ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿನೋಟಿಫಿಕೇಷನ್‌ ಆದೇಶ: ರಾಜ್ಯ, ನೈಸ್‌ ಸಂಸ್ಥೆಗೆ ಸುಪ್ರೀಂಕೋರ್ಟ್‌ ನೋಟಿಸ್‌

Last Updated 26 ಫೆಬ್ರುವರಿ 2023, 15:37 IST
ಅಕ್ಷರ ಗಾತ್ರ

ನವದೆಹಲಿ: ನಂದಿ ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್‌ ಎಂಟರ್‌ಪ್ರೈಸಸ್‌ (ನೈಸ್‌) ಯೋಜನೆಯಡಿ ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಿದ್ದ 13 ಎಕರೆಗೂ ಅಧಿಕ ಜಮೀನಿನ ಡಿನೋಟಿಫಿಕೇಷನ್‌ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಹಾಗೂ ನೈಸ್‌ ಸಂಸ್ಥೆಗೆ ಸುಪ್ರೀಂ ಕೋ‌ರ್ಟ್‌ ನೋಟಿಸ್‌ ಜಾರಿಗೊಳಿಸಿದೆ.

ಸುಜಾತ ವಿಜಯ್‌ ಹಾಗೂ ಮತ್ತೊಬ್ಬರ ಪರವಾಗಿ ಬಾಲಾಜಿ ಶ್ರೀನಿವಾಸನ್‌ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ಹಾಗೂ ಎಂ.ಎಂ.ಸುಂದರೇಶ್‌ ಅವರನ್ನೊಳಗೊಂಡ ದ್ವಿಸದಸ್ಯ ನ್ಯಾಯಪೀಠ, ನೋಟಿಸ್‌ ಜಾರಿಗೊಳಿಸಿದ ದಿನದಿಂದ ಸರಿಯಾಗಿ ಆರು ವಾರಗಳೊಳಗೆ ‍ಪ್ರತಿಕ್ರಿಯೆ ಸಲ್ಲಿಸುವಂತೆ ರಾಜ್ಯ ಸರ್ಕಾರ ಹಾಗೂ ನೈಸ್‌ ಸಂಸ್ಥೆಗೆ ಸೂಚಿಸಿದೆ.

ಮುಂದಿನ ವಿಚಾರಣೆವರೆಗೂ ಜಮೀನಿನ ವಿಚಾರದಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆಯೂ ಉಭಯ ಬಣದವರಿಗೆ ನಿರ್ದೇಶಿಸಿದೆ. ವಿಚಾರಣೆಯನ್ನು ಈ ವರ್ಷದ ಆಗಸ್ಟ್‌ಗೆ ನಿಗದಿಪಡಿಸಿದೆ.

ರಾಜ್ಯ ಹೈಕೋರ್ಟ್‌ನ ಏಕಸದಸ್ಯ ನ್ಯಾಯಪೀಠವು ತಮ್ಮ ಅರ್ಜಿ ವಜಾಗೊಳಿಸಿದ್ದನ್ನು ಪ್ರಶ್ನಿಸಿ ಸುಜಾತ ಹಾಗೂ ಮತ್ತೊಬ್ಬರು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಈ ವರ್ಷದ ಜನವರಿ 3ರಂದು ಅರ್ಜಿಯ ವಿಚಾರಣೆ ನಡೆಸಿದ್ದ ಪೀಠವು ಅರ್ಜಿದಾರರ ಮನವಿ ತಿರಸ್ಕರಿಸಿತ್ತು. ವಿಭಾಗೀಯ ಪೀಠದ ಆದೇಶದ ಸಿಂಧುತ್ವ ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು.

‘2020ರ ಮೇ 19ರಂದು ಬೆಂಗಳೂರು–ಮೈಸೂರು ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್‌ ಏರಿಯಾ ಪ್ಲಾನಿಂಗ್‌ ಅಥಾರಿಟಿಗೆ ಸಂಬಂಧಿಸಿದ ಅರ್ಜಿಯೊಂದರ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌, ನೈಸ್‌ ಸಂಸ್ಥೆಯು ರಾಜ್ಯ ಸರ್ಕಾರದ ಪೂರ್ವಾನುಮತಿ ಇಲ್ಲದೆ, ಒಪ್ಪಂದ, ಯೋಜನಾ ವರದಿಯಲ್ಲಿ ಉಲ್ಲೇಖಿಸಿರುವ ಷರತ್ತುಗಳನ್ನು ಉಲ್ಲಂಘಿಸಿ ಕಾಮಗಾರಿ ನಡೆಸಲು ಸಾಧ್ಯವಿಲ್ಲ ಎಂದು ಹೇಳಿತ್ತು. ಸುಪ್ರೀಂ ಕೋರ್ಟ್‌ನ ಈ ಆದೇಶವನ್ನು ಹೈಕೋರ್ಟ್‌ ಉಲ್ಲಂಘಿಸಿದೆ’ ಎಂದು ಅರ್ಜಿದಾರರು ತಿಳಿಸಿದ್ದಾರೆ.

‘ಯೋಜನೆ ಕೈಗೊಂಡಿರುವ ಸಂಸ್ಥೆಯು ಸಲ್ಲಿಸಿದ್ದ ಗೂಗಲ್‌ ಮ್ಯಾಪ್‌ನ ಆಧಾರದಲ್ಲಿ ಹೈಕೋರ್ಟ್‌ ತೀರ್ಪು ನೀಡಿದೆ. ಆ ಮೂಲಕ ಗಂಭೀರ ಲೋಪ ಎಸಗಿದೆ’ ಎಂದೂ ಅರ್ಜಿಯಲ್ಲಿ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT