ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸೇಕ್ರೆಡ್‌ ಗೇಮ್‌’ ವಿರುದ್ಧದ ಅರ್ಜಿ ವಿಚಾರಣೆ ಆರಂಭ

Last Updated 16 ಜುಲೈ 2018, 20:15 IST
ಅಕ್ಷರ ಗಾತ್ರ

ನವದೆಹಲಿ : ಆನ್‌ಲೈನ್‌ ವಿಡಿಯೊ ಪ್ರಸಾರ ಸಂಸ್ಥೆ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುತ್ತಿರುವ ‘ಸೇಕ್ರೆಡ್‌ ಗೇಮ್‌’ ಸರಣಿ ವಿರುದ್ಧ ಕಾಂಗ್ರೆಸ್‌ ಕಾರ್ಯಕರ್ತ ನಿಖಿಲ್‌ ಭಲ್ಲಾ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ದೆಹಲಿ ಹೈಕೋರ್ಟ್‌ ಸೋಮವಾರ ಕೈಗೆತ್ತಿಕೊಂಡಿದೆ.

ಮಾಜಿ ಪ್ರಧಾನಿ ದಿವಂಗತ ರಾಜೀವ್‌ ಗಾಂಧಿ ಅವರ ವ್ಯಕ್ತಿತ್ವಕ್ಕೆ ಅಗೌರವ ತರುವ ಆಕ್ಷೇಪಾರ್ಹ ದೃಶ್ಯಗಳಿಗೆ ಕತ್ತರಿ ಹಾಕುವಂತೆ ಅರ್ಜಿಯಲ್ಲಿ ಕೋರಲಾಗಿದೆ.

ಈ ಅರ್ಜಿಯನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಎಂದು ಪರಿಗಣಿಸಬಹುದೇ ಎಂಬುದರ ಬಗ್ಗೆ ಅಭಿಪ್ರಾಯ ತಿಳಿಸುವಂತೆ ಅರ್ಜಿದಾರರ ಪರ ವಕೀಲರಿಗೆ ಹೈಕೋರ್ಟ್‌ ಸೂಚಿಸಿದೆ.

ಬೋಫೋರ್ಸ್‌ ಹಗರಣ, ಶಾ ಬಾನು ಪ್ರಕರಣ, ಬಾಬರಿ ಮಸೀದಿ ವಿವಾದ ಮತ್ತು ಕೋಮು ಸಂಘರ್ಷಗಳಂತಹ ಐತಿಹಾಸಿಕ ಘಟನೆಗಳನ್ನು ಕಾರ್ಯಕ್ರಮದಲ್ಲಿ ತಪ್ಪಾಗಿ ತೋರಿಸಲಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.

ಈ ಸರಣಿಯ ಎಲ್ಲ 8 ಕಂತುಗಳು ಈಗಾಗಲೇ ಪ್ರಸಾರವಾದ ಕಾರಣ ಅರ್ಜಿಯ ತುರ್ತು ವಿಚಾರಣೆ ಅಗತ್ಯವಿಲ್ಲ ಎಂದು ಹೇಳಿರುವ ದ್ವಿಸದಸ್ಯ ಪೀಠ, ವಿಚಾರಣೆಯನ್ನು ಜುಲೈ 19ಕ್ಕೆ ಮುಂದೂಡಿದೆ.

‘ಸರಿಯೋ ಅಥವಾ ತಪ್ಪೋ ಅಭಿಪ್ರಾಯ ವ್ಯಕ್ತಪಡಿಸಲು ಎಲ್ಲರಿಗೂ ಸ್ವಾತಂತ್ರ್ಯವಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ಮಧ್ಯೆ ಪ್ರವೇಶಿಸುವುದು ಎಷ್ಟು ಸರಿ’ ಎಂದು ಪೀಠ ಪ್ರಶ್ನಿಸಿದೆ.

*
* ವಿಕ್ರಮ್ ಚಂದ್ರ ಕಾದಂಬರಿ ‘ಸೇಕ್ರಿ ಡ್‌ ಗೇಮ್‌’ ಆಧಾರಿತ ಸರಣಿಯನ್ನು ಅನುರಾಗ್‌ ಕಶ್ಯಪ್‌ ಮತ್ತು ವಿಕ್ರಮಾದಿತ್ಯ ಮೊಟ್ವಾನಿ ನಿರ್ದೇಶಿಸಿದ್ದಾರೆ.

* ನಟರಾದ ಸೈಫ್‌ ಅಲಿ ಖಾನ್‌ ಮತ್ತು ನವಾಜುದ್ದೀನ್‌ ಸಿದ್ದಿಕಿ ಪ್ರಮುಖ ಪಾತ್ರದಲ್ಲಿರುವ ಸರಣಿಯನ್ನು ಫ್ಯಾಂಟಮ್‌ ಸಂಸ್ಥೆ ನಿರ್ಮಿಸಿದೆ.

*ನಾಲ್ಕು ಭಾಷೆಯಲ್ಲಿರುವ ಸರಣಿಯ ಎಲ್ಲ ಕಂತು ಜುಲೈ 6ರಂದು 190 ರಾಷ್ಟ್ರಗಳಲ್ಲಿ ಪ್ರಸಾರವಾಗಿವೆ.

* ಕಾರ್ಯಕ್ರಮದ ವಿರುದ್ಧ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಕೂಡ ಅಸಮಾಧಾನ ಹೊರಹಾಕಿದ್ದಾರೆ.

* ನೆಟ್‌ಫ್ಲಿಕ್ಸ್‌ ಸಂಸ್ಥೆ ಮತ್ತು ಕಾರ್ಯಕ್ರಮದ ನಿರ್ಮಾಪಕರ ವಿರುದ್ಧ ಕಾಂಗ್ರೆಸ್‌ ಕಾರ್ಯಕರ್ತರು ಪಶ್ಚಿಮ ಬಂಗಾಳದಲ್ಲಿ ದೂರು ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT