ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂಡೀಗಢ ಮೇಯರ್ ಚುನಾವಣೆ | ಮರು ಮತ ಎಣಿಕೆ: ಬಿಜೆಪಿಗೆ ಮುಖಭಂಗ

Published 20 ಫೆಬ್ರುವರಿ 2024, 16:43 IST
Last Updated 20 ಫೆಬ್ರುವರಿ 2024, 16:43 IST
ಅಕ್ಷರ ಗಾತ್ರ

ನವದೆಹಲಿ: ಎಎಪಿಯ ಕಾರ್ಪೊರೇಟರ್‌ ಕುಲದೀಪ್‌ ಕುಮಾರ್‌ ಅವರು ಚಂಡೀಗಢ ಮೇಯರ್‌ ಹುದ್ದೆಗೆ ಆಯ್ಕೆ ಆಗಿದ್ದಾರೆ ಎಂದು  ಸುಪ್ರೀಂ ಕೋರ್ಟ್‌ ಮಂಗಳವಾರ ಘೋಷಿಸಿದೆ. ಚುನಾವಣಾಧಿಕಾರಿಯಾಗಿದ್ದ ಅನಿಲ್‌ ಮಸೀಹ್‌ ಅವರು ಎಂಟು ಮತಪತ್ರಗಳನ್ನು ಉದ್ದೇಶಪೂರ್ವಕವಾಗಿ ವಿರೂಪಗೊಳಿಸಿದ್ದಾರೆ ಎಂದು ಕೋರ್ಟ್‌ ಹೇಳಿದೆ. ಚುನಾವಣಾ ಪ್ರಜಾತಂತ್ರದ ಮೂಲಭೂತ ಜನಾದೇಶವು ಜಾರಿಯಾಗುವಂತೆ ನೋಡಿಕೊಳ್ಳಲು ಇಂತಹ ಅಸಾಧಾರಣ ಸನ್ನಿವೇಶಗಳಲ್ಲಿ ನ್ಯಾಯಾಲಯದ ಮಧ್ಯಪ್ರವೇಶ ಅಗತ್ಯ ಎಂದು ನ್ಯಾಯಾಲಯವು ಅಭಿ‍ಪ್ರಾಯಪಟ್ಟಿದೆ. 

ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಮತ್ತು ಮನೋಜ್‌ ಮಿಶ್ರಾ ಅವರಿದ್ದ ಪೀಠವು ಸಂವಿಧಾನವು 142ನೇ ವಿಧಿಯ ಅಡಿಯಲ್ಲಿ ನೀಡಿರುವ ಪರಮಾಧಿಕಾರವನ್ನು ಬಳಸಿಕೊಂಡಿದೆ. ಮೇಯರ್‌ ಚುನಾವಣೆಯ ಫಲಿತಾಂಶವನ್ನು ರದ್ದುಪಡಿಸಿದೆ. ಜನವರಿ 30ರಂದು ನಡೆದ ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮನೋಜ್‌ ಸೋನ್‌ಕರ್‌ 16 ಮತ ಪಡೆದು ಆಯ್ಕೆಯಾಗಿದ್ದಾರೆ ಎಂದು ಘೋಷಿಸಲಾಗಿತ್ತು. ಎಎಪಿ ಅಭ್ಯರ್ಥಿ 12 ಮತ ಪಡೆದಿದ್ದರೆ, 8 ಮತಗಳನ್ನು ತಿರಸ್ಕೃತಗೊಳಿಸಲಾಗಿತ್ತು. ಎಎಪಿ ಮತ್ತು ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡಿದ್ದವು.

ಮತ ಎಣಿಕೆಯ ವಿಡಿಯೊವನ್ನು ನ್ಯಾಯಾಲಯದಲ್ಲಿ ನೋಡಲಾಯಿತು. ವಿರೂಪಗೊಂಡ ಮತಪತ್ರಗಳನ್ನು ನ್ಯಾಯಮೂರ್ತಿಗಳು ಪರಿಶೀಲಿಸಿದರು. ಅನಿಲ್‌ ಮಸೀಹ್‌ ಅವರು ಮೇಯರ್‌ ಚುನಾವಣೆಯ ಮತದಾನದ ಪ್ರಕ್ರಿಯೆಯನ್ನು ಕಾನೂನುಬಾಹಿರವಾಗಿ ತಿರುಚಿದ್ದಾರೆ ಎಂದು ನ್ಯಾಯಪೀಠವು ತರಾಟೆಗೆ ತೆಗೆದುಕೊಂಡಿದೆ. ಅವರ ಮೇಲೆ ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್‌ 340ರ ಅಡಿಯಲ್ಲಿ ಕ್ರಮ ಕೈಗೊಳ್ಳಲು ಕಾರಣ ಕೇಳಿ ನೋಟಿಸ್‌ ನೀಡಿ ಎಂದು ಸೂಚಿಸಿದೆ. 

ಮಸೀಹ್‌ ಅವರು ನಾಮನಿರ್ದೇಶಿತ ಕಾರ್ಪೊರೇಟರ್‌ ಆಗಿದ್ದಾರೆ. ಇವರು ಬಿಜೆಪಿಯವರು. 

ಚುನಾವಣಾಧಿಕಾರಿಯಾಗಿ ಅವರು ನಡೆದುಕೊಂಡ ರೀತಿಯು ಗಂಭೀರ ದುರ್ವರ್ತನೆ ಎಂಬುದು ಸ್ಪಷ್ಟವಾಗಿ ಎದ್ದುಕಾಣುತ್ತದೆ ಎಂದು ಪೀಠ ಹೇಳಿದೆ.

ನ್ಯಾಯಾಲಯದಲ್ಲಿ ಮಸೀಹ್‌ ಅವರು ಪ್ರಮಾಣ ಮಾಡಿ ನೀಡಿದ ಹೇಳಿಕೆ ಕೂಡ ಸುಳ್ಳು. ಈ ತಪ್ಪಿಗೂ  ಅವರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದೂ ನ್ಯಾಯಪೀಠ ಹೇಳಿದೆ.

‘ಕುಲದೀಪ್‌ ಕುಮಾರ್‌ ಸಲ್ಲಿಸಿದ ಅರ್ಜಿಯ ಆಧಾರದಲ್ಲಿ ನ್ಯಾಯಪೀಠವು ವಿವರವಾದ ಆದೇಶ ನೀಡಿದೆ. ‘ಚುನಾವಣಾಧಿಕಾರಿಯು ಮತ ಎಣಿಕೆಯನ್ನು ದಾಖಲಿಸಿಕೊಳ್ಳುವ ಹಂತದಲ್ಲಿ ಮಾತ್ರ ಲೋಪ ಸಂಭವಿಸಿದೆ. ಹಾಗಾಗಿ, ಇಡೀ ಚುನಾವಣಾ ಪ್ರಕ್ರಿಯೆಯನ್ನು ಕೈಬಿಡುವುದು ಸರಿ ಎನಿಸದು. ಇಡೀ ಚುನಾವಣಾ ಪ್ರಕ್ರಿಯೆಯನ್ನು ರದ್ದುಪಡಿಸಿದರೆ ಮೂಲಭೂತ ಪ್ರಜಾಸತ್ತಾತ್ಮಕ ತತ್ವಗಳ ವಿನಾಶವು ಇನ್ನಷ್ಟು ತೀವ್ರಗೊಂಡಂತಾಗುತ್ತದೆ. ಚುನಾವಣಾಧಿಕಾರಿ ಮಸೀಹ್‌ ಅವರು ನಡವಳಿಕೆಯಿಂದ ಹೀಗೆಯೇ ಆಗಿದೆ’ ಎಂದು ನ್ಯಾಯಪೀಠವು ಹೇಳಿದೆ. 

ಮತಪತ್ರಗಳನ್ನು ತಿರುಚಲಾಗಿದೆ ಎಂಬ ವಿಚಾರದ ಕುರಿತು ದೊಡ್ಡ ಹುಯಿಲೆದ್ದ ಬಳಿಕ, ಗೆದ್ದಿದ್ದಾರೆ ಎಂದು ಘೋಷಣೆ ಮಾಡಲಾಗಿದ್ದ ಬಿಜೆಪಿ ಅಭ್ಯರ್ಥಿ ಮನೋಜ್‌ ಕುಮಾರ್‌ ಸೊನ್‌ಕರ್‌ ಅವರು ರಾಜೀನಾಮೆ ನೀಡಿದ್ದಾರೆ. ಆ ಬಳಿಕ, ಎಎಪಿಯ ಮೂವರು ಕಾರ್ಪೊರೇಟರ್‌ಗಳು ಬಿಜೆಪಿ ಸೇರಿದ್ದಾರೆ. ಕಾರ್ಪೊರೇಟರ್‌ಗಳ ಖರೀದಿ ಆರೋಪವೂ ಆಗ ಕೇಳಿ ಬಂದಿತ್ತು. 

ಪ್ರಜಾಸತ್ತಾತ್ಮಕ ತತ್ವಗಳನ್ನು ಸಂರಕ್ಷಿಸುವುದು ಮತ್ತು ಚುನಾವಣಾ ಪ್ರಜಾತಂತ್ರವನ್ನು ಹಿಮ್ಮೆಟ್ಟಿಸುವ ಪ್ರಯತ್ನ ನಡೆದಾಗ ಅದನ್ನು ತಡೆಯುವುದು ನ್ಯಾಯಾಲಯದ ಕರ್ತವ್ಯವಾಗಿದೆ
ಸುಪ್ರೀಂ ಕೋರ್ಟ್‌ ನ್ಯಾಯಪೀಠ
ಪ್ರಜಾಪ್ರಭುತ್ವವನ್ನು ರಕ್ಷಿಸಿದೆ
ಸುಪ್ರೀಂ ಕೋರ್ಟ್‌ನ ಈ ತೀರ್ಪು ಚುನಾವಣಾ ಅಕ್ರಮದಲ್ಲಿ ತೊಡಗಿರುವ ‘ನಿರಂಕುಶ ಪ್ರಭುತ್ವ’ದ ಬಿಜೆಪಿಯಿಂದ ಪ್ರಜಾಪ್ರಭುತ್ವವನ್ನು ರಕ್ಷಿಸಿದೆ. ಚಂಡೀಗಢ ಮೇಯರ್‌ ಆಯ್ಕೆ ಚುನಾವಣೆಯು ಪ್ರಜಾಪ್ರಭುತ್ವವನ್ನು ನಾಶಪಡಿಸುವ ಮೋದಿ–ಶಾ ಅವರ ಸಂಚಿನ ತುಣುಕಷ್ಟೆ. ಪ್ರಜಾಪ್ರಭುತ್ವ ಕವಲುದಾರಿಯಲ್ಲಿದೆ. ಸಂವಿಧಾನವನ್ನು ರಕ್ಷಿಸಲು ಎಲ್ಲ ಭಾರತೀಯರು ಒಟ್ಟಾಗಿ ಹೋರಾಡಬೇಕಿದೆ  ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷ ‘ಸಂಕಷ್ಟದ ಸಂದರ್ಭ’ದಲ್ಲಿ ಸುಪ್ರಿಂ ಕೋರ್ಟ್ ಪ್ರಜಾಪ್ರಭುತ್ವವನ್ನು ರಕ್ಷಿಸಿದೆ. ಇದೊಂದು ಐತಿಹಾಸಿಕ ತೀರ್ಪು. ವಿರೋಧಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ಗೆ ದೊರೆತ ಅತಿದೊಡ್ಡ ಗೆಲುವು. ‘ಇಂಡಿಯಾ’ ಮೈತ್ರಿಪಕ್ಷಗಳು ಒಟ್ಟಾಗಿದ್ದು ಚುನಾವಣೆ ಎದುರಿಸಿದರೆ ಬಿಜೆಪಿಯನ್ನು ಸೋಲಿಸಬಹುದು ಎಂಬ ಸಂದೇಶವನ್ನು ಈ ಚುನಾವಣೆಯು ಸಾರಿದೆ ಅರವಿಂದ ಕೇಜ್ರಿವಾಲ್ ಎಎಪಿ ಸಂಚಾಲಕ ದೆಹಲಿ ಮುಖ್ಯಮಂತ್ರಿ ಸತ್ಯಕ್ಕೆ ಕಡೆಗೂ ಗೆಲುವು ಲಭಿಸಿದೆ. ಈ ತೀರ್ಪು ಪ್ರಜಾಪ್ರಭುತ್ವ ಹಾಗೂ ಚಂಡೀಗಢ ನಿವಾಸಿಗಳಿಗೆ ದೊರೆತಿರುವ ಗೆಲುವಾಗಿದೆ. ಕುಲದೀಪ್‌ ಕುಮಾರ್ ಮೇಯರ್‌ ಆಗಿ ಘೋಷಿಸಲಾದ ಎಎಪಿ ಅಭ್ಯರ್ಥಿ
ಎರಡನೇ ಹಿನ್ನಡೆ
ಈ ಬೆಳವಣಿಗೆಯು ಕೇಂದ್ರದ ಆಡಳಿತಾರೂಢ ಎನ್‌ಡಿಎ ನೇತೃತ್ವ ವಹಿಸಿರುವ ಬಿಜೆಪಿಗೆ ಹಿನ್ನಡೆ ಎಂದು ಹೇಳಲಾಗಿದೆ. ಅಲ್ಲದೆ ವಿರೋಧಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ಕ್ಕೆ ಇದು ಮೊದಲ ಚುನಾವಣಾ ಗೆಲುವು ಆಗಿದೆ. ಸುಪ್ರೀಂ ಕೋರ್ಟ್‌ನಲ್ಲಿ ಒಂದು ವಾರದಲ್ಲಿ ಬಿಜೆಪಿಗೆ ಆಗಿರುವ ಎರಡನೇ ಹಿನ್ನಡೆ ಇದು. ಕಳೆದ ವಾರ ಸುಪ್ರೀಂ ಕೋರ್ಟ್‌ನ ಐವರು ಸದಸ್ಯರ ಪೀಠವು ಪಕ್ಷಗಳು ದೇಣಿಗೆ ಪಡೆಯಲು ನೆರವಾಗುವ ಚುನಾವಣಾ ಬಾಂಡ್‌ಗಳನ್ನು ರದ್ದುಪಡಿಸಿ ತೀರ್ಪು ನೀಡಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT