ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯ ದಶಮಿ ಕಾರ್ಯಕ್ರಮ: ಮಣಿಪುರ ಹಿಂಸೆಗೆ ಬಾಹ್ಯಶಕ್ತಿ ಕಾರಣ- ಮೋಹನ್ ಭಾಗವತ್

ಮಾಧ್ಯಮ, ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಭಾವ ಬೀರುತ್ತಿರುವ ಸಾಂಸ್ಕೃತಿಕ ಮೂಲಭೂತವಾದಿಗಳು: ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌
Published 24 ಅಕ್ಟೋಬರ್ 2023, 14:39 IST
Last Updated 24 ಅಕ್ಟೋಬರ್ 2023, 14:39 IST
ಅಕ್ಷರ ಗಾತ್ರ

ಮುಂಬೈ: ‘ಈಶಾನ್ಯ ರಾಜ್ಯ ಮಣಿಪುರದಲ್ಲಿ ನಡೆದ ಹಿಂಸಾಚಾರ ಕೃತ್ಯಗಳು ಯೋಜಿತವಾಗಿದ್ದವು. ಆ ರಾಜ್ಯದಲ್ಲಿನ ಈಗಿನ ಪರಿಸ್ಥಿತಿಗೆ ‘ಬಾಹ್ಯ ಶಕ್ತಿಗಳು’ ಕಾರಣ’ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಮಂಗಳವಾರ ಹೇಳಿದರು.

‘ಮಣಿಪುರದಲ್ಲಿ ಮೈತೇಯಿ ಮತ್ತು ಕುಕಿ ಸಮುದಾಯದವರು ಬಹಳ ಕಾಲದಿಂದ ಒಟ್ಟಿಗೆ ಬದುಕುತ್ತಿದ್ದಾರೆ. ಹೀಗಿರುವಾಗ ಗಡಿ ರಾಜ್ಯದಲ್ಲಿನ ಆಂತರಿಕ ಘರ್ಷಣೆ ಮತ್ತು ಪ್ರತ್ಯೇಕತಾ ಪ್ರವೃತ್ತಿಯ ಲಾಭ ಯಾರಿಗಾಗುತ್ತದೆ? ಹಿಂಸಾಚಾರ ಕೃತ್ಯಗಳಲ್ಲಿ ಹೊರಗಿನವರು ಭಾಗಿ ಆಗಿರಬಹುದೇ’ ಎಂದು ಅವರು ಪ್ರಶ್ನಿಸಿದರು.

ನಾಗ್ಪುರದಲ್ಲಿ ಮಂಗಳವಾರ ನಡೆದ ವಿಜಯ ದಶಮಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ದೇಶದಲ್ಲಿ ಶಿಕ್ಷಣ ಮತ್ತು ಸಂಸ್ಕೃತಿಯನ್ನು ಹಾಳುಗೆಡವಲು ಸಾಂಸ್ಕೃತಿಕ ಮೂಲಭೂತವಾದಿಗಳು ಮತ್ತು ಜಾಗೃತ ಶಕ್ತಿಗಳು ಮಾಧ್ಯಮ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮ ಪ್ರಭಾವವನ್ನು ಬಳಸುತ್ತಿವೆ’ ಎಂದು ಆರೋಪಿಸಿದರು.

‘ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೂ ಮೂರು ದಿನ ಮಣಿಪುರದಲ್ಲಿದ್ದರು. ವಾಸ್ತವವಾಗಿ ಸಂಘರ್ಷಕ್ಕೆ ಪ್ರಚೋದನೆ ನೀಡಿದವರು ಯಾರು? ಆ ರಾಜ್ಯದಲ್ಲಿ ಹಿಂಸಾಚಾರ ಆಗುತ್ತಿಲ್ಲ. ಹಿಂಸಾಚಾರವನ್ನು ಮಾಡಿಸಲಾಗುತ್ತದೆ. ಮಣಿಪುರದ ಅನಿಶ್ಚಿತತೆಯ ಲಾಭ ಪಡೆಯುವ ಆಸಕ್ತಿ ವಿದೇಶಿ ಶಕ್ತಿಗಳಿಗೂ ಇರಬಹುದು’ ಎಂದು ಶಂಕೆ ವ್ಯಕ್ತಪಡಿಸಿದರು.

‘ಏಷ್ಯಾ ಆಗ್ನೇಯ ಭಾಗದ ಭೌಗೋಳಿಕ ರಾಜಕಾರಣದ ಪಾತ್ರವು ಮಣಿಪುರದ ಹಿಂಸಾಚಾರ ಕೃತ್ಯಗಳ ಹಿಂದಿರಬಹುದು. ಅಲ್ಲಿ ಶಾಂತಿ ಸ್ಥಾಪಿಸುವ ಯತ್ನಗಳು ನಡೆಯುತ್ತಿದ್ದರೆ, ಕೆಲವೆಡೆ ಅಹಿತಕರ ಘಟನೆಗಳು ನಡೆಯುತ್ತಿದ್ದವು. ಇಂತಹ ಬೆಳವಣಿಗೆಗಳೇ ಸಮುದಾಯಗಳ ನಡುವಿನ ಅಂತರವನ್ನು ಹೆಚ್ಚಿಸಿತು’ ಎಂದು ಅಭಿಪ್ರಾಯಪಟ್ಟರು.

‘ಮಣಿಪುರದಲ್ಲಿ ಶಾಂತಿ ಸ್ಥಾಪಿಸಲು ಯತ್ನಿಸಿದ ಸಂಘದ ಕಾರ್ಯಕರ್ತರ ಬಗ್ಗೆ ನನಗೆ ಹೆಮ್ಮೆಯಿದೆ‘ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥರು ಇದೇ ಸಂದರ್ಭದಲ್ಲಿ ಶ್ಲಾಘಿಸಿದರು.

‘ಭಾರತ, ಹಿಂದೂ ಸಮಾಜದ ಗುರುತು ಉಳಿಸಿಕೊಳ್ಳುವ ಅಪೇಕ್ಷೆ ಸಹಜ, ಅದರಲ್ಲಿ ಆಶ್ಚರ್ಯವೇನೂ ಇಲ್ಲ. ಜಗತ್ತು ಕೂಡಾ ಈಗಿನ ಸವಾಲುಗಳನ್ನು ಎದುರಿಸಲು ಮತ್ತು ಸಮಕಾಲೀನ ಅಗತ್ಯಗಳಿಗೆ ಸ್ಪಂದಿಸಲು ಭಾರತ ತನ್ನದೇ ಮೌಲ್ಯ ಆಧರಿಸಿದ ಹೊಸ ಚಿಂತನೆಯೊಂದಿಗೆ ಉದಯಿಸಬೇಕು’ ಎಂದು ಬಯಸುತ್ತಿದೆ ಎಂದು ವಿಶ್ಲೇಷಿಸಿದರು. 

ಜಗತ್ತು ಈಗ ಧರ್ಮಾಂಧತೆ, ಅಹಂಕಾರ, ಧಾರ್ಮಿಕ ಅಂದಾಭಿಮಾನದ ಪಿಡುಗುಗಳನ್ನು ಎದುರಿಸುತ್ತಿದೆ. ಮೂಲಭೂತವಾದಿತನ ಮತ್ತು ಸ್ವಹಿತಾಸಕ್ತಿಯ ಪರಿಣಾಮ ಮೂಡಿರುವ ಉಕ್ರೇನ್‌ ಅಥವಾ ಗಾಜಾಪಟ್ಟಿಯಲ್ಲಿ ಸಂಘರ್ಷಗಳಿಗೆ ಪರಿಹಾರವು ಮರೀಚಿಕೆಯಾಗಿಯೇ ಇರುತ್ತದೆ ಎಂದು ಹೇಳಿದರು.

‘ಏಕತೆ ಅಭಿವೃದ್ಧಿ ಅಸ್ಮಿತೆಗಾಗಿ ಮತ ಚಲಾಯಿಸಲು ಕರೆ’

2024ರ ಲೋಕಸಭೆ ಚುನಾವಣೆಯಲ್ಲಿ ಮತಗಳಿಗಾಗಿ ಜನರ ಭಾವನೆಗಳನ್ನು ಪ್ರಚೋದಿಸುವ ಯತ್ನ ನಡೆಯಬಹುದು. ಆದರೆ ಏಕತೆ ಭಾವೈಕ್ಯತೆ ದೇಶದ ಅಸ್ಮಿತೆ ಅಭಿವೃದ್ಧಿ ಗಮನಿಸಿಯೇ ಜನತೆ ಹಕ್ಕು ಚಲಾಯಿಸಬೇಕು ಎಂದು ಭಾಗವತ್‌ ಕೋರಿದರು. ದೇಶದ ಏಕತೆ ಬಯಸುವವರು ಆ ಕುರಿತ ಚಿಂತನೆಗೆ ಮೊದಲು ಎಲ್ಲ ಸಮಸ್ಯೆಗಳು ಅಂತ್ಯವಾಗಬೇಕು ಎಂದು ಬಯಸುವುದಿಲ್ಲ. ಕೆಲವು ಬೆಳವಣಿಗೆಗಳಿಂದ ವಿಚಲಿತರಾಗದೇ ಏಕತೆಗಾಗಿ ಶಾಂತ ಮತ್ತು ದೃಢಮನಸ್ಸಿನಿಂದ ಕಾರ್ಯಪ್ರವೃತ್ತರಾಗಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.   ‘ಭಿನ್ನ ಭಾಷೆ ವಲಯ ಧರ್ಮ ಜಾತಿ ಉಪಜಾತಿಗಳ ನಡುವೆಯೂ –ತಾಯ್ನಾಡಿನ ನಿಷ್ಠೆ ಹಿರಿಯರ ಬಗ್ಗೆ ಹೆಮ್ಮೆ ಹಾಗೂ ಏಕರೂಪದ ಸಂಸ್ಕೃತಿ– ಎಂಬ ಮೂರು ಅಂಶಗಳಷ್ಟೇ ನಮ್ಮನ್ನು ಒಂದು ರಾಷ್ಟ್ರವಾಗಿ ಒಗ್ಗೂಡಿಸಬಲ್ಲದು’ ಎಂದು ಆರ್‌ಎಸ್‌ಎಸ್ ಮುಖ್ಯಸ್ಥರು ಪ್ರತಿಪಾದಿಸಿದರು. ದೇಶದಲ್ಲಿ ಪರಸ್ಪರರ ನಡುವೆ ಅಪನಂಬಿಕೆ ಮತ್ತು ದ್ವೇಷವನ್ನು ಬೆಳೆಸಲು ಹಾಗೂ ಹಿಂಸಾಚಾರ ಕೃತ್ಯಗಳಿಗೆ ಕುಮ್ಮಕ್ಕು ನೀಡಲು ‘ಟೂಲ್‌ಕಿಟ್‌’ಗಳು ಬಳಕೆಯಾಗಬಹುದು ಎಂದು ಅವರು ಉಲ್ಲೇಖಿಸಿದರು.

ಜ. 22ರಂದು ಶ್ರೀರಾಮ ಮೂರ್ತಿ ಪ್ರತಿಷ್ಠಾಪನೆ 

‘ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿಯನ್ನು ಜನವರಿ 22ರಂದು ಪ್ರತಿಷ್ಠಾಪಿಸಲಾಗುವುದು’ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್ ಅವರು ಪ್ರಕಟಿಸಿದರು. ’ಈ ಸಂಭ್ರಮವನ್ನು  ಆಚರಿಸಲು ದೇಶದಾದ್ಯಂತ ದೇವಸ್ಥಾನಗಳಲ್ಲಿ ಕಾರ್ಯಕ್ರಮ ಆಯೋಜಿಸಬೇಕು’ ಎಂದು ಜನತೆಗೆ ಮನವಿ ಮಾಡಿದರು. ’ಕಾರ್ಯಕ್ರಮ ಆಯೋಜಿಸುವುದರಿಂದ ಪ್ರತಿಯೊಬ್ಬರ ಮನ ಹೃದಯದಲ್ಲಿ ಶ್ರೀರಾಮನ ಕುರಿತು ಜಾಗೃತಿ ಮೂಡುತ್ತದೆ. ಸಮಾಜದಲ್ಲಿ ಆತ್ಮೀಯತೆಯ ಜವಾಬ್ದಾರಿಯ ವಾತಾವರಣ ಮೂಡಿಸುತ್ತಿದೆ‘ ಎಂದು ಅವರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT