ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾನ ಪಿತೂರಿ ಪತ್ತೆ ಮಾಡಿ: ಸಿಬಿಐಗೆ ಸುಪ್ರೀಂಕೋರ್ಟ್‌ ಸೂಚನೆ

ಪಾನ್ಸರೆ, ದಾಭೋಲ್ಕರ್‌, ಕಲಬುರ್ಗಿ ಹಾಗೂ ಗೌರಿ ಲಂಕೇಶ್‌ ಹತ್ಯೆ
Published 18 ಆಗಸ್ಟ್ 2023, 16:22 IST
Last Updated 18 ಆಗಸ್ಟ್ 2023, 16:22 IST
ಅಕ್ಷರ ಗಾತ್ರ

ನವದೆಹಲಿ: ವಿಚಾರವಾದಿಗಳಾದ ಗೋವಿಂದ ಪಾನ್ಸರೆ, ನರೇಂದ್ರ ದಾಭೋಲ್ಕರ್‌, ಎಂ.ಎಂ.ಕಲಬುರ್ಗಿ ಹಾಗೂ ಗೌರಿ ಲಂಕೇಶ್‌ ಅವರ ಹತ್ಯೆಗಳ ನಡುವೆ ಸಮಾನ ಅಂಶಗಳಿವೆಯೇ ಎಂಬುದನ್ನು ಪತ್ತೆ ಮಾಡುವಂತೆ ಸಿಬಿಐಗೆ ಸುಪ್ರೀಂಕೋರ್ಟ್‌ ಶುಕ್ರವಾರ ಸೂಚಿಸಿದೆ.

ನ್ಯಾಯಮೂರ್ತಿಗಳಾದ ಸಂಜಯಕಿಶನ್‌ ಕೌಲ್‌ ಮತ್ತು ಸುಧಾಂಶು ಧುಲಿಯಾ ಅವರಿದ್ದ ನ್ಯಾಯಪೀಠವು, ಸಿಬಿಐ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್ ಐಶ್ವರ್ಯ ಭಾಟಿ ಅವರನ್ನು ಉದ್ದೇಶಿಸಿ ಈ ಮಾತು ಹೇಳಿತು.

ನರೇಂದ್ರ ದಾಭೋಲ್ಕರ್‌ ಪುತ್ರಿ ಮುಕ್ತಾ ದಾಭೋಲ್ಕರ್‌ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಪೀಠ ನಡೆಸಿತು.

ಇದಕ್ಕೂ ಮುನ್ನ ವಾದ ಮಂಡಿಸಿದ ಮುಕ್ತಾ ಪರ ವಕೀಲ ಆನಂದ್‌ ಗ್ರೋವರ್‌,‘ಪ್ರಕರಣದ ಮೇಲ್ವಿಚಾರಣೆ ನಡೆಸಲು ಬಾಂಬೆ ಹೈಕೋರ್ಟ್‌ ನಿರಾಕರಿಸಿದೆ’ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

‘ಈ ಪ್ರಕರಣ ಎರಡು ವಿಷಯಗಳನ್ನು ಒಳಗೊಂಡಿದೆ. ಕೋರ್ಟ್‌ನಿಂದ ಆದೇಶವಿದ್ದರೂ ಸಿಬಿಐ ತನಿಖೆಯನ್ನು ಪೂರ್ಣಗೊಳಿಸಿಲ್ಲ. ಎರಡನೆದಾಗಿ, ಪಾನ್ಸರೆ, ದಾಭೋಲ್ಕರ್‌, ಕಲಬುರ್ಗಿ ಹಾಗೂ ಗೌರಿ ಲಂಕೇಶ್‌ ಅವರ ಹತ್ಯೆಗಳ ನಡುವೆ ನಂಟಿದೆ ಎಂಬುದನ್ನು ಪ್ರಾಸಂಗಿಕ ಸಾಕ್ಷ್ಯಗಳು ಕೂಡ ಹೇಳುತ್ತವೆ’ ಎಂದರು.

‘ವಿಚಾರಣೆ ಪ್ರಗತಿಯಲ್ಲಿದ್ದು, ಹಲವಾರು ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡಿರುವ ಕಾರಣ ತನಿಖೆಯ ಮೇಲ್ವಿಚಾರಣೆ ನಡೆಸಲು ಬಾಂಬೆ ಹೈಕೋರ್ಟ್‌ ನಿರಾಕರಿಸಿದೆ’ ಎಂದು ನ್ಯಾಯಪೀಠ ಹೇಳಿತು.

ಇದಕ್ಕೆ ಪ್ರತಿಕ್ರಿಯಿಸಿದ ಗ್ರೋವರ್, ‘ತಲೆಮರೆಸಿಕೊಂಡವರನ್ನು ಇನ್ನೂ ಪತ್ತೆ ಮಾಡಿ, ಬಂಧಿಸಿಲ್ಲ. ಈ ಹತ್ಯೆಗಳ ಹಿಂದೆ ದೊಡ್ಡ ಪಿತೂರಿ ಇದೆ’ ಎಂದರು.

‘ವಕೀಲ ಗ್ರೋವರ್‌ ಹೇಳಿದಂತೆ, ಈ ನಾಲ್ವರು ವಿಚಾರವಾದಿಗಳ ಹತ್ಯೆಗಳ ನಡುವೆ ಇರಬಹುದಾದ ಸಾಮಾನ್ಯ ಪಿತೂರಿಯನ್ನು ಪತ್ತೆ ಮಾಡಬೇಕು’ ಎಂದು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಭಾಟಿ ಅವರನ್ನು ಉದ್ದೇಶಿಸಿ ನ್ಯಾಯಪೀಠ ಹೇಳಿತು.

ಪ್ರಕರಣಕ್ಕೆ ಸಂಬಂಧಿಸಿ ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸಲು ಅರ್ಜಿದಾರ ಪರ ವಕೀಲ ಗ್ರೋವರ್‌ ಅವರಿಗೆ ಎರಡು ವಾರಗಳ ಕಾಲಾವಕಾಶ ನೀಡಿ ನ್ಯಾಯಪೀಠ ಆದೇಶಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT