ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರುಣ್ ಕುಟುಂಬಕ್ಕೆ ₹40 ಲಕ್ಷ ಪರಿಹಾರ, ಸರ್ಕಾರಿ ಉದ್ಯೋಗ: ರಾಕೇಶ್ ಟಿಕಾಯತ್‌

Last Updated 25 ಅಕ್ಟೋಬರ್ 2021, 11:54 IST
ಅಕ್ಷರ ಗಾತ್ರ

ಆಗ್ರಾ: ಉತ್ತರ ಪ್ರದೇಶದ ಆಗ್ರಾದಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಹತ್ಯೆಗೀಡಾದ ಅರುಣ್ ನರ್ವಾರ್ ಅವರ ಕುಟುಂಬ ಸದಸ್ಯರನ್ನು ಸೋಮವಾರ ಭೇಟಿ ಮಾಡಿದಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನಾಯಕ ರಾಕೇಶ್ ಟಿಕಾಯತ್, ಅವಲಂಬಿತರಿಗೆ ₹40 ಲಕ್ಷ ಪರಿಹಾರ ಮತ್ತು ಸರ್ಕಾರಿ ಉದ್ಯೋಗ ನೀಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಟಿಕಾಯತ್‌, ‘ರಾಜ್ಯ ಸರ್ಕಾರ ಪರಿಹಾರ ನೀಡುವಾಗ ತಾರತಮ್ಯ ಮಾಡುತ್ತಿದೆ. ಲಖಿಂಪುರ– ಖೇರಿ ಮತ್ತು ಕಾನ್ಪುರದಲ್ಲಿ ₹40 ಲಕ್ಷದಿಂದ ₹45 ಲಕ್ಷ ಪರಿಹಾರ ನೀಡಿದೆ. ಆಗ್ರಾದಲ್ಲಿ ಸರ್ಕಾರವು ₹10 ಲಕ್ಷ ಪರಿಹಾರ ನೀಡಿದೆ’ ಎಂದು ಆರೋಪಿಸಿದರು.

ಅರುಣ್ ಕುಟುಂಬದ ಸದಸ್ಯರಿಗೆ ಸರ್ಕಾರಿ ಕೆಲಸ ಮತ್ತು ₹40 ಲಕ್ಷ ಪರಿಹಾರ ನೀಡುವ ಜತೆಗೆ, ಅವರ ಸಾವಿನ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಇಲ್ಲಿನ ಜಗದೀಶಪುರ ಪೊಲೀಸ್‌ ಠಾಣೆಯಿಂದ ₹25 ಲಕ್ಷ ಕದ್ದ ಆರೋಪದ ಮೇಲೆ ನರವಾರ್‌ ಆರೋಪಿಯಾಗಿದ್ದು, ಅಕ್ಟೋಬರ್ 19 ರಂದು ವಿಚಾರಣೆ ವೇಳೆ ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಜೆಪಿಗೆ ಮತ ನೀಡದಿರಿ– ಬಿಕೆಯು

ವಿವಾದಾತ್ಮಕ ಕೃಷಿ ಕಾನೂನುಗಳಿಗಾಗಿ ಬಿಜೆಪಿ ಸರ್ಕಾರ ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ ಟಿಕಾಯತ್‌, ‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡದಂತೆ ರೈತರನ್ನು ಒತ್ತಾಯಿಸುವೆ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಬಿಜೆಪಿಯನ್ನು ವಿರೋಧಿಸಲಿದೆ’ ಎಂದು ತಿಳಿಸಿದರು.

‘ನಾವು ನಮ್ಮ ಅಭ್ಯರ್ಥಿಗಳನ್ನು ನಿಲ್ಲಿಸುವುದಿಲ್ಲ. ಅಲ್ಲದೇ ಯಾವುದೇ ರಾಜಕೀಯ ಪಕ್ಷವನ್ನು ಚುನಾವಣೆಯಲ್ಲಿ ಬೆಂಬಲಿಸುವುದಿಲ್ಲ’ ಎಂದು ಹೇಳಿದರು.

‘ನಾವು ಕೇಂದ್ರ ಸರ್ಕಾರದ ಜೊತೆ ಮಾತುಕತೆಗೆ ಸಿದ್ಧರಿದ್ದೇವೆ. ರೈತರ ಸಮಸ್ಯೆ ಬಗೆಹರಿಯುವವರೆಗೂ ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ಧ ಆಂದೋಲನ ನಿಲ್ಲುವುದಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT