ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಸನಾತನ ಧರ್ಮ' ಡೆಂಗಿ ಇದ್ದಂತೆ; ನಿರ್ಮೂಲನೆ ಮಾಡಬೇಕು: ಸ್ಟಾಲಿನ್ ಪುತ್ರ ಉದಯನಿಧಿ

Published 3 ಸೆಪ್ಟೆಂಬರ್ 2023, 3:23 IST
Last Updated 3 ಸೆಪ್ಟೆಂಬರ್ 2023, 3:23 IST
ಅಕ್ಷರ ಗಾತ್ರ

ಚೆನ್ನೈ: ‘ಸನಾತನ ಧರ್ಮವು ಸಮಾನತೆ, ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ. ಇದು ಕೊರೊನಾ, ಡೆಂಗಿ, ಮಲೇರಿಯಾಕ್ಕೆ ಸಮಾನವಾದುದು’ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಪುತ್ರ, ಸಚಿವ ಉದಯನಿಧಿ ಸ್ಟಾಲಿನ್‌ ಎಂದು ಟೀಕಿಸಿದ್ದಾರೆ.

‘ಸನಾತನ ಧರ್ಮ ನಿರ್ಮೂಲನೆ ಮಾಡಬೇಕು’ ಎಂದೂ ಅವರು ಕರೆ ನೀಡಿದ್ದಾರೆ. ಈ ಹೇಳಿಕೆ ವಿವಾದಕ್ಕೆ ಆಸ್ಪದವಾಗಿದ್ದು, ಬಿಜೆಪಿಯು ಡಿಎಂಕೆ ಮತ್ತು ಅದರ ಮೈತ್ರಿಪಕ್ಷ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ತಮಿಳುನಾಡು ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ಅವರು, ಉದಯನಿಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ‘ಇದು, ‘ಇಂಡಿಯಾ’ಮೈತ್ರಿಕೂಟದ ನಿಲುವೇ’ ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ಮುಖಂಡರ ಆಕ್ಷೇಪದ ನಂತರವೂ, ‘ಆಡಿರುವ ಪ್ರತಿ ಮಾತಿಗೂ ನಾನು ಬದ್ಧನಾಗಿದ್ದೇನೆ’ ಎಂದು ಡಿಎಂಕೆ ಯುವ ಘಟಕದ ಅಧ್ಯಕ್ಷರೂ ಆಗಿರುವ ಉದಯನಿಧಿ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.

ಡಿಎಂಕೆ ಮುಖಂಡರು ಸನಾತನ ಧರ್ಮ ಕುರಿತು ಹೇಳಿಕೆಗೆ ಟೀಕೆಗೆ ಒಳಗಾಗುತ್ತಿರುವುದು ಇದೇ ಮೊದಲಲ್ಲ. ಮನುಸ್ಮೃತಿ ಮತ್ತು ಹಿಂದುತ್ವದಲ್ಲಿ ಜಾತಿ ವ್ಯವಸ್ಥೆ ಕುರಿತು ಡಿಎಂಕೆ ಸಂಸದ ಎ.ರಾಜಾ ಹೇಳಿಕೆ ಟೀಕೆಗೊಳಗಾಗಿತ್ತು.

ರಾಜ್ಯಪಾಲ ಆರ್‌.ಎನ್‌.ರವಿ ಅವರು ಸನಾತನ ಧರ್ಮವನ್ನು ಸಾರ್ವಜನಿಕ ವೇದಿಕೆಯಲ್ಲಿ ಪ್ರಚಾರ ಮಾಡುತ್ತಿದ್ದಾರೆ ಎಂದು ಡಿಎಂಕೆ ಆರೋಪಿಸಿದ್ದು, ಈ ವಿಷಯ ತಮಿಳುನಾಡು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ನಾಶಪಡಿಸಬೇಕು:

ಸನಾತನ ಧರ್ಮವನ್ನು ಕೊರೊನಾ, ಮಲೇರಿಯಾ ಜೊತೆಗೆ ಸಮೀಕರಿಸಿದ ಉದಯನಿಧಿ ಅವರು ‘ಇಂಥದನ್ನು ವಿರೋಧ ಮಾಡಬಾರದು, ಸಂಪೂರ್ಣವಾಗಿ ನಾಶಪಡಿಸಬೇಕು’ ಎಂದು ಭಾನುವಾರ ಆಕ್ರೋಶ ಹೊರಹಾಕಿದರು.

ತಮಿಳುನಾಡು ಪ್ರಗತಿಪರ ಲೇಖಕರು ಮತ್ತು ಕಲಾವಿದರ ಸಂಘದ ಸಭೆಯಲ್ಲಿ ಮಾತನಾಡಿದ ಅವರು, ‘ಸನಾತನಂ ಎಂದರೇನು? ಈ ಪದ ಸಂಸ್ಕೃತದ್ದು. ಸಮಾನತೆ, ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದುದು. ಮತ್ತೇನೂ ಇಲ್ಲ’ ಎಂದು ವ್ಯಾಖ್ಯಾನಿಸಿದರು.

‘ಸನಾತನ ಧರ್ಮ ಜಾತಿ ಆಧಾರದಲ್ಲಿ ಜನರನ್ನು ವಿಂಗಡಿಸಲಿದೆ. ಮಾಜಿ ಸಿ.ಎಂ, ಪಕ್ಷದ ಮುಖಂಡ ಎಂ.ಕರುಣಾನಿಧಿ ಅವರು ಎಲ್ಲ ವರ್ಗದವರು ಒಂದೆಡೆ ವಾಸಿಸಲು ನಾಂದಿ ಹಾಡಿದ್ದರು. ಎಲ್ಲ ವರ್ಗದವರು ಅರ್ಚಕರಾಗುವಂತೆ ಕಾನೂನು ರೂಪಿಸಿದ್ದರು. ಮುಖ್ಯಮಂತ್ರಿಯವರು (ಸ್ಟಾಲಿನ್) ಅರ್ಚಕ ತರಬೇತಿ ಪಡೆದವರನ್ನು ದೇಗುಲಗಳಿಗೆ ನೇಮಿಸಿದರು’ ಎಂದು ಹೇಳಿದರು.

‘ನಾವು ಮಕ್ಕಳಿಗೆ ಜಾಗೃತರಾಗಿಸಲು ಶಿಕ್ಷಣವನ್ನು ಒದಗಿಸುತ್ತಿದ್ದೇವೆ. ಆದರೆ, ಮಕ್ಕಳು ಶಿಕ್ಷಣ ಪಡೆಯದಂತೆ ಮತೀಯವಾದಿಗಳು ಯೋಜನೆ ರೂಪಿಸುತ್ತಿದ್ದಾರೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ನೀಟ್ ಪರೀಕ್ಷೆಯಾಗಿದೆ’ ಎಂದು ಟೀಕಿಸಿದರು.

ಬಿಜೆಪಿ ಆಕ್ರೋಶ

ಬಿಜೆಪಿ ಐಟಿ ಸೆಲ್‌ ವಿಭಾಗದ ಮುಖ್ಯಸ್ಥ ಅಮಿತ್‌ ಮಾಳವೀಯ ಅವರು ಉದಯನಿಧಿ ಸ್ಟಾಲಿನ್‌ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಪ್ರಕಟಿಸಿದ್ದಾರೆ. 

ಉದಯನಿಧಿ ಸ್ಟಾಲಿನ್‌ ಅವರ ಅಭಿಪ್ರಾಯವನ್ನು ವಿರೋಧಿಸುವ ಬದಲು ಅಭಿಪ್ರಾಯವನ್ನೇ ನಿರ್ಮೂಲನೆ ಮಾಡಬೇಕು. ಅವರು ಸನಾತನ ಧರ್ಮವನ್ನು ಅನುಸರಿಸುವ ದೇಶದ ಶೇ.80ರಷ್ಟು ಜನರ ಹತ್ಯೆಗೆ ಕರೆ ನೀಡಿದ್ದಾರೆ ಎಂದು ಅಮಿತ್‌ ಮಾಳವೀಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT