ನವದೆಹಲಿ: ಅಂತಿಮ ವರ್ಷದ ಕಾನೂನು ಪದವಿ ವಿದ್ಯಾರ್ಥಿಗಳನ್ನು ಈ ವರ್ಷದ ಅಖಿಲ ಭಾರತ ವಕೀಲರ ಪರೀಕ್ಷೆಗೆ (ಎಐಬಿಇ) ಹಾಜರಾಗಲು ಅವಕಾಶ ನೀಡುವಂತೆ ಬಾರ್ ಕೌನ್ಸಿಲ್ ಆಫ್ ಇಂಡಿಯಾಗೆ (ಬಿಸಿಎ) ಸುಪ್ರೀಂ ಕೋರ್ಟ್ ಶುಕ್ರವಾರ ನಿರ್ದೇಶನ ನೀಡಿದೆ.
ಅಂತಿಮ ವರ್ಷದ ಎಲ್‌ಎಲ್‌ಬಿ ವಿದ್ಯಾರ್ಥಿಗಳಿಗೆ ಈ ವರ್ಷ ಎಐಬಿಇ ಪರೀಕ್ಷೆಯನ್ನು ತೆಗೆದುಕೊಳ್ಳಲು ಅವಕಾಶ ನೀಡದಿದ್ದರೆ ಅವರ ಒಂದು ವರ್ಷವು ವ್ಯರ್ಥವಾಗುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠವು ಹೇಳಿದೆ. ಕಾನೂನು ಪದವೀಧರರು ವಕೀಲರಾಗಿ ಅರ್ಹತೆ ಪಡೆಯಲು ಎಐಬಿಇ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಬೇಕು.
ಸಿಜೆಐ ನೇತೃತ್ವದ ಪೀಠವು, ದೆಹಲಿ ವಿಶ್ವವಿದ್ಯಾಲಯದ ನಿಲಯ್ ರಾಯ್ ಸೇರಿದಂತೆ ಒಂಬತ್ತು ಎಲ್‌ಎಲ್‌ಬಿ ವಿದ್ಯಾರ್ಥಿಗಳ ಪರ ಹಾಜರಿದ್ದ ವಕೀಲರಾದ ಎ. ವೇಲನ್ ಮತ್ತು ನವಪ್ರೀತ್ ಕೌರ್ ಅವರ ವಾದವನ್ನು ಆಲಿಸಿದ ಬಳಿಕ ಈ ವರ್ಷ ನವೆಂಬರ್ 24ರಂದು ನಡೆಯುವ ಎಐಬಿಇ ಪರೀಕ್ಷೆಗೆ ಹಾಜರಾಗಲು ಅವಕಾಶ ಮಾಡಿಕೊಟ್ಟಿತು.
ತನ್ನ ಮಧ್ಯಂತರ ನಿರ್ದೇಶನವು ಈ ವರ್ಷದ (ನವೆಂಬರ್ 24ರ) ಪರೀಕ್ಷೆಗೆ ಮಾತ್ರ ಅನ್ವಯವಾಗಲಿದೆ ಎಂದು ಪೀಠವು ಸ್ಪಷ್ಟಪಡಿಸಿತು. ಇಂತಹ ನಿರ್ದೇಶನ ನೀಡದಿದ್ದರೆ, ಅಂತಿಮ ವರ್ಷದ ವಿದ್ಯಾರ್ಥಿಗಳು ಅನ್ಯಾಯ ಎದುರಿಸಬೇಕಾಗುತ್ತದೆ ಎಂದಿತು.
2023ರಲ್ಲಿ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠದ ತೀರ್ಪಿನ ಅನುಸಾರವಾಗಿ ಎಐಬಿಇ ಪರೀಕ್ಷೆಗೆ ಬಿಸಿಐ ಇನ್ನೂ ನಿಯಮಗಳನ್ನು ರೂಪಿಸಿದೇ ಇರುವುದಕ್ಕೆ ಪೀಠ ಅಸಮಾಧಾನ ವ್ಯಕ್ತಪಡಿಸಿತು. ಎಐಬಿಎ ಪರೀಕ್ಷೆಯನ್ನು ನಡೆಸುವ ಪೂರ್ಣ ಅಧಿಕಾರವನ್ನು ಬಿಸಿಐ ಹೊಂದಿದೆ ಎಂದು ಸುಪ್ರೀಂ ಕೋರ್ಟ್ ಕಳೆದ ವರ್ಷ ಫೆಬ್ರುವರಿ 10ರಂದು ನೀಡಿದ್ದ ತೀರ್ಪಿನಲ್ಲಿ ತಿಳಿಸಿತ್ತು.