾಂಧಿ ಅವರು ನಾಗ್ಪುರದಲ್ಲಿ ಮೊದಲ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ್ದರು. 1980ರ ಚುನಾವಣೆಯಲ್ಲಿ ಕಾಂಗ್ರೆಸ್‌ ವಿದರ್ಭದಿಂದ ಲೋಕಸಭೆಯ ಎಲ್ಲಾ 11 ಸ್ಥಾನಗಳಲ್ಲಿ ಗೆದ್ದಿತ್ತು ಎಂದರು.

  • ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು, ‘ಬಿಜೆಪಿ ಹೇಳುವ ಡಬಲ್‌ ಎಂಜಿನ್‌ ಸರ್ಕಾರ ಎಂದರೆ ಅದಾನಿ– ಅಂಬಾನಿ ಅಲ್ಲದೆ ಬೇರೇನಲ್ಲ ಎಂದರು. ಮೋದಿ ಅವರ ಹೆಸರಿನ ಔಷಧದ ಅವಧಿ ಮುಕ್ತಾಯಗೊಂಡಿದೆ. ಕಾಂಗ್ರೆಸ್‌ ಪುಟಿದೆದ್ದು ಅಧಿಕಾರಕ್ಕೆ ಬರಲಿದೆ ಎಂದರು.

‘ಹಮ್‌ ತಯಾರ್‌ ಹೈ’

  • ‘ನಾವು ಸಿದ್ಧರಾಗಿದ್ದೇವೆ (ಹಮ್‌ ತಯಾರ್‌ ಹೈ) ಎಂಬ ಘೋಷಣೆಯೊಂದಿಗೆ ಇಲ್ಲಿ 2024ರ ಲೋಕಸಭೆ ಚುನಾವಣೆ ಪ್ರಚಾರ ಆರಂಭಿಸಿದ ಕಾಂಗ್ರೆಸ್‌

  • ನಾಗ್ಪುರವು ಭೌಗೋಳಿಕವಾಗಿ ದೇಶದ ಮಧ್ಯಭಾಗದಲ್ಲಿರುವುದನ್ನು ಪರಿಗಣಿಸಿ ಪಕ್ಷದ 139ನೇ ಸಂಸ್ಥಾಪನಾ ದಿನ ಇಲ್ಲಿ ಆಚರಿಸಲಾಯಿತು

  • ಪ್ರಧಾನಿ ಮೋದಿ ಬಿಜೆಪಿ, ಆರ್‌ಎಸ್‌ಎಸ್‌ ವಿರುದ್ಧ ಟೀಕೆಗಳ ಸುರಿಮಳೆಗರೆದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾಯಕ ರಾಹುಲ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT