ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ: ಮುಖ್ಯ ಕಾರ್ಯದರ್ಶಿ ಅವಧಿ ವಿಸ್ತರಣೆಗೆ ಸುಪ್ರೀಂ ಕೋರ್ಟ್ ಅಸ್ತು

Published 29 ನವೆಂಬರ್ 2023, 14:40 IST
Last Updated 29 ನವೆಂಬರ್ 2023, 14:40 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ನರೇಶ್‌ ಕುಮಾರ್‌ ಅವರ ಅವಧಿಯನ್ನು ಆರು ತಿಂಗಳು ವಿಸ್ತರಣೆ ಮಾಡಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಬುಧವಾರ ಅನುಮತಿ ನೀಡಿದೆ.

ಅರ್ಜಿ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಹಾಗೂ ಮನೋಜ್‌ ಮಿಶ್ರಾ ಅವರಿದ್ದ ನ್ಯಾಯಪೀಠ, ಸದ್ಯ ಜಾರಿಯಲ್ಲಿರುವ ರಾಷ್ಟ್ರ ರಾಜಧಾನಿ ದೆಹಲಿ ಸರ್ಕಾರ (ತಿದ್ದುಪಡಿ) ಕಾಯ್ದೆ–2023, ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಯನ್ನು ನೇಮಕ ಮಾಡುವ ಅಧಿಕಾರವನ್ನು ಕೇಂದ್ರ ಸರ್ಕಾರ ನೀಡುತ್ತದೆ ಎಂದು ಹೇಳಿದೆ.

ದೆಹಲಿ ಸರ್ಕಾರ ಪರ ಹಾಜರಿದ್ದ ಹಿರಿಯ ವಕೀಲ ಎ.ಎಂ.ಸಿಂಘ್ವಿ, ‘ಮುಖ್ಯಕಾರ್ಯದರ್ಶಿ ಅವಧಿಯನ್ನು ವಿಸ್ತರಿಸುವ ನಿರ್ಧಾರ ಏಕಪಕ್ಷೀಯ ಹಾಗೂ ಸ್ಥಾಪಿತ ಪ್ರಕ್ರಿಯೆಗಳ ಉಲ್ಲಂಘನೆಯೂ ಆಗಿದೆ’ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಮಂತ್ರಿ ಪರಿಷತ್ತು ಕೈಗೊಳ್ಳುವ ನಿರ್ಧಾರಕ್ಕೆ ಲೆಫ್ಟಿನೆಂಟ್‌ ಗವರ್ನರ್ ಬದ್ಧರಾಗಿರಬೇಕು ಎಂಬುದಾಗಿ ಈ ಹಿಂದೆ ಹಲವು ಸಂದರ್ಭಗಳಲ್ಲಿ ಸುಪ್ರೀಂ ಕೋರ್ಟ್‌ ಹೇಳಿದೆ ಎಂದೂ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ರಾಷ್ಟ್ರ ರಾಜಧಾನಿ ದೆಹಲಿ ಸರ್ಕಾರ (ತಿದ್ದುಪಡಿ) ಕಾಯ್ದೆ–2023 ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿದ್ದರೂ, ಸುಪ್ರೀಂ ಕೋರ್ಟ್‌ ತಡೆ ನೀಡಿಲ್ಲ ಎಂದು ಹೇಳಿತು.

ಕೇಂದ್ರದ ಪರ ಹಾಜರಿದ್ದ ಸಾಲಿಸಿಟರ್‌ ಜನರಲ್ ತುಷಾರ್‌ ಮೆಹ್ತಾ, ವಿವಿಧ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಸೇವಾ ಅವಧಿಯನ್ನು ವಿಸ್ತರಣೆ ಮಾಡಿದ 57 ನಿದರ್ಶನಗಳಿವೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT