ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸನಾತನ ಸಂಸ್ಥೆ ನಿಷೇಧ ಪ್ರಸ್ತಾವ

ಸ್ಫೋಟಕ ಸಾಗಣೆ ಪ್ರಕರಣದ ಮಾಹಿತಿ ಕೇಂದ್ರಕ್ಕೆ ಸಲ್ಲಿಸಲಿರುವ ಮಹಾರಾಷ್ಟ್ರ
Last Updated 29 ಆಗಸ್ಟ್ 2018, 16:34 IST
ಅಕ್ಷರ ಗಾತ್ರ

ಮುಂಬೈ (‍ಪಿಟಿಐ): ಸನಾತನ ಸಂಸ್ಥೆ ನಿಷೇಧಿಸುವಂತೆ ಮಹಾರಾಷ್ಟ್ರ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಿದೆ ಎಂದು ಬುಧವಾರ ಪೊಲೀಸ್‌ ಉನ್ನತ ಅಧಿಕಾರಿಗಳು ಹೇಳಿದ್ದಾರೆ.

ಸ್ಫೋಟಕ ವಸ್ತುಗಳನ್ನು ಸಾಗಿಸುತ್ತಿದ್ದ ಪ್ರಕರಣದಲ್ಲಿ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್‌) ಇತ್ತೀಚೆಗೆ ಐವರು ಆರೋಪಿಗಳನ್ನು ಬಂಧಿಸಿತ್ತು. ಇವರೆಲ್ಲರೂ ಬಲಪಂಥೀಯ ಸಂಘಟನೆಗಳಾದ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿ (ಎಚ್‌ಜೆಎಸ್‌) ಜತೆಗೆ ಸಂಪರ್ಕ ಹೊಂದಿರುವುದು ತನಿಖೆಯಿಂದ ಪತ್ತೆಯಾಗಿದೆ.

ಆರೋಪಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹೊಂದಿರುವ ಖಾತೆಗಳಲ್ಲಿನ ಚಟುವಟಿಕೆಗಳೂ ಬಲ ಪಂಥೀಯ ಸಂಘಟನೆಗಳ ಜತೆಗಿನ ನಂಟನ್ನು ದೃಢಪಡಿಸಿವೆ. ತನಿಖಾ ಸಂಸ್ಥೆಗಳು ಸಾಕ್ಷ್ಯಗಳನ್ನು ಕಲೆ ಹಾಕುತ್ತಿವೆ. ಈ ಪ್ರಕರಣದ ಸಮಗ್ರ ವರದಿಯನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ಸಲ್ಲಿಸಲಾಗುವುದು ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

‘ಸನಾತನ ಸಂಸ್ಥೆ ನಿಷೇಧಿಸುವಂತೆ 2015ರಲ್ಲೇ ರಾಜ್ಯ ಸರ್ಕಾರವು ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಈಗ ಅದಕ್ಕೆ ಪೂರಕವಾಗಿ, ಬಾಂಬ್‌ ಸ್ಫೋಟ ಸಂಚಿನ ಪ್ರಕರಣದ ಮಾಹಿತಿಯನ್ನು ಸಚಿವಾಲಯಕ್ಕೆ ಕಳುಹಿಸುವ ನಿರ್ಧಾರ ಮಾಡಿದ್ದೇವೆ. ಎಟಿಎಸ್‌, ಆರೋಪಿಗಳ ವಿರುದ್ಧ ಅಕ್ರಮ ಚಟುವಟಿಕೆ ನಿಯಂತ್ರಣ ಕಾಯ್ದೆ (ಯುಎಪಿಎ) ಅಡಿ ಪ್ರಕರಣ ದಾಖಲಿಸಿರುವುದರಿಂದ, ಪ್ರಕರಣದ ವಸ್ತುಸ್ಥಿತಿ ವರದಿಯನ್ನು 24 ತಾಸಿನೊಳಗೆ ಕೇಂದ್ರ ಗೃಹ ಸಚಿವಾಲಯಕ್ಕೆ ಸಲ್ಲಿಸಬೇಕಿದೆ’ ಎಂದು ಪೊಲೀಸ್‌ ಅಧಿಕಾರಿ ಹೇಳಿದ್ದಾರೆ.

ಮಹಾರಾಷ್ಟ್ರದ ನಲ್ಲೊಸಪರಾ. ಪುಣೆ, ಔರಂಗಾಬಾದ್‌, ಸೊಲ್ಲಾಪುರ ಹಾಗೂ ಇತರೆಡೆಗಳಲ್ಲಿ ಎಟಿಎಸ್‌ ದಾಳಿ ನಡೆಸಿ, ಆರೋಪಿಗಳಿಂದ 7.65 ಎಂ.ಎಂ ಪಿಸ್ತೂಲ್‌, ಸುಧಾರಿತ ಸ್ಫೋಟಕ ಉಪಕರಣ (ಐಇಡಿ), ಭಾರೀ ಪ್ರಮಾಣದ ಸ್ಫೋಟಕ ವಸ್ತು ಹಾಗೂ ಶಸ್ತ್ರಾಸ್ತಗಳನ್ನು ವಶಪಡಿಸಿಕೊಂಡಿತ್ತು. ಪ್ರಕರಣ ಸಂಬಂಧ ವೈಭವ್‌ ರಾವತ್‌, ಶರದ್‌ ಕಳಾಸ್ಕರ್‌, ಸುಧನ್ವ ಗೋಂಧಳೇಕರ್‌, ಶ್ರೀಕಾಂತ್‌ ಪಂಗಾರ್ಕರ್‌, ಅವಿನಾಶ್‌ ಪವಾರ್‌ ಎಂಬುವವರನ್ನು ಎಟಿಎಸ್‌ ಬಂಧಿಸಿತ್ತು. ಈ ಆರೋಪಿಗಳು, ವಿಚಾರವಾದಿಗಳ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎನ್ನುವ ಆರೋಪ ಎದುರಿಸುತ್ತಿದ್ದಾರೆ.

ಆದರೆ, ಇವರನ್ನು ತಮ್ಮ ಸಂಸ್ಥೆಯ ಸದಸ್ಯರಲ್ಲವೆಂದು ಸನಾತನ ಸಂಸ್ಥೆ ವಾದಿಸಿದೆ. ಅಮಾಯಕರನ್ನು ಬಂಧಿಸಲಾಗಿದ್ದು, ಇವರೆಲ್ಲರನ್ನೂ ಬಿಡುಗಡೆಗಾಗಿ ಒತ್ತಾಯಿಸಿ ರ‍್ಯಾಲಿ, ಮೆರವಣಿಗೆಯನ್ನೂ ಸಂಸ್ಥೆ ನಡೆಸಿದೆ.

ಸನಾತನ ಸಂಸ್ಥೆ ವಕ್ತಾರ ಚೇತನ್‌ ರಾಜಹಂಸ್‌, ಕೆಲವು ಪ್ರಗತಿಪರರು ಸೇರಿದಂತೆ ಕಾಂಗ್ರೆಸ್‌ ಮತ್ತು ಎಡ ಪಕ್ಷಗಳು ಸಂಸ್ಥೆಯ ವಿರುದ್ಧ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ ಎಂದು ಇತ್ತೀಚೆಗಷ್ಟೇ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT