ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮೀರ್‌ ವಾಂಖೆಡೆ ಐಷಾರಾಮಿ ಜೀವನ ಬಹಿರಂಗ

ಸಿಬಿಐ ಸಲ್ಲಿಸಿದ್ದ ಎಫ್‌ಐಆರ್‌ನಲ್ಲಿ ಹಲವು ಅಂಶಗಳು ಬೆಳಕಿಗೆ
Published 19 ಮೇ 2023, 15:48 IST
Last Updated 19 ಮೇ 2023, 15:48 IST
ಅಕ್ಷರ ಗಾತ್ರ

ನವದೆಹಲಿ: ಬಾಲಿವುಡ್‌ ನಟ ಶಾರುಕ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ಅವರನ್ನು ಐಷಾರಾಮಿ ಹಡಗಿನಲ್ಲಿ ಡ್ರಗ್ಸ್‌ ಸೇವನೆ ಪ್ರಕರಣದಲ್ಲಿ ಬಂಧಿಸಿ, ಪ್ರಕರಣದ ತನಿಖೆ ನಡೆಸಿದ್ದ ಎನ್‌ಸಿಬಿಯ ಮುಂಬೈ ವಲಯದ ಮಾಜಿ ಮುಖ್ಯಸ್ಥ ಸಮೀರ್‌ ವಾಂಖೆಡೆ ಅವರ ಐಷಾರಾಮಿ ಜೀವನದ ಕುರಿತು ಮಾಹಿತಿ ಬಹಿರಂಗವಾಗಿದೆ.

ಸಮೀರ್ ಅವರ ದುಬಾರಿ ಕೈಗಡಿಯಾರಗಳು, ದುಬಾರಿ ವಿದೇಶಿ ಪ್ರಯಾಣಗಳ ಕುರಿತು ಎನ್‌ಸಿಬಿಯ ವಿಶೇಷ ತನಿಖಾ ತಂಡವು (ಎಸ್‌ಇಟಿ) ಕೇಂದ್ರ ಆಡಳಿತ ಮಂಡಳಿಗೆ (ಸಿಎಟಿ) ಕಳೆದ ವರ್ಷವೇ ವರದಿ ನೀಡಿತ್ತು. ಜೊತೆಗೆ ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿ ಸಮೀರ್ ಅವರು ಐಷಾರಾಮಿ ಹಡಗಿನ ಮೇಲೆ ನಡೆಸಿದ ದಾಳಿಯು ಕಾನೂನುಬದ್ಧವಾಗಿರಲಿಲ್ಲ ಎಂದೂ ತನಿಖಾ ತಂಡ ಹೇಳಿತ್ತು. ವರದಿಯಲ್ಲಿನ ಈ ಅಂಶಗಳನ್ನು ಸಿಬಿಐ ಈಚೆಗೆ ದಾಖಲಿಸಿಕೊಂಡಿದೆ.

ಸಮೀರ್ ವಿರುದ್ಧದ ಪ್ರಕರಣದ ತನಿಖೆಯನ್ನು ಈಗ ನಡೆಸುತ್ತಿರುವ ಸಿಬಿಐ, ಈಚೆಗಷ್ಟೇ ಎಫ್‌ಐಆರ್ ದಾಖಲಿಸಿಕೊಂಡಿತ್ತು. ಅಲ್ಲದೆ, ಸಮೀರ್ ಅವರಿಗೆ ಸೇರಿದ ಮನೆ ಮತ್ತಿತರ ಕಡೆಗಳಲ್ಲಿ ಶೋಧ ಕಾರ್ಯ ನಡೆಸಿತ್ತು. ಆರ್ಯನ್‌ ಖಾನ್‌ ಅವರನ್ನು ಪ್ರಕರಣದಲ್ಲಿ ಸಿಲುಕಿಕೊಳ್ಳದಂತೆ ಮಾಡಲು ಸಮೀರ್‌ ಅವರು ಶಾರುಕ್‌ ಖಾನ್‌ ಅವರಿಂದ ₹ 25 ಕೋಟಿ ಕೇಳಿದ್ದರು ಎನ್ನುವ ಅಂಶ ಕೆಲವು ದಿನಗಳ ಹಿಂದೆ ಸದ್ದು ಮಾಡಿತ್ತು. ಈ ಅಂಶವೂ ಎಫ್‌ಐಆರ್‌ನಲ್ಲಿದೆ.

ಈ ಎಲ್ಲ ಆರೋಪಗಳನ್ನು ತಳ್ಳಿ ಹಾಕಿರುವ ಸಮೀರ್‌, ‘ನನ್ನ ಮೇಲೆ ದಾಖಲಾಗಿರುವ ಎಫ್‌ಐಆರ್‌ ಅನ್ನು ರದ್ದು ಮಾಡಬೇಕು’ ಎಂದು ಕೋರಿ ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌, ಸಮೀರ್‌ ಅವರ ವಿರುದ್ಧ ಬಂಧನದಂತಹ ತೀವ್ರ ಕ್ರಮಗಳನ್ನು ಇದೇ 22ರವರೆಗೆ ತೆಗೆದುಕೊಳ್ಳಬಾರದು ಎಂದು  ಸಿಬಿಐಗೆ ಶುಕ್ರವಾರ ಸೂಚನೆ ನೀಡಿದೆ.

‘ನಾನು ಹಿಂದುಳಿದ ಜಾತಿಗೆ ಸೇರಿದ್ದೇನೆ ಎಂಬ ಕಾರಣಕ್ಕಾಗಿಯೇ ಎಸ್‌ಇಟಿಯ ಮುಖ್ಯಸ್ಥರಾಗಿದ್ದ ಎನ್‌ಸಿಬಿಯ ಉಪ ಮಹಾನಿರ್ದೇಶಕ ಜ್ಞಾನೇಶ್ವರ್‌ ಸಿಂಗ್‌ ಅವರನ್ನು ನನ್ನನ್ನು ಅವಮಾನಿಸಿದ್ದು, ಕಿರುಕುಳ ನೀಡಿದ್ದಾರೆ’ ಎಂದು ಸಮೀರ್‌ ಹೇಳಿದ್ದಾರೆ. ‘ಈ ಸಂಬಂಧ ಕೇಂದ್ರ ಆಡಳಿತ ಮಂಡಳಿ (ಸಿಎಟಿ), ರಾಷ್ಟ್ರೀಯ ಹಿಂದುಳಿದ ಜಾತಿ ಸಮಿತಿ ಹಾಗೂ ಮುಂಬೈ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದೇನೆ’ ಎಂದು ಸಮೀರ್‌ ಅವರು ಗುರುವಾರ ತಿಳಿಸಿದ್ದಾರೆ.

ಎಫ್‌ಐಆರ್‌ನಲ್ಲಿ ಏನಿದೆ?

ಐಷಾರಾಮಿ ಜೀವನ

* 2017–21ರ ವರೆಗೆ ಸಮೀರ್‌ ಅವರು ಕುಟುಂಬದವರೊಂದಿಗೆ ಐರ್ಲೆಂಡ್‌, ಪೋರ್ಚುಗಲ್‌, ದಕ್ಷಿಣ ಆಫ್ರಿಕಾ ಹಾಗೂ ಮಾಲ್ಡೀವ್ಸ್‌ ಸೇರಿದಂತೆ ಹಲವು ದೇಶಗಳಿಗೆ ಪ್ರಯಾಣ ಮಾಡಿದ್ದಾರೆ. ಈ ಎಲ್ಲ ಕಡೆಗಳಲ್ಲೂ ಸುಮಾರು 55 ದಿನಗಳವರೆಗೆ ಪ್ರವಾಸ ಮಾಡಿದ್ದರು. ಆದರೆ ಸಮೀರ್‌ ಅವರು ತಮ್ಮ ವಿದೇಶಿ ಪ್ರವಾಸದ ಖರ್ಚಿನ ಕುರಿತು ಮಾಹಿತಿ ನೀಡುವಾಗ ಪ್ರಯಾಣದ ಮೊತ್ತವನ್ನು 1ರಿಂದ 2.5 ಲಕ್ಷವಾಗಿದೆ ಎಂಬ ಸುಳ್ಳು ದಾಖಲೆ ನೀಡಿದ್ದರು

* ರಾಜನ್‌ ಎಂಬುವವರಿಂದ ₹22.05 ಲಕ್ಷ ಮೊತ್ತದ ರೋಲೆಕ್ಸ್‌ ಕೈಗಡಿಯಾರವನ್ನು ಸಮೀರ್‌ ಅವರು ₹17.40 ಲಕ್ಷಕ್ಕೆ ಖರೀದಿ ಮಾಡಿದ್ದಾರೆ. ಅವರು ಖರೀದಿಸಿದ್ದ ರೋಲೆಕ್ಸ್‌ ವಾಚ್‌ಗೆ ಒಂದಕ್ಕಿಂತ ಹೆಚ್ಚು ಬಿಲ್‌ಗಳಿದ್ದವು, ಕೆಲವು ವಿಚಾರಗಳ ಕುರಿತು ಅವರು ಸರ್ಕಾರಕ್ಕೆ ಮಾಹಿತಿ ನೀಡಿರಲಿಲ್ಲ ಅಥವಾ ತಪ್ಪು ಮಾಹಿತಿ ನೀಡಿದ್ದರು

ತನಿಖೆಯಲ್ಲಿ ಲೋಪ

* ಆರ್ಯನ್‌ ಖಾನ್‌ ಹಾಗೂ ಆತನ ಸ್ನೇಹಿತನನ್ನು ವಶಕ್ಕೆ ಪಡೆಯುವಲ್ಲಿ ಸಮೀರ್‌ ಹಲವು ತಪ್ಪುಗಳನ್ನು ಎಸಗಿದ್ದಾರೆ. ಆರ್ಯನ್‌ ಖಾನ್‌ ಅವರನ್ನು ಎನ್‌ಸಿಬಿ ಕಚೇರಿಗೆ ಕರೆತರುವಾಗ ಸರ್ಕಾರಿ ವಾಹನ ಬಳಸದೆ ಕೆ.ಪಿ. ಗೋಸಾವಿ ಎಂಬುವವರಿಗೆ ಸೇರಿದ ವಾಹನದಲ್ಲಿ ಕರೆತರಲಾಗಿದೆ. ಇವರು ಈ ಪ್ರಕರಣದ ಸ್ವತಂತ್ರ ಸಾಕ್ಷಿಯಾಗಿದ್ದಾರೆ.

.* ಎನ್‌ಸಿಬಿ ಕಚೇರಿಯ ಸಿ.ಸಿ.ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ, ಆರ್ಯನ್‌ ಖಾನ್‌ ಅವರನ್ನು ಬಂಧಿಸಿ ತಂದ ದೃಶ್ಯಗಳನ್ನು ಎಸ್‌ಇಟಿ ತನಿಖಾ ತಂಡವು ಪಡೆದುಕೊಂಡಿತ್ತು. ಆದರೆ, ಈ ವಿಡಿಯೊ ಹಾಳಾಗಿತ್ತು. ನಂತರ ಎಸ್‌ಇಟಿ ತಂಡವು ಕಚೇರಿಯ ಡಿವಿಆರ್‌ ಹಾಗೂ ಹಾರ್ಡ್‌ ಡಿಸ್ಕ್‌ ಅನ್ನು ಕೊಡಲು ಹೇಳಿತು. ಆದರೆ, ಈ ವೇಳೆ ಕಚೇರಿಯು ಬೇರೆಯದೇ ದೃಶ್ಯಾವಳಿಗಳು ಇರುವ ಡಿವಿಆರ್‌ ಮತ್ತು ಹಾರ್ಡ್‌ಡಿಸ್ಕ್‌ ನೀಡಿದೆ. ಬಹುಶಃ ಪ್ರಮುಖವಾದಂಥ ಅಂಶಗಳು ಈ ವಿಡಿಯೊದಲ್ಲಿ ಇದ್ದಿರಬಹುದು. ಆದ್ದರಿಂದಲೇ ಡಿವಿಆರ್‌ ಮತ್ತು ಹಾರ್ಡ್‌ಡಿಸ್ಕ್‌ ಬದಲಿಸಲಾಗಿದೆ ಎಂದು ತನಿಖಾ ತಂಡ ವರದಿಯಲ್ಲಿ ಹೇಳಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT