ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುರ್ತು ಮಿದುಳು ಶಸ್ತ್ರಚಿಕಿತ್ಸೆಗೆ ಒಳಗಾದ ಸದ್ಗುರು ಜಗ್ಗಿ ವಾಸುದೇವ್

Published 20 ಮಾರ್ಚ್ 2024, 13:44 IST
Last Updated 20 ಮಾರ್ಚ್ 2024, 13:44 IST
ಅಕ್ಷರ ಗಾತ್ರ

ನವದೆಹಲಿ: ಈಶಾ ಫೌಂಡೇಶನ್ ಸಂಸ್ಥಾಪಕ, ಆಧ್ಯಾತ್ಮಿಕ ನಾಯಕ ಜಗ್ಗಿ ವಾಸುದೇವ್ ಅವರು, ತುರ್ತು ಮಿದುಳು ಶಸ್ತ್ರಚಿಕಿತ್ಸೆಗೆ ಒಳಗಾದರು ಎಂದು ದೆಹಲಿಯ ಖಾಸಗಿ ಆಸ್ಪತ್ರೆಯೊಂದು ಪ್ರಕಟಣೆಯಲ್ಲಿ ತಿಳಿಸಿದೆ.

ಮಿದುಳಿಗೆ ರಕ್ಷಾ ಕವಚದಂತಿರುವ ಸ್ನಾಯುವಿನಲ್ಲಿ ರಕ್ತ ಸಂಗ್ರಹಗೊಂಡಿದ್ದರಿಂದಾಗಿ ಬಳಲುತ್ತಿದ್ದ ಸದ್ಗುರು ಅವರಿಗೆ ಮಾರ್ಚ್ 17ರಂದು ಶಸ್ತ್ರಚಿಕಿತ್ಸೆ ನಡೆಸಲಾಯಿತು. ಸರ್ಜರಿ ಬಳಿಕ ಚೇತರಿಸಿಕೊಂಡಿರುವ ಸದ್ಗುರು ವೆಂಟಿಲೇಟರ್‌ನಿಂದ ಹೊರಬಂದಿದ್ದಾರೆ. ಅವರ ಮಿದುಳು, ದೇಹದ ಪ್ರಮುಖ ಅಂಗಾಂಗಗಳು ಚೇತರಿಸಿಕೊಳ್ಳುತ್ತಿವೆ ಎಂದು ಇಂದ್ರಪ್ರಸ್ಥದ ಅಪೊಲೊ ಆಸ್ಪತ್ರೆ ತಿಳಿಸಿದೆ.

66 ವರ್ಷದ ಸದ್ಗುರು ಮಣ್ಣನ್ನು ರಕ್ಷಿಸಿ, ನದಿಗಳನ್ನು ಉಳಿಸಿ ಮುಂತಾದ ಅಭಿಯಾನ ಕೈಗೊಂಡಿದ್ದರು.

4 ವಾರಗಳಿಂದ ಅವರಿಗೆ ತೀವ್ರ ತಲೆನೋವು ಕಾಣಿಸಿಕೊಂಡಿತ್ತು. ಸಹಿಸಲಸಾಧ್ಯವಾದ ನೋವಿನಲ್ಲೂ ಅವರು ನಿತ್ಯದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಮಾರ್ಚ್ 8ರ ಮಹಾಶಿವರಾತ್ರಿ ಕಾರ್ಯಕ್ರಮವನ್ನೂ ನಡೆಸಿಕೊಟ್ಟಿದ್ದರು ಎಂದು ಪ್ರಕಟಣೆ ತಿಳಿಸಿದೆ.

ತಲೆನೋವು ಮತ್ತಷ್ಟು ತೀವ್ರಗೊಂಡಾಗ ಮಾರ್ಚ್ 15ರಂದು ಹಿರಿಯ ನರರೋಗ ತಜ್ಞ ಡಾ. ವಿನಿತ್ ಸೂರಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದಾರೆ. ಕೂಡಲೇ ವೈದ್ಯರು ಎಂಆರ್‌ಐಗೆ ಸೂಚಿಸಿದ್ದರು. ಮೂರ್ನಾಲ್ಕು ವಾರಗಳಿಂದ ರಕ್ತಸ್ರಾವ ಆಗುತ್ತಿರುವುದು ಎಂಆರ್‌ಐನಲ್ಲಿ ಕಂಡುಬಂದಿದೆ. ಅಲ್ಲದೆ, 24ರಿಂದ 48 ಗಂಟೆ ಹಿಂದೆ ಹೊಸದಾಗಿ ರಕ್ತಸ್ರಾವ ಆಗುತ್ತಿರುವುದು ಕಂಡುಬಂದಿತು ಎಂದು ಪ್ರಕಟಣೆ ತಿಳಿಸಿದೆ.

ಸದ್ಗುರು ಅವರಿಗೆ ಕೂಡಲೇ ಆಸ್ಪತ್ರೆಗೆ ದಾಖಲಾಗಲು ಸೂಚಿಸಲಾಗಿತ್ತು. ಆದರೆ, ಮಾರ್ಚ್ 15 ಮತ್ತು 16ರಂದು ಪ್ರಮುಖ ಸಭೆಗಳು ಇದ್ದ ಕಾರಣ, ನೋವು ನಿವಾರಕ ಮಾತ್ರೆ ಪಡೆದು ಎರಡು ದಿನಗಳ ನಂತರ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಆಸ್ಪತ್ರೆ ತಿಳಿಸಿದೆ.

ಮಾರ್ಚ್ 17ರಂದು ಅವರಿಗೆ ಅರೆಪ್ರಜ್ಞಾವಸ್ಥೆಗೆ ಜಾರುವುದು, ಎಡಗಾಲಿನಲ್ಲಿ ನಿಶ್ಯಕ್ತಿ ಕಾಣಿಸಿಕೊಂಡಿದೆ. ಸಿಟಿ ಸ್ಕ್ಯಾನ್‌ನಲ್ಲಿ ಮಿದುಳಿನ ಊತ ಹೆಚ್ಚಾಗಿರುವುದು ಕಂಡುಬಂದಿತು. ಕೂಡಲೇ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಯಿತು ಎಂದು ಅದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT